ರಾಜ್ಯದಲ್ಲಿ ಒಂದೇ ದಿನ ದಾಖಲೆಯ 8818 ಕೇಸ್, 6629 ಜನ ಡಿಸ್ಚಾರ್ಜ್!
8818 ಕೇಸ್!| ರಾಜ್ಯದಲ್ಲಿ ಮತ್ತೆ ದಾಖಲೆ| ಬೆಂಗ್ಳೂರಲ್ಲೂ ದಾಖಲೆಯ 3485 ಕೇಸ್| ಮತ್ತೆ 114 ಬಲಿ| 6629 ಜನ ಡಿಸ್ಚಾಜ್‌ರ್
ಬೆಂಗಳೂರು(ಆ.16): ರಾಜ್ಯದಲ್ಲಿ ಆಗಸ್ಟ್ ತಿಂಗಳಲ್ಲಿ ಕೇವಲ ಮೂರು ಬಾರಿ ಏಳು ಸಾವಿರ ಗಡಿ ದಾಟಿದ್ದ ಕೊರೋನಾ ಸೋಂಕು ಶನಿವಾರ ದಿಢೀರನೆ ಒಂಭತ್ತು ಸಾವಿರದ ಗಡಿ ಸಮೀಪಿಸಿದೆ. ಶನಿವಾರ ಒಂದೇ ದಿನ ದಾಖಲೆಯ 8,818 ಮಂದಿಗೆ ಸೋಂಕು ದೃಢಪಟ್ಟಿದ್ದು, 114 ಮಂದಿ ಸೋಂಕಿತರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಶನಿವಾರ ರಾಜ್ಯದಲ್ಲಿ 54,806 ಪರೀಕ್ಷೆ ನಡೆಸಲಾಗಿದೆ. ಈ ಪೈಕಿ ಶನಿವಾರ ಬೆಂಗಳೂರಿನಲ್ಲೇ ದಾಖಲೆಯ 3,495 ಮಂದಿಗೆ ಒಂದೇ ದಿನ ಸೋಂಕು ದೃಢಪಟ್ಟಿದ್ದು, 35 ಮಂದಿ ಸಾವನ್ನಪ್ಪಿದ್ದಾರೆ.
ಬೆಂಗಳೂರಲ್ಲಿ ಮೊದಲ ಬಾರಿ ದಾಖಲೆ ಪ್ರಮಾಣದ ಸೋಂಕಿತರು ಪತ್ತೆ
ರಾಜ್ಯದಲ್ಲಿ ಆ. 8, 12 ಮತ್ತು 14ರಂದು ಏಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿತ್ತು. ಆ.14ರಂದು 7,908 ಮಂದಿಗೆ ಸೋಂಕು ದೃಢಪಟ್ಟಿದ್ದು ಹಾಗೂ ಕಳೆದ ಜುಲೈ 17ರಂದು ಒಂದೇ ದಿನ 115 ಮಂದಿ ಸಾವನ್ನಪ್ಪಿದ್ದೇ ಇದುವರೆಗೆ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಏಕದಿನದ ದಾಖಲೆಯಾಗಿತ್ತು.
ಶನಿವಾರ 8 ಸಾವಿರ ಸಂಖ್ಯೆ ದಾಟಿ ಹೊಸ ದಾಖಲೆ ಸೃಷ್ಟಿಸಿದರೆ, ಸಾವಿನ ಪ್ರಕರಣಗಳು ಈ ವರೆಗೆ ಒಂದೇ ದಿನ ಸಂಭವಿಸಿದ 2ನೇ ಅತಿ ಹೆಚ್ಚು ಸಾವಿನ ದಾಖಲೆಯಾಗಿದೆ. ಇದರ ನಡುವೆ ಶನಿವಾರ ಸೋಂಕಿನಿಂದ ಗುಣಮುಖರಾದ 6629 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಇದರೊಂದಿಗೆ ರಾಜ್ಯದಲ್ಲಿ ಇದುವರೆಗಿನ ಒಟ್ಟು ಸೋಂಕಿತರ ಸಂಖ್ಯೆ 2,19,926ಕ್ಕೆ, ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3,831ಕ್ಕೆ (ಎಂಟು ಅನ್ಯ ಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ. ಅದೇ ರೀತಿ ಈವರೆಗೂ ಗುಣಮುಖರಾದವರ ಸಂಖ್ಯೆ 1,34,811 ತಲುಪಿದೆ. ಉಳಿದ 81,276 ಮಂದಿ ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 716 ಮಂದಿಯ ಆರೋಗ್ಯ ಗಂಭೀರವಾಗಿದ್ದು ಅವರೆಲ್ಲಗಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕೊರೋನಾ ಭೀತಿ ಮಧ್ಯೆ ಕಂಟೈನ್ಮೆಂಟ್ ಹೆಸರಲ್ಲಿ ಕೋಟ್ಯಂತರ ರು. ಅಕ್ರಮ?
ಬೆಂಗಳೂರಲ್ಲಿ ಮತ್ತೆ ಸೋಂಕು ದಾಖಲೆ:
ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮೂರು ಸಾವಿರ ಸಂಖ್ಯೆ ದಾಟಿರುವ ಕೋರೋನಾ ಸೋಂಕು ದಾಖಲೆಯ 3,495 ಮಂದಿಗೆ ಶನಿವಾರ ಸೋಂಕು ದೃಢಪಟ್ಟಿದೆ. ಇದರಿಂದ ನಗರದಲ್ಲಿ ಈ ವರೆಗೆ ಸೋಂಕು ದೃಢಪಟ್ಟವರ ಸಂಖ್ಯೆ 87,680ಕ್ಕೆ, ಇದರಲ್ಲಿ ಶನಿವಾರ ಬಿಡುಗಡೆಯಾದವರ ಸಂಖ್ಯೆ 51,426ಕ್ಕೆ (ಶನಿವಾರ ಬಿಡುಗಡೆಯಾದ 2034 ಮಂದಿ ಸೇರಿ) ಏರಿಕೆಯಾಗಿದೆ. ಉಳಿದ 34,858 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿದ್ದಾರೆ.
ಉಳಿದಂತೆ ಶನಿವಾರ ಬಳ್ಳಾರಿಯಲ್ಲಿ 759, ಮೈಸೂರು 635, ಬೆಳಗಾವಿ 358, ದಾವಣಗೆರೆ 327, ದಕ್ಷಿಣ ಕನ್ನಡ 271, ಉಡುಪಿ 241, ಧಾರವಾಡ 239, ವಿಜಯಪುರ 232, ಕಲಬುರಗಿ 189, ಕೊಪ್ಪಳ 178, ಬಾಗಲಕೋಟೆ 168, ತುಮಕೂರು 161, ರಾಯಚೂರು 155, ಹಾಸನ 154, ಬೆಂಗಳೂರು ಗ್ರಾಮಾಂತರ 152, ಗದಗ 142, ಶಿವಮೊಗ್ಗ 133, ಹಾವೇರಿ 116, ಬೀದರ್ 113, ಮಂಡ್ಯ 84, ಚಿಕ್ಕಮಗಳೂರು 79, ಉತ್ತರ ಕನ್ನಡ 75, ಯಾದಗಿರಿ 64, ಚಾಮರಾಜನಗರ 64, ಕೋಲಾರ 55, ರಾಮನಗರ 53, ಕೊಡಗು 48, ಚಿಕ್ಕಬಳ್ಳಾಪುರ 44 ಮತ್ತು ಚಿತ್ರದುರ್ಗದಲ್ಲಿ 34 ಮಂದಿಗೆ ಸೋಂಕು ದೃಢಪಟ್ಟಿದೆ.