ಬೆಂಗಳೂರು(ಜು.03):  ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಜೂನ್‌ ತಿಂಗಳಿನಲ್ಲಿ 4,198 ಮಂದಿಗೆ ಸೋಂಕು ತಗುಲಿದೆ. ಬರೋಬ್ಬರಿ 85 ಮಂದಿ ಮೃತಪಟ್ಟಿದ್ದಾರೆ. ಆದರೆ, ಕೇವಲ 312 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಮಾ.9ರಂದು ಮೊದಲ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಅಲ್ಲಿಂದ ಈವರೆಗೆ(ಜು.1) ಒಟ್ಟು 5,290 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. 543 ಮಂದಿಗೆ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 97 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು 4,649 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ರೆ ಪಡೆಯುತ್ತಿದ್ದಾರೆ.

ಮೇ 31ಕ್ಕೆ ನಗರದಲ್ಲಿ ಕೇವಲ 357 ಮಂದಿಗೆ ಮಾತ್ರ ಸೋಂಕು ಕಾಣಿಸಿಕೊಂಡಿತ್ತು. ಆ ಪೈಕಿ 231 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇನ್ನು ಮಹಾಮಾರಿ ಸೋಂಕಿಗೆ 10 ಮಂದಿ ಮೃತಪಟ್ಟ ವರದಿಯಾಗಿತ್ತು. 115 ಮಂದಿ ಮಾತ್ರ ಆಸ್ಪತ್ರೆಯಲ್ಲಿ ಇದ್ದರು. ಆದರೆ, ಮಾ.9ರಿಂದ ಜೂ.30ರ ನಡುವೆ ಸೋಂಕಿತರ ಸಂಖ್ಯೆ 4,555ಕ್ಕೆ ಏರಿಕೆಯಾಗಿದೆ. 95 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿನಿಂದ ಗುಣಮುಖರಾಗಿ 543 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ಜೂನ್‌ ಒಂದೇ ತಿಂಗಳಲ್ಲಿ ನಗರದಲ್ಲಿ ಒಟ್ಟು 4,198 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ 85 ಮಂದಿ ಮೃತಪಟ್ಟಿದ್ದರೆ, 3,916 ಸಕ್ರಿಯ ಪ್ರಕರಣಗಳಿವೆ. ಜೂನ್‌ ಮಾಸದಲ್ಲಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿರುವವರ ಸಂಖ್ಯೆ ಮಾತ್ರ ತೀರ ಕಡಿಮೆಯಾಗಿದ್ದು, ಕೇವಲ 312 ಮಂದಿ ಗುಣಮುಖರಾಗಿದ್ದಾರೆ.

ಒಂದೇ ದಿನ 1502 ಕೇಸ್‌! 'ಮತ್ತೆ ಲಾಕ್ಡೌನ್‌ ಮಾಡಿದ್ರೆ ನೋ ಯೂಸ್: ಸೋಂಕು ನಿವಾರಣೆ ಸಾಧ್ಯವಿಲ್ಲ'..!

15 ದಿನದಲ್ಲಿ ಚಿತ್ರಣ ಬದಲು:

ಜೂನ್‌ 1 ರಿಂದ ಜೂ.15 ವರೆಗೆ ಬೆಂಗಳೂರಿನ ಪರಿಸ್ಥಿತಿ ಸಾಮಾನ್ಯವಾಗಿಯೇ ಇತ್ತು. ಆದರೆ, ಜೂ.16ರಿಂದ ನಗರದಲ್ಲಿ ಭಾರೀ ಸಂಖ್ಯೆಯ ಸೋಂಕಿತರು ಕಾಣಿಸಿಕೊಳ್ಳುವುದಕ್ಕೆ ಆರಂಭವಾಯಿತು. ಸೋಂಕಿತರು ಹಾಗೂ ಸಾವಿನ ಸಂಖ್ಯೆ ಎರಡು ಹೆಚ್ಚಾಗತೊಡಗಿತು. ಜೂ.16ಕ್ಕೆ ನಗರದ ಒಟ್ಟು ಸೋಂಕಿತರ ಸಂಖ್ಯೆ ಕೇವಲ 772 ಮಾತ್ರ ಆಗಿತ್ತು. ಆದರೆ, 15 ದಿನದಲ್ಲಿ (ಜೂ.30) ಅದು 4,555ಕ್ಕೆ ಏರಿಕೆಯಾಗಿದೆ. ಇನ್ನು ಮೃತ ಸಂಖ್ಯೆ 38ರಿಂದ 95ಕ್ಕೆ ಏರಿಕೆಯಾಗಿದೆ.

10 ದಿನದಲ್ಲಿ 3,479 ಪ್ರಕರಣ:

ಜೂನ್‌ 21ರಿಂದ ನಗರದಲ್ಲಿ ನೂರಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗುವುದಕ್ಕೆ ಆರಂಭವಾಯಿತು. ಇದೀಗ ಪ್ರತಿದಿನಕ್ಕೆ ಕನಿಷ್ಠ 500ಕ್ಕೂ ಹೆಚ್ಚು ಪ್ರಕರಣ ಪತ್ತೆಯಾಗುತ್ತಿವೆ. ಹೀಗಾಗಿ, ಕೇವಲ 10 ದಿನದಲ್ಲಿ 3,479 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರು, ನಗರದಲ್ಲಿ ಸರ್ಕಾರಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ. ಆದರೆ, ಇತರೆ ಆಸ್ಪತ್ರೆಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಹೀಗಾಗಿ, ಸಕ್ರಿಯ ಪ್ರಕರಣಗಳ ಸಂಖ್ಯೆ ಹೆಚ್ಚಿರುವಂತೆ ಭಾಸವಾಗುತ್ತಿದೆ ಎಂದು ತಿಳಿಸಿದ್ದಾರೆ.

ದಾಖಲೆ ಮುರಿದ ಸೋಂಕಿರ ಸಂಖ್ಯೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ತೀವ್ರತೆ ಇನ್ನಷ್ಟುಹೆಚ್ಚಾಗಿದ್ದು, ಗುರುವಾರ 889 ಹೊಸದಾಗಿ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿವೆ. ಇದು ಈವರೆಗೆ ಬೆಂಗಳೂರಿನಲ್ಲಿ ಕೇವಲ ಒಂದು ದಿನದಲ್ಲಿ ಪತ್ತೆಯಾದ ಅತಿ ಹೆಚ್ಚಿನ ಪ್ರಕರಣಗಳಾಗಿವೆ. ನಗರದಲ್ಲಿ ಗುರುವಾರ ಪೊಲೀಸ್‌ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ವ್ಯಾಪಾರಿಗಳು ಸೇರಿದಂತೆ ಬರೋಬ್ಬರಿ 889 ಮಂದಿಗೆ ಪತ್ತೆಯಾಗಿದೆ. ಈ ಪೈಕಿ 524 ಮಂದಿ ಪುರುಷರಾಗಿದ್ದಾರೆ, 364 ಮಂದಿ ಮಹಿಳೆಯರಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 6,179ಕ್ಕೆ ಏರಿಕೆಯಾಗಿದೆ. ಗುರುವಾರ ಆಸ್ಪತ್ರೆಯಿಂದ 30 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 573ಕ್ಕೆ ಏರಿಕೆಯಾಗಿದೆ. ಇನ್ನು ನಗರದ ಕೋವಿಡ್‌ ನಿಗದಿತ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳಲ್ಲಿ 5,505 ಜನ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಶತಕ ಮುಟ್ಟಿದ ಸಾವು

ಗುರುವಾರ ಬೆಂಗಳೂರಿನಲ್ಲಿ ಮೂರು ಮಂದಿ ಕೊರೋನಾ ಸೋಂಕಿಗೆ ಬಲಿಯಾಗುವ ಮೂಲಕ ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಗುರುವಾರ ಮೃತಪಟ್ಟಮೂರು ಮಂದಿಯ ಪೈಕಿ ಓರ್ವ ಮಹಿಳೆಗೆ 66 ವರ್ಷ ಹಾಗೂ 79 ಮತ್ತು 61 ವರ್ಷದ ಇಬ್ಬರು ಪುರುಷರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

78 ಮಂದಿ ಐಸಿಯುನಿಂದ ಹೊರಗೆ

ಕೇವಲ 24 ಗಂಟೆಯಲ್ಲಿ ನಗರದ ವಿವಿಧ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 78 ಮಂದಿಯನ್ನು ಸಾಮಾನ್ಯ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಕಳೆದ ಬುಧವಾರ 191 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಗುರುವಾರದ ವೇಳೆಗೆ 78 ಮಂದಿಯನ್ನು ತೀವ್ರ ನಿಗಾ ಘಟಕದಿಂದ ಸಾಮಾನ್ಯ ಕೊಠಡಿಗೆ ಸ್ಥಳಾಂತರಿಸಲಾಗಿದೆ. ಸದ್ಯ 113 ಮಂದಿ ಮಾತ್ರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ತಿಳಿಸಿದೆ.

ನಗರದಲ್ಲಿ ಮೊದಲ ಲೈಂಗಿಕ ಅಲ್ಪಸಂಖ್ಯಾತೆಗೆ ಸೋಂಕು

ನಗರದಲ್ಲಿ ಗುರುವಾರ ಲೈಂಗಿಕ ಅಲ್ಪಸಂಖ್ಯಾತೆಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿಗೆ ತುತ್ತಾದ ನಗರದ ಮೊದಲ ಅಲ್ಪಸಂಖ್ಯಾತೆಯಾಗಿದ್ದಾರೆ. ಸೋಂಕಿನ ಮೂಲ ಪತ್ತೆಯಾಗಿಲ್ಲ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

24 ಗಂಟೆಯಲ್ಲಿ ಹೆಚ್ಚು ಸೋಂಕಿತರು ಪತ್ತೆಯಾದ ವಾರ್ಡ್‌ಗಳು 

ಪೂರ್ವ ವಲಯದ ಶಾಂತಲಾನಗರ ವಾರ್ಡ್‌ನಲ್ಲಿ ಅತಿ ಹೆಚ್ಚು 30 ಸೋಂಕು ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಸಿಂಗಸಂದ್ರ ವಾರ್ಡ್‌ನಲ್ಲಿ 29, ಜಯನಗರ 22, ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್‌ 21, ವಿದ್ಯಾಪೀಠ 20, ಹೊಂಬೇಗೌಡ ನಗರ 18, ಸದ್ದುಗುಂಟೆ ಪಾಳ್ಯ 15, ಆರ್‌.ಆರ್‌. ನಗರ 14, ಜಯನಗರ ಪೂರ್ವ ವಾರ್ಡ್‌ 14, ಬಸವನಗುಡಿ 13 ಹಾಗೂ ಕತ್ರಿಗುಪ್ಪೆ ಮತ್ತು ಸುಧಾಮನಗರ ವಾರ್ಡ್‌ನಲ್ಲಿ ತಲಾ 12 ಪ್ರಕರಣ ಪತ್ತೆಯಾಗಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.