Covid Cases ಕರ್ನಾಟಕದಲ್ಲಿ 800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು!
- ಉಡುಪಿ ಜಿಲ್ಲೆಯಲ್ಲಿ ಗರಿಷ್ಠ ವಿದ್ಯಾರ್ಥಿಗಳಿಗೆ ಕೊರೋನಾ
- ಉಡುಪಿ ಜಿಲ್ಲೆಯಲ್ಲಿ 209, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 35 ಕೇಸ್
- ಆತಂಕದಲ್ಲಿ ರಾಜ್ಯದ ವಿದ್ಯಾರ್ಥಿಗಳು
ಬೆಂಗಳೂರು(ಜ.23): ರಾಜ್ಯದಲ್ಲಿ ಶನಿವಾರ ಕೋವಿಡ್ ಸೋಂಕಿನ(Coronavirus) ಸಂಖ್ಯೆ ಇಳಿಮುಖವಾಗಿದ್ದರೂ, ಸೋಂಕಿಗೆ ಒಳಗಾಗುತ್ತಿರುವ ವಿದ್ಯಾರ್ಥಿಗಳ(Students) ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯಾದ್ಯಂತ ಮತ್ತೆ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಉಡುಪಿ(Udupi) ಜಿಲ್ಲೆಯಲ್ಲಿ 209, ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ 35, ಕೊಡಗು ಜಿಲ್ಲೆ ನಾಪೋಕ್ಲು ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ 90 ವಿದ್ಯಾರ್ಥಿಗಳು, ಬೆಂಗಳೂರು(Bengaluru) ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ 25 ವಿದ್ಯಾರ್ಥಿಗಳು, ಓರ್ವ ಶಿಕ್ಷಕ, ಚಿತ್ರದುರ್ಗ ಜಿಲ್ಲೆಯಲ್ಲಿ 89 ಮಕ್ಕಳು, ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಿವಿಧ ಶಾಲೆಯ 156 ವಿದ್ಯಾರ್ಥಿಗಳು, ಬೀದರ್ ಜಿಲ್ಲೆಯಲ್ಲಿ 87 ಮಕ್ಕಳು, ಹಾವೇರಿ ಜಿಲ್ಲೆಯಲ್ಲಿ 20 ಮಕ್ಕಳು, ಚಾಮರಾಜನಗರ ಜಿಲ್ಲೆಯಲ್ಲಿ 79 ಮಕ್ಕಳು ಸೇರಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ.
ಐಟಿಐ ಕಾಲೇಜ್‌ಲ್ಲಿ 8ಕ್ಕೂ ಅಧಿಕ ಕೊರೋನಾ ಪಾಸಿಟಿವ್
ಹುಬ್ಬಳ್ಳಿ ವಿದ್ಯಾನಗರದಲ್ಲಿರುವ ಸರ್ಕಾರಿ ಐಟಿಐ ಕಾಲೇಜ್‌ನಲ್ಲಿ 8ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಇದು ಸಿಬ್ಬಂದಿಯಲ್ಲಿ ಆತಂಕವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಕಾಲೇಜ್‌ನ್ನು ಸೀಲ್ಡೌನ್ ಮಾಡಲು ನಿರ್ಧರಿಸಿದೆ.
Schools Reopen: ಬೆಂಗಳೂರು ಬಿಟ್ಟು ಉಳಿದೆಡೆ ಶಾಲೆಗಳು ಆರಂಭ
19 ವಿವಿಧ ವಿಷಯಗಳ ಕೋರ್ಸ್‌ಗಳು ಇಲ್ಲಿವೆ. 1000ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. 64 ಸಿಬ್ಬಂದಿ ಇದ್ದಾರೆ. 64 ಸಿಬ್ಬಂದಿ ಪೈಕಿ 8ಕ್ಕೂ ಅಧಿಕ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಎರಡು ದಿನ ಕಾಲೇಜ್‌ಗೆ ರಜೆ ಘೋಷಿಸಲಾಗಿತ್ತಂತೆ. ಇದೀಗ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮತ್ತೆ ಸೀಲ್ಡೌನ್ ಮಾಡಲು ಯೋಚಿಸಲಾಗಿದೆ. ಈ ಬಗ್ಗೆ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಜತೆಗೆ ಆರ್‌ಟಿಪಿಸಿಆರ್ ಟೆಸ್ಟ್‌ನ್ನೂ ಈವರೆಗೂ ಮಾಡಿಲ್ಲ. ಜ. 24ರಂದು ಟೆಸ್ಟ್ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಐಟಿಐ ಕಾಲೇಜ್‌ನ ಎ.ಎ. ಕಣಕುರ್ತಿ ತಿಳಿಸಿದ್ದಾರೆ.
ಜ. 24ರಿಂದ ಮರಳಿ ಶಾಲೆ ಶುರು
ಜ. 24ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಾದ್ಯಂತದ ಶಾಲೆಗಳ 1ರಿಂದ 8ನೇ ತರಗತಿಗಳನ್ನು ಪುನರ್ ಆರಂಭಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.
Covid 19: ಜನವರಿ 24 ರಿಂದಲೇ ಶಾಲೆಗಳು ಆರಂಭ ಸಾಧ್ಯತೆ, ಮುಖ್ಯಮಂತ್ರಿ ನೇತೃತ್ವದ ಸಭೆಯ ಬಳಿಕ ನಿರ್ಧಾರ
ಎರಡು ವಾರಗಳ ಹಿಂದೆ ಕೋವಿಡ್ ಕಾರಣದಿಂದ ಈ ವ್ಯಾಪ್ತಿಯ ಶಾಲೆಗಳನ್ನು ಬಂದ್ ಮಾಡಲಾಗಿತ್ತು. ಈಗ ಸರ್ಕಾರದ ಪರಿಷ್ಕೃತ ಆದೇಶದ ಹಿನ್ನೆಲೆಯಲ್ಲಿ ಮತ್ತೆ ಆರಂಭಿಸಿದ್ದು, ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ 3ರಿಂದ 5 ಪಾಸಿಟಿವ್ ಪ್ರಕರಣಗಳು ಬಂದರೆ 3 ದಿನ, 6ರಿಂದ 20 ಪಾಸಿಟಿವ್ ಪ್ರಕರಣಗಳು ಬಂದರೆ 5 ದಿನ, 20ಕ್ಕಿಂತ ಹೆಚ್ಚು ಪ್ರಕರಣಗಳು ಬಂದರೆ 7 ದಿನ, ಹೀಗೆ ಪ್ರಕರಣಗಳು ದಾಖಲಾದರೆ ಶಾಲೆ, ಕಾಲೇಜನ್ನು ತಕ್ಷಣ ಕ್ಲಸ್ಟರ್ ಎಂದು ಪರಿಗಣಿಸಿ ಅಂತಹ ಶಾಲಾ, ಕಾಲೇಜುಗಳಿಗೆ ಸಾರ್ವತ್ರಿಕ ರಜೆ ಎಂದು ಘೋಷಿಸಲು ಶಿಕ್ಷಣ ಇಲಾಖೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34ರನ್ವಯ ಜಿಲ್ಲೆಯ ಎಲ್ಲ ರೀತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವ್ಯಾಪ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನಾಗಿ ನೇಮಿಸಿ ಆದೇಶಿಸಲಾಗಿದೆ.
ನಿಯಮಗಳು..
ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸುವ ಕುರಿತು ಮತ್ತು ಪುನರ್ ಆರಂಭಿಸುವ ಕುರಿತು ನಿಯಮಿತವಾಗಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು. ರಜೆ ಘೋಷಿಸಿದ ಅವಧಿಯಲ್ಲಿ ಶಾಲಾ, ಕಾಲೇಜು ಆವರಣವನ್ನು ಶ್ಯಾನಿಟೈಜ್ ಮಾಡಬೇಕು. ಸೋಂಕಿತ ವಿದ್ಯಾರ್ಥಿಗಳ ಆರೋಗ್ಯದ ಸ್ಥಿತಿಗತಿ ಬಗ್ಗೆ ದಿನಂಪ್ರತಿ ವಿಚಾರಿಸುವುದು ಹಾಗೂ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು. ವಿದ್ಯಾರ್ಥಿಗಳಿಗೆ ಮಾಸ್ಕ್ ಧರಿಸುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ತಿಳುವಳಿಕೆ ನೀಡುವುದು. ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಸೋಂಕಿತ ವಿದ್ಯಾರ್ಥಿಗಳ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಗಂಟಲು ದ್ರವ ತಪಾಸಣೆ ಕುರಿತು ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸೂಕ್ತ ಕ್ರಮ ವಹಿಸಬೇಕು.