ಬೆಂಗಳೂರು (ಅ.21):  ವಿಧಾನಸಭೆಯ 74 ಸದಸ್ಯರು ಮತ್ತು ವಿಧಾನಪರಿಷತ್‌ನ 44 ಸದಸ್ಯರು (ಒಟ್ಟು 118 ಶಾಸಕರು) ನಿಗದಿತ ಅವಧಿಯಲ್ಲಿ ಲೋಕಾಯುಕ್ತ ಸಂಸ್ಥೆಗೆ ಈವರೆಗೂ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡದೆ ನಿರ್ಲಕ್ಷ್ಯ ಧೋರಣೆ ತಳೆದಿದ್ದಾರೆ.

ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಬಿ.ಸಿ.ಪಾಟೀಲ್‌, ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ಎಚ್‌.ನಾಗೇಶ್‌, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೇರಿದ್ದಾರೆ. ವಿಧಾನಸಭೆಯ 74 ಸದಸ್ಯರ ಪೈಕಿ 34 ಬಿಜೆಪಿ, 25 ಕಾಂಗ್ರೆಸ್‌, 12 ಜೆಡಿಎಸ್‌, 1 ಬಿಎಸ್‌ಪಿ, 1 ಪಕ್ಷೇತರ ಮತ್ತು ಒಬ್ಬರು ಆಂಗ್ಲೋ ಇಂಡಿಯನ್‌ ಸದಸ್ಯರಾಗಿದ್ದಾರೆ. ವಿಧಾನಪರಿಷತ್‌ನ 44 ಸದಸ್ಯರಲ್ಲಿ ಆಡಳಿತರೂಢ ಬಿಜೆಪಿ 8, ಪ್ರತಿಪಕ್ಷ ಕಾಂಗ್ರೆಸ್‌ 24, ಜೆಡಿಎಸ್‌ನ 11 ಮತ್ತು ಒಬ್ಬರು ಪಕ್ಷೇತರರು ಆಸ್ತಿವಿವರ ಸಲ್ಲಿಸಿಲ್ಲ.

RR ನಗರ ಬೈ ಎಲೆಕ್ಷನ್: ಅಭ್ಯರ್ಥಿವಿರುದ್ಧ ಅಕ್ರಮ ವೋಟರ್ ಕಾರ್ಡ್ ಆರೋಪ ..

ಸಾಮಾಜಿಕ ಕಾರ್ಯಕರ್ತ ಎಚ್‌.ಎಂ.ವೆಂಕಟೇಶ್‌ ಅವರು ಪಡೆದ ಆರ್‌ಟಿಐ ಮಾಹಿತಿಯಲ್ಲಿ ಈ ವಿವರ ಬಹಿರಂಗಗೊಂಡಿದೆ. ಅ.17ರವರೆಗೆ 118 ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ರಾಮಲಿಂಗಾರೆಡ್ಡಿ, ಸೌಮ್ಯ ರೆಡ್ಡಿ, ಜಮೀರ್‌ ಅಹ್ಮದ್‌ ಖಾನ್‌, ಅಂಜಲಿ ನಿಂಬಾಳ್ಕರ್‌, ಜೆಡಿಎಸ್‌ನ ಅನ್ನದಾನಿ, ಡಿ.ಸಿ.ತಮ್ಮಣ್ಣ, ಜಿ.ಟಿ.ದೇವೇಗೌಡ ಸೇರಿದಂತೆ ಇತರರು ಸೇರಿದ್ದಾರೆ.

ಜೂನ್‌ ಒಳಗೆ ಸಲ್ಲಿಸಬೇಕಿತ್ತು:  ಲೋಕಾಯುಕ್ತ ಕಾಯ್ದೆ ಅನ್ವಯ ಪ್ರತಿ ವರ್ಷ ಜೂನ್‌ ಅಂತ್ಯದೊಳಗೆ ಲೋಕಾಯುಕ್ತರ ಮುಂದೆ ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರು ಆಸ್ತಿ ವಿವರ ಸಲ್ಲಿಕೆ ಮಾಡಬೇಕು. ಜೂನ್‌ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಕೆ ಮಾಡದಿದ್ದರೆ ಹೆಚ್ಚುವರಿಯಾಗಿ ಎರಡು ತಿಂಗಳ ಕಾಲ ಅಂದರೆ ಆಗಸ್ಟ್‌ ಅಂತ್ಯಗೊಳಗೆ ಸಲ್ಲಿಕೆ ಮಾಡಬೇಕು. ಆದರೆ, ನೀಡಿರುವ ಹೆಚ್ಚುವರಿ ಅವಧಿಯಲ್ಲಿಯೂ 118 ಸದಸ್ಯರು ಆಸ್ತಿವಿವರನ್ನು ಸಲ್ಲಿಕೆ ಮಾಡಿಲ್ಲ.

ಲೋಕಾಯುಕ್ತರ ನೋಟಿಸ್‌ಗೂ ಬೆಲೆಯಿಲ್ಲ:  ಆಸ್ತಿ ವಿವರ ಸಲ್ಲಿಕೆ ಮಾಡದ ಸದಸ್ಯರಿಗೆ ಲೋಕಾಯುಕ್ತರು ನೊಟೀಸ್‌ ಜಾರಿಗೊಳಿಸಿದ್ದಾರೆ. ಆದರೂ ವಿವರ ಸಲ್ಲಿಸಿಲ್ಲ, ಹೆಚ್ಚುವರಿ ಅವಧಿಯಲ್ಲಿಯೂ ಆಸ್ತಿ ವಿವರ ಸಲ್ಲಿಕೆ ಮಾಡದ ಸದಸ್ಯರ ವಿವರವನ್ನು ಲೋಕಾಯುಕ್ತರು ರಾಜ್ಯಪಾಲರಿಗೆ ಮಾಹಿತಿ ನೀಡಲಿದ್ದಾರೆ.