ಬೆಂಗಳೂರು(ಜ.12): ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಂದ ನಗರದ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂರು ವಾಹನಗಳಲ್ಲಿ ಲಸಿಕೆ ಸರಬರಾಜಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ಹಾಕುವುದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿದೆ. ಬಿಬಿಎಂಪಿಯ ದಾಸಪ್ಪ ಆಸ್ಪತ್ರೆಯಲ್ಲಿ ಕೋವಿಡ್‌ ಲಸಿಕೆ ಸಂಗ್ರಹ ಕೇಂದ್ರ ನಿರ್ಮಿಸಲಾಗಿದೆ. ದಾಸಪ್ಪ ಆಸ್ಪತ್ರೆಯಲ್ಲಿ 40 ಸಾವಿರ ವ್ಯಾಕ್ಸಿನ್‌ ಸಂಗ್ರಹಿಸುವ ನಾಲ್ಕು ಐಸ್‌ಲೆಂಡ್‌ ರೆಫ್ರಿಜಿರೇಟರ್‌ ಹಾಗೂ 30 ಸಾವಿರ ವ್ಯಾಕ್ಸಿನ್‌ ಸಂಗ್ರಹಿಸುವ ಮೂರು ಐಸ್‌ಲೆಂಡ್‌ ರೆಫ್ರಿಜಿರೇಟರ್‌ಗಳಿವೆ. ದಾಸಪ್ಪ ಆಸ್ಪತ್ರೆಯಿಂದ ಬಿಬಿಎಂಪಿಯ 148 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವ್ಯಾಕ್ಸಿನ್‌ ಸರಬರಾಜು ಮಾಡುವುದಕ್ಕೆ ಮೂರು ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಬ್ರಿಟನ್‌ನಿಂದ ಬಂದ ಐವರಿಗೆ ಕೊರೋನಾ: ಇದು ಹೈಸ್ಪೀಡ್‌ ವೈರಸ್ಸಾ..?

ಇನ್ನು ಲಸಿಕೆ ಹಾಕುವುದಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೆಡಿಕಲ್‌ ಕಾಲೇಜು, ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 760 ಲಸಿಕಾ ಕೇಂದ್ರ ಸ್ಥಾಪಿಸಲಾಗಿದೆ. ಮೂರು ಕೋಣೆ ವ್ಯವಸ್ಥೆ, ಇಂಟರ್‌ ನೆಟ್‌ ವ್ಯವಸ್ಥೆ, ಆ್ಯಂಬುಲೆನ್ಸ್‌ ವ್ಯವಸ್ಥೆ ಇರಲಿದೆ. ಪ್ರತಿ ಐದು ಲಸಿಕಾ ಕೇಂದ್ರಗಳಿಗೆ ಒಬ್ಬರು ಹಿರಿಯ ಅಧಿಕಾರಿಯನ್ನು ಸೆಕ್ಟರ್‌ ಆಫೀಸರ್‌ ಆಗಿ ನೇಮಕ ಮಾಡಲಾಗುತ್ತದೆ ಎಂದು ವಿವರಿಸಿದರು.

ವಿಶೇಷ ಆಯುಕ್ತರಿಗೆ ಹೊಣೆ

ಬಿಬಿಎಂಪಿಯ ಎಂಟು ವಲಯಗಳಿಗೆ ಒಬ್ಬ ವಿಶೇಷ ಆಯುಕ್ತರನ್ನು ನೇಮಿಸಲಾಗಿದೆ. ಆ ವಿಶೇಷ ಆಯುಕ್ತರು ತಮ್ಮ ವಲಯಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾಗೂ ಲಸಿಕಾ ಕೇಂದ್ರಗಳಿಗೆ ಲಸಿಕೆ ತಲುಪಿಸುವ ಹಾಗೂ ಲಸಿಕಾ ಕೇಂದ್ರದ ವ್ಯವಸ್ಥೆ ಬಗ್ಗೆ ಪರಿಶೀಲಿಸುವ ಹೊಣೆಯನ್ನು ನೀಡಲಾಗಿದೆ ಎಂದು ತಿಳಿಸಿದರು.

ಸಿಟಿ ಫೋಲ್ಡರ್‌ನಲ್ಲಿ ದಾಸಪ್ಪ ಎಂದು ಫೋಟೋ ಇದೆ....

ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ಗುಪ್ತಾ ಅವರು ಸೋಮವಾರ ದಾಸಪ್ಪ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್‌ ಲಸಿಕೆ ಸಂಗ್ರಹದ ಸಿದ್ಧತೆಗಳ ಪರಿಶೀಲಿಸಿ, ಮಾಹಿತಿ ಪಡೆದುಕೊಂಡರು.