ಬೆಂಗಳೂರು(ಜ.12): ಬ್ರಿಟನ್‌ನಿಂದ ಸೋಮವಾರ ಮುಂಜಾನೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 215 ಮಂದಿಗೆ ಕೊರೋನಾ ಪರೀಕ್ಷೆ ನಡೆಸಿದ್ದು, ಈ ಪೈಕಿ ಐದು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಭಾನುವಾರ ಆಗಮಿಸಿದ್ದ 289 ಮಂದಿಯಲ್ಲಿ ಒಬ್ಬರಿಗೂ ಸೋಂಕು ದೃಢಪಟ್ಟಿರಲಿಲ್ಲ. ಸೋಮವಾರ ಬಂದ ಪ್ರಯಾಣಿಕರಲ್ಲಿ ಐದು ಮಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದಿದೆ. ಪಾಸಿಟಿವ್‌ ಬಂದ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಿ ನಿಗಾ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಿಯುಸಿ ಪರೀಕ್ಷೆ ನೋಂದಣಿ ಗಡುವು ಮತ್ತೆ ವಿಸ್ತರಣೆ, ಇಂಪಾರ್ಟೆಂಟ್ ಡೇಟ್ಸ್ ಹೀಗಿವೆ

215 ಮಂದಿಯನ್ನೂ ಪ್ರತ್ಯೇಕವಾಗಿ ಕೂರಿಸಿ ಪ್ರತಿ 5 ಮಂದಿಗೆ ಒಂದರಂತೆ ಪೂಲ್‌ ಪರೀಕ್ಷೆ ನಡೆಸಲಾಯಿತು. ಈ ವೇಳೆ ಯಾವ್ಯಾವ ಪೂಲ್‌ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆಯೋ ಅಂತಹ ಪ್ರಕರಣಗಳಲ್ಲಿ ಐದು ಮಂದಿಗೂ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಯಿತು.

ಈ ಐದು ಮಂದಿಗೆ ಉಂಟಾಗಿರುವುದು ಹೊಸ ಮಾದರಿ ಸೋಂಕೇ ಅಥವಾ ಅಲ್ಲವೇ ಎಂಬುದನ್ನು ಪರೀಕ್ಷಿಸಲು ಗಂಟಲು ದ್ರವ ಹಾಗೂ ರಕ್ತ ಮಾದರಿಗಳನ್ನು ಜೆನೆಟಿಕ್‌ ಸೀಕ್ವೆನ್ಸ್‌ಗಾಗಿ ನಿಮ್ಹಾನ್ಸ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಕಟ್ಟುನಿಟ್ಟಿನ ಎಚ್ಚರಿಕೆ:

ಲಂಡನ್‌ನಿಂದ ಪ್ರಯಾಣಿಕರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲೇ ಆರ್‌ಟಿ-ಪಿಸಿಆರ್‌ ಪರೀಕ್ಷೆ, ಪರೀಕ್ಷೆಗೆ ಕಾಯಲು ಸಾಮಾಜಿಕ ಅಂತರದೊಂದಿಗೆ ಆಸನದ ವ್ಯವಸ್ಥೆ, ಸಂಪೂರ್ಣ ಪಿಪಿಇ ಕಿಟ್‌ ಹಾಗೂ ಸುರಕ್ಷತಾ ಕ್ರಮಗಳೊಂದಿಗೆ 150 ಮಂದಿ ಪರೀಕ್ಷಾ ಸಿಬ್ಬಂದಿ ಸಜ್ಜಾಗಿದ್ದರು. ಲಂಡನ್‌ನಿಂದ ಬೆಳಗ್ಗೆ 4.10 ಗಂಟೆಗೆ 215 ಮಂದಿ ಆಗಮಿಸಿದ ನಂತರ ಎಲ್ಲರ ಪರೀಕ್ಷೆ ನಡೆಸಲಾಯಿತು ಎಂದು ದೇವನಹಳ್ಳಿ ತಾಲೂಕು ವೈದ್ಯಾಧಿಕಾರಿಗಳು ತಿಳಿಸಿದರು.

ಹೈರಾಣಾದ ಪ್ರಯಾಣಿಕರು:

ಗಂಟೆಗಟ್ಟಲೆ ಪ್ರಯಾಣದಿಂದ ದಣಿದಿದ್ದ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಹಾಗೂ ಫಲಿತಾಂಶಕ್ಕಾಗಿ ಕಾದು ಹೈರಾಣಾದರು. ಪರೀಕ್ಷಾ ಪ್ರಕ್ರಿಯೆಯೇ ಬರೋಬ್ಬರಿ 5 ಗಂಟೆ ಅವಧಿ ತೆಗೆದುಕೊಂಡಿತು. ಇನ್ನು ಫಲಿತಾಂಶಕ್ಕಾಗಿ ಮಾದರಿಗಳನ್ನು ನಿಮ್ಹಾನ್ಸ್‌ ಪ್ರಯೋಗಾಲಯಕ್ಕೆ ಕಳುಹಿಸಿದ್ದರಿಂದ ವರದಿ ಬರುವವರೆಗೂ ಪ್ರಯಾಣಿಕರು ಕಾಯಬೇಕಾಯಿತು. ಇದರಿಂದ ಸಮಸ್ಯೆ ಉಂಟಾಯಿತು ಎಂದು ಪ್ರಯಾಣಿಕರೊಬ್ಬರು ಅಸಮಾಧಾನ ಹೊರ ಹಾಕಿದರು.

ಕ್ವಾರಂಟೈನ್‌ ಸೀಲ್‌:

ಬ್ರಿಟನ್‌ದಿಂದ ಬಂದ 215 ಪ್ರಯಾಣಿಕರಲ್ಲಿ 210 ಮಂದಿಗೆ ಕೊರೋನಾ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ಬಂದಿದೆ. ಇವರಿಗೆ ‘ಯು.ಕೆ. ಪ್ಯಾಸೆಂಜರ್‌’ ಎಂಬುದಾಗಿ ದಿನಾಂಕ ಸಹಿತ ಕ್ವಾರಂಟೈನ್‌ ಸೀಲ್‌ ಹಾಕಿ ಕಳುಹಿಸಲಾಗಿದೆ.