Asianet Suvarna News Asianet Suvarna News

ಕರ್ನಾಟಕದಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಸಂಭ್ರಮದಿಂದ ಆಚರಿಸಿದ 74ನೇ ಗಣರಾಜೋತ್ಸವ. 

74th Republic Day Celebration in Karnataka grg
Author
First Published Jan 26, 2023, 10:25 AM IST

ಬೆಂಗಳೂರು(ಜ.26):  ರಾಜ್ಯಾದ್ಯಂತ ಇಂದು(ಗುರುವಾರ) 74ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ನಡೆಯುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಸಂಭ್ರಮದಿಂದ ಗಣರಾಜ್ಯೋತ್ಸವವನ್ನ ಆಚರಿಸಲಾಗುತ್ತಿದೆ. ಬಳ್ಳಾರಿಯಲ್ಲಿ ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ 150 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ರಾಷ್ಟಧ್ವಜ ಮಾಡಲಾಗಿದೆ. ಬಳ್ಳಾರಿಯ ವೃತ್ತದಲ್ಲಿರೋ 150 ಅಡಿ ಎತ್ತರದ ಧ್ವಜ ಸ್ಥಂಬದ ಮೇಲೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು‌ ಅವರು ಧ್ವಜಾರೋಹಣ ಮಾಡಿದ್ದಾರೆ. 

ಡಿಕೆಶಿ, ಸಿದ್ದರಾಮಯ್ಯ ನಮ್ಮ ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪವನ್ನ ಮಾಡಿದ್ದಾರೆ. ಆದ್ರೇ, ಕಾಂಗ್ರೆಸ್ ಭ್ರಷ್ಟಾಚಾರದ ರಾಯಭಾರಿ, ದೇಶದಲ್ಲೇ ಕಾಂಗ್ರೆಸ್ ನಂಬರ್ 1 ಭ್ರಷ್ಟ ಪಕ್ಷ ಸ್ಥಾನದಲ್ಲಿದೆ. ಕಾಂಗ್ರೆಸ್‌ನ ಡಿಎನ್‌ಎ ಸಹ ಭ್ರಷ್ಟಾಚಾರವಾಗಿದೆ. ಬೇಕಿದ್ರೇ ಒಮ್ಮೆ ಕಾಂಗ್ರೆಸ್‌ನವರ ಡಿಎನ್‌ಎ ಟೆಸ್ಟ್ ಮಾಡಿ, ಅದು ಕೂಡ ಭ್ರಷ್ಟಾಚಾರ, ಭ್ರಷ್ಟಾಚಾರ ಎನ್ನುತ್ತದೆ ಅಂತ ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ. 

ದೆಹಲಿಯಿಂದ ರಾಜ್ಯದ ನಾಯಕರ ಡಿಎನ್‌ಎದಲ್ಲಿ ಭ್ರಷ್ಟಾಚಾರದಿಂದ ಕೂಡಿದೆ. ಭೂತದ ಬಾಯಲ್ಲಿ ಭಗವದ್ಗೀತೆ  ಎನ್ನುವಂತೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ನೈತಿಕತೆ ಇಲ್ಲ.‌ ದೇಶಾದ್ಯಾಂತ ರಾಜ್ಯ ಕೇಂದ್ರದ ನಾಯಕರು ದಿವಾಳಿಯಾಗಿದ್ದಾರೆ. ಸದ್ಯ ಒಂದಾಗಿರುವಂತೆ ಡಿಕೆಶಿ, ಸಿದ್ದರಾಮಯ್ಯ ನಾಟವಾಡುತ್ತಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ.   

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಕದನ ಶುರುವಾಗುತ್ತದೆ. ಆಗ ಇಬ್ಬರ ಮಧ್ಯೆ ದೋಸ್ತಿಗಳ ಬಣ್ಣ ಬಯಲಾಗ್ತದೆ. ಒಬ್ಬರ ಮಧ್ಯೆ ಮತ್ತೊಬ್ಬರ ಮಧ್ಯೆ ಇರೋ ಭಿನ್ನಾಭಿಪ್ರಾಯ ಹೊರಗೆ ಬರುತ್ತದೆ. ಸಿದ್ದರಾಮಯ್ಯ ಕೋಲಾರಕ್ಕೆ ಹೋಗಿದ್ದಾರೆ. ಇದೀಗ ಸೋಲಿನ ಭೀತಿಯಿಂದ ಕೋಲಾರ ಬಿಟ್ಟು ಹೊರಗೆ ಬರುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟು ಸುಲಭವಲ್ಲ. ನಮ್ಮ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗುತ್ತವೆ.  ಕಲ್ಯಾಣ ಕರ್ನಾಟಕದಿಂದಲೇ ಗೆಲುವಿನ ಅಭಿಯಾನ ಪ್ರಾರಂಭಿಸುತ್ತೇವೆ 150 ಸ್ಥಾನ ಗೆಲ್ತೇವೆ. ಸಂಡೂರು ಅಥವಾ ಬಳ್ಳಾರಿ ಗ್ರಾಮಾಂತರದಿಂದಲೇ ಸ್ಪರ್ಧೆ ಮಾಡೋದಾಗಿ ಶ್ರೀರಾಮುಲು ಹೇಳಿದ್ದಾರೆ.

ರಾಯಚೂರು

ರಾಯಚೂರಿನಲ್ಲಿಯೂ 74ನೇ ಗಣರಾಜೋತ್ಸವವನ್ನ ಸಂಭ್ರಮದಿಂದ ಆಚರಿಸಲಾಗಿದೆ. ನಗರದ ಮಹಾತ್ಮ ಗಾಂಧಿ ಮೈದಾನದಲ್ಲಿ ಧ್ವಜಾರೋಹಣ ಸಡಗರ ಮನೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ್. ಬಿ.ಪಾಟೀಲ್ ಮುನೇನಕೊಪ್ಪ ಧ್ವಜಾರೋಹಣ ಮಾಡಿದ್ದಾರೆ. ಧ್ವಜಾರೋಹಣಕ್ಕೆ ಅತಿಥಿಗಳಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಭಾಗಿಯಾಗಿದ್ದಾರೆ.  ಧ್ವಜಾರೋಹಣ ವೇಳೆ ಸಂಸದ ರಾಜಾ ಅಮರೇಶ್ವರ ನಾಯಕ, ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಜಿಲ್ಲಾಧಿಕಾರಿ ಎಲ್. ಚಂದ್ರಶೇಖರ್ ನಾಯಕ, ಎಸ್ ಪಿ ನಿಖಿಲ್.ಬಿ. ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. 

ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ರಾಜ್ಯಪಾಲರಿಂದ ಧ್ವಜಾರೋಹಣ

ಕೊಡಗು

ಮಡಿಕೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ನಡೆದಿದ್ದು ಧ್ವಜಾರೋಹಣ ನೆರವೇರಿಸಿದ ಬಳಿಕ ಪಥ ಸಂಚಲನಕ್ಕೆ ಚಾಲನೆ ನೀಡಲಾಗಿದೆ. ತೆರೆದ ವಾಹನದಲ್ಲಿ ಸಚಿವ ಬಿ.ಸಿ. ನಾಗೇಶ್  ಅವರು ಪಥಸಂಚಲನ ವೀಕ್ಷಿಸಿದ್ದಾರೆ.  ಗಣರಾಜ್ಯೋತ್ಸವದಲ್ಲಿ ಶಾಸಕ ಅಪ್ಪಚ್ಚು ರಂಜನ್, ಕೊಡಗು ಜಿಲ್ಲಾಧಿಕಾರಿ ಡಾ ಬಿ ಸಿ ಸತೀಶ್ ಭಾಗಿಯಾಗಿದ್ದಾರೆ. 

ಕಲಬುರಗಿಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ 

ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮುರಗೇಶ ನಿರಾಣಿ ಅವರು ದ್ವಜಾರೋಹಣ ಮಾಡಿದ್ದಾರೆ. ಕಲಬುರಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ಸಚಿವ ಮುರಗೇಶ ನಿರಾಣಿ ದ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಉಮೇಶ್ ಜಾದವ್, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಡಿಸಿ, ಸಿಇಓ, ಎಸ್ಪಿ ಭಾಗಿಯಾಗಿದ್ದಾರೆ. ಧ್ವಜಾರೋಹಣ ಬಳಿಕ ಸಚಿವರು ಗೌರವ ವಂದನೆಯನ್ನ ಸ್ವೀಕರಿಸಿದ್ದಾರೆ. 12 ಪೊಲೀಸ್ ತಂಡಗಳಿಂದ ಗೌರವ ವಂದನೆ ಸ್ವೀಕಾರ ನಡೆದಿದೆ. 

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಅವರು ಧ್ವಜಾರೋಹಣ ಮಾಡಿದ್ದಾರೆ. ನಗರದ ಸರ್ ಎಂವಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಾಗರಾಜ್, ಎಸ್ ಪಿ ಡಿಸಿ ನಾಗೇಶ್ ಸೇರಿ ಹಲವರು ಭಾಗಿಯಾಗಿದ್ದಾರೆ. 

ಕೊಪ್ಪಳ 

ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸ್, ಗೃಹರಕ್ಷಕ ದಳ,ಎನ್ ಸಿ ಸಿ,ಸ್ಕಾಟ್ ಆ್ಯಂಡ್ ಗೈಡ್ಸ್ ಸೇರಿದ ವಿವಿಧ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆದಿದೆ.  ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ,ಶಾಸಕ ರಾಘವೇಂದ್ರ ಹಿಟ್ನಾಳ್,ಎಂ ಎಲ್ ಸಿ ಹೇಮಲತಾ ನಾಯಕ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ. 

ಧಾರವಾಡ

ಧಾರವಾಡ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆಚಾರ ಹಾಲಪ್ಪ ದ್ವಜಾರೋಹಣ ಮಾಡಿದ್ದಾರೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್‌ಪಿ ಲೋಕೇಶ ಜಗಲಾಸರ್, ಕಮಿಷನರ್ ರಮನ ಗುಪ್ತಾ ಭಾಗಿಯಾಗಿದ್ದಾರೆ. 

ಜ. 28 ಕ್ಕೆ ಸಿಎಂ ಬೊಮ್ಮಾಯಿ, ಯಡಿಯೂರಪ್ಪ, ಅಮಿತ್ ಶಾ ಧಾರವಾಡ ಜಿಲ್ಲೆಗೆ ಬರ್ತಾ ಇದಾರೆ. ಕೃಷಿ ವಿವಿಯ ವಿಧಿ ವಿಜ್ಞಾನ ವಿದ್ಯಾಲಯ ಶಂಕುಸ್ಥಾಪನೆ ಮಾಡುತ್ತಾರೆ. ಈಗಾಗಲೇ ವಿಧಿ ವಿಜ್ಞಾನ 48 ಎಕರೆ ಜಮೀನನ್ನ ನೀಡಲಾಗಿದೆ ಅಂತ ಸಚಿವ ಹಾಲಪ್ಪ ಆಚಾರ್‌ ತಿಳಿಸಿದ್ದಾರೆ. 

ಮೋದಿ ರಾಜ್ಯಕ್ಕೆ ಬಂದಾಗ ರಸ್ತೆ ಅಭಿವೃದ್ಧಿ ಮಾಡುತ್ತಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಹಾಲಪ್ಪ ಆಚಾರ್‌, ವಿಪಕ್ಷಗಳು ಸುಮ್ಮನೆ ಆಪಾದನೆ ಮಾಡಿ ತೃಪ್ತಿ ಪಟ್ಟುಕೊಳ್ಳುತ್ತಾರೆ. ರಮೇಶ್ ಜಾರಕಿಹೊಳಿ 6 ಸಾವಿರ ನೀಡುವ ವಿಚಾರವಾಗಿ, ರಾಜಕಾರಣದ ವ್ಯವಸ್ಥೆಯಲ್ಲಿ ನಿಂದನೆ ಮಾಡೋದು ಸರಿಯಲ್ಲ,. ಸಾಧನೆ ಮಾಡಿ ಹೇಳಿಕೊಳ್ಳಬೇಕು, ಆದರೆ ಕೇವಲ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ ಅವರು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ. ರಮೇಶ ಜಾರಕಿಹೊಳಿ ತಪ್ಪು ಹೇಳಿಕೆಯನ್ನ ನೀಡಬಾರದು. ಅವರು ಹಿರಿಯ ರಾಜಕಾರಣಿ ಇದಾರೆ ಯಾಕೆ ಹೀಗೆ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ, ನಾವು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಫೆಬ್ರುವರಿಯಲ್ಲಿ ಸಂಪುಟ ವಿಸ್ತರಣೆ ಆಗಲ್ಲ ಅಂತ ತಿಳಿಸಿದ್ದಾರೆ. 

ವಿಜಯಪುರ

ವಿಜಯಪುರ ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಧ್ವಜಾರೋಹಣ ನೆರವೇರಿದ್ದಾರೆ. ಈ ಸಂದರ್ಭದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತಿ ಇದ್ದರು. 

ಬೆಳಗಾವಿ

ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಗೋವಿಂದ‌ ಕಾರಜೋಳ ಧ್ವಜಾರೋಹಣ ನೆರವೇರಿಸಿದ್ದಾರೆ. ಮಹಾತ್ಮಾ ಗಾಂಧಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಸಚಿವ ಪುಷ್ಪನಮನ ಸಲ್ಲಿಸಿದ್ದಾರೆ. ಬಳಿಕ ಸಚಿವ ಗೋವಿಂದ ಕಾರಜೋಳ‌ ಅವರು ಪರೇಡ್ ಪರಿವೀಕ್ಷಣೆ ಮಾಡಿದ್ದಾರೆ.  ಕಾರ್ಯಕ್ರಮದಲ್ಲಿ ಪೊಲೀಸ್, ಎನ್‌ಸಿಸಿ ಹಾಗೂ ಶಾಲಾ ಮಕ್ಕಳು ಸೇರಿ 20 ತುಕಡಿಗಳು ಪರೇಡನಲ್ಲಿ ಭಾಗಿಯಾಗಿದ್ದರು.  ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ, ಎಸ್ಪಿ ಸಂಜೀವ ಕುಮಾರ್ ಪಾಟೀಲ್, ಶಾಸಕ ಅನಿಲ್ ಬೆನಕೆ, ಪ್ರಾದೇಶಿಕ ಆಯುಕ್ತ ಎಂ ಜಿ ಹಿರೇಮಠ, ಐಜಿ ಸತೀಶ ಕುಮಾರ್ ಭಾಗಿಯಾಗಿದ್ದರು. 

ಕಳಸಾ-ಬಂಡೂರಿ ನಾಲಾ ಯೋಜನೆಯ ವಿಸ್ತ್ರತ ವರದಿಗೆ ಕೇಂದ್ರ ಅನುಮೋದನೆ ನೀಡಿದೆ. ಅತೀ ಶೀಘ್ರದಲ್ಲೇ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಸರ್ಕಾರದ ಉದ್ದೇಶಿಸಿದೆ ಅಂತ ಸಚಿವ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.

ಕೋವಿಡ್, ಪ್ರವಾಹ, ಆರ್ಥಿಕ ಹಿಂಜರಿತ ಮಧ್ಯೆಯೇ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ, ದೇಶಕ್ಕೆ ಮಾದರಿಯಾಗಿ ಪರಿಹಾರ ನೀಡಿದೆ. ನವೋದ್ಯಮಗಳ ಸ್ಥಾಪನೆ, ಕೈಗಾರಿಕಾ ಸೌಲಭ್ಯಗಳ ವಿಸ್ತರಣೆ, ಬಂಡವಾಳ ಹೂಡಿಕೆಗೆ ಅನುಕೂಲಕರ ವಾತಾವರಣ ನಿರ್ಮಿಸಲಾಗಿದೆ. ಜಿಎಸ್‌ಟಿ ಸಂಗ್ರಹದಲ್ಲೂ ದೇಶದಲ್ಲೇ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ. ಚಳಿಗಾಲ ಅಧಿವೇಶನ ವೇಳೆ ಉತ್ತರ ‌ಕರ್ನಾಟಕ ಭಾಗದ 13 ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ನಮ್ಮ ಕ್ಲಿನಿಕ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ 21 ಕ್ಲಿನಿಕ್ ಮಂಜೂರಾಗಿದ್ದು 6 ಕ್ಲಿನಿಕ್‌ಗಳಿಗೆ ಚಾಲನೆ ನೀಡಲಾಗಿದೆ ಅಂತ ಹೇಳಿದ್ದಾರೆ. 

ಚಿಕ್ಕಮಗಳೂರು

ಮಡಿಕೇರಿ ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಜಿಲ್ಲಾಧಿಕಾರಿ ಕೆಎನ್ ರಮೇಶ್‌ ಅವರು ದ್ವಜಾರೋಹಣ ನೆರವೇರಿಸಿದ್ದಾರೆ. ಪೊಲೀಸ್, ಗೃಹರಕ್ಷಕ, ಎನ್ ಸಿಸಿ ಹಾಗೂ ಶಾಲಾ ವಿಧ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲ‌‌ನ ನಡೆದಿದೆ. ಈ ಸಂದರ್ಭದಲ್ಲಿ ಶಾಸಕ ಸಿ.ಟಿ. ರವಿ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.  ಭೋಜೇಗೌಡ ಸೇರಿ ಹಲವರು ಭಾಗಿಯಾಗಿದ್ದಾರೆ. 

ಹಾಸನ 

ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಧ್ವಜಾರೋಹಣ ನೆರವೇರಿಸಿದ್ದಾರೆ. ಬಳಿಕ ಸಚಿವರು ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ.  ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್ಪಿ, ಹರಿರಾಂ ಶಂಕರ್, ಶಾಸಕ ಪ್ರೀತಂಗೌಡ, ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪೊಲೀಸ್ ತುಕಡಿಗಳಿಂದ ಸಚಿವ ಕೆ.ಗೋಪಾಲಯ್ಯ ಗೌರವ ವಂದನೆ ಸ್ವೀಕರಿಸಿದ್ದಾರೆ. ವಿವಿಧ ಪೊಲೀಸ್ ತಂಡಗಳು ಹಾಗೂ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದಿದೆ. 

ರಾಮನಗರ

ರಾಮನಗರ ಜಿಲ್ಲಾಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣ ನಂತರ ಪತಸಂಚಲನದಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ.  ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಸಿಇಒ ದಿಗ್ವಿಜಯ್ ಬೋಡ್ಕೆ, ಎಸ್ಪಿ ಸಂತೋಷ್ ಬಾಬು ಸೇರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. 

ಹಾವೇರಿ 

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಮೈದಾನದಲ್ಲಿ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಅವರು ಧ್ವಜಾರೋಹಣ ಮಾಡಿದ್ದಾರೆ. ಸಚಿವರಿಗೆ ವಿವಿಧ 14 ತುಕಡಿಗಳಿಂದ ಗೌರವ ವಂದನೆ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ, ಡಿಸಿ ಹಾಗೂ ಸಿಇಓ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. 

ಚಿತ್ರದುರ್ಗ

ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಸಚಿವರಿಗೆ ವಿವಿಧ ತುಕಡಿಗಳಿಂದ ಗೌರವ ವಂದನೆ ಸಲ್ಲಿಸಲಾಗಿದೆ. 
ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಡಿಸಿ ದಿವ್ಯಪ್ರಭು, CEO ದಿವಾಕರ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. 

ರಾಯಚೂರು

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇಂದು ಜೆಡಿಎಸ್ 54ನೇ ದಿನ ಪಂಚರತ್ನ ರಥಯಾತ್ರೆಯಾಗಿದ್ದು ರಾಯಚೂರು ಜಿಲ್ಲೆಯಲ್ಲಿ ಮೂರು ದಿನಗಳಿಂದ ‌ಜೆಡಿಎಸ್ ಪಂಚರತ್ನ ಯಾತ್ರೆ ನಡೆದಿದೆ. 

ಕೋಲಾರ

ಕೋಲಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಧ್ವಜಾರೋಹಣ ಮಾಡಿದ್ದಾರೆ. ಸಚಿವ ಮುನಿರತ್ನ ಪತಸಂಚಲನದಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದ ಮುನಿಸ್ವಾಮಿ,ಜಿಲ್ಲಾಧಿಕಾರಿ ವೆಂಕಟರಾಜ, ಎಸ್ಪಿ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದರು. 

ಶಿವಮೊಗ್ಗ 

ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣ ನೆರವೇರಿಸಿ ನಾರಾಯಣಗೌಡ ಧ್ವಜ ವಂದನೆ ಸ್ವೀಕರಿಸಿದ್ದಾರೆ. 

ಗದಗ 

ಗದಗ ಜಿಲ್ಲಾ ಕೃಡಾಂಗಣದಲ್ಲಿ ಸಚಿವ ಸಿಸಿ ಪಾಟೀಲ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಸಚಿವರು ಪೊಲೀಸ್, ಗೃಹ ರಕ್ಷಕದಳ ಸೇರಿದಂತೆ ವಿವಿಧ ತಂಡದಿಂದ ಗೌರವ ವಂದನೆ ಸ್ವೀಕರಿಸಿದ್ದಾರೆ. ಸಚಿವರಿಗೆ ಶಾಸಕ ಎಚ್.ಕೆ. ಪಾಟೀಲ, ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಸಾಥ್ ನೀಡಿದ್ದರು. ಜಿಲ್ಲಾಧಿಕಾರಿ ವೈಶಾಲಿ ಎಂಎಲ್, ಎಸ್ ಪಿ ಬಿಎಸ್ ನೇಮಗೌಡ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು. 

ತುಮಕೂರು

ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಧ್ವಜಾರೋಹಣ ನೇರವೆರಿಸಿದ್ದಾರೆ.ಕಾರ್ಯಕ್ರಮದಲ್ಲಿ ಸಂಸದ ಜಿಎಸ್ ಬಸವರಾಜ್, ಶಾಸಕ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ವೈಎಸ್ ಪಾಟೀಲ್, ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್, , ಸಿಇಓ ವಿದ್ಯಾಕುಮಾರಿ, ಮೇಯರ್ ಪ್ರಭಾವತಿ, ಉಪಮೇಯರ್ ನರಸಿಂಹಮೂರ್ತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. 

ಯಾದಗಿರಿ

ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಧ್ವಜಾರೋಹಣ ಮಾಡಿದ್ದಾರೆ. ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದ ನಂತರ ಧ್ವಜಾರೋಹಣ ನೆರವೇರಿಸಿದ್ದಾರೆ. ಶಾಸಕ ವೆಂಕಟರೆಡ್ಡಿ ಮುದ್ನಾಳ್, ಜಿಲ್ಲಾಧಿಕಾರಿ ಸ್ನೇಹಲ್ ಆರ್, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ‌, ಸಿಇಒ ಅಮರೇಶ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಆಚರಣೆ

ಮಂಡ್ಯ

ಮಂಡ್ಯದ ಪೊಲೀಸ್ ಪೆರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಧ್ವಜಾರೋಹಣ ನೆರವೇರಿಸಿದ್ದಾರೆ. ಧ್ವಜಾರೋಹಣದ ಬಳಿಕ ರಾಷ್ಟ್ರಗೀತೆ, ನಾಡಗೀತೆ, ರೈತಗೀತೆಗೆ ಗೌರವ ಸಲ್ಲಿಸಲಾಗಿದೆ. ಬಳಿಕ ಸಚಿವ ಆರ್.ಅಶೋಕ್ ಅವರು ಪಥಸಂಚಲನದ ಮೂಲಕ ತುಕಡಿಗಳ ಪರಿವೀಕ್ಷಣೆ ನಡೆಸಿದ್ದಾರೆ. 

ಚಾಮರಾಜನಗರ

ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸಚಿವ ಸೋಮಣ್ಣ ಧ್ವಜಾರೋಹಣ ನೇರವೇರಿಸಿದ್ದಾರೆ. ವಿವಿಧ ಪೊಲೀಸ್ ತುಕಡಿ, ಶಾಲಾ ಮಕ್ಕಳಿಂದ ಪಥ ಸಂಚಲನ ನಡೆದಿದೆ. ಈ ವೇಳೆ ಶಾಸಕರಾದ ಪುಟ್ಟರಂಗಶೆಟ್ಟಿ, ಡಿಸಿ ರಮೇಶ್, ಎಸ್ಪಿ ಶಿವಕುಮಾರ್, ಸಿಇಒ ಗಾಯತ್ರಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. 

ಬೀದರ್‌

ಬೀದರ್‌ ನಗರದ ನೆಹರು ಕ್ರಿಡಾಂಗಣದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಧ್ವಜಾರೋಹಣ ನೆರವೇರಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ವಿವಿಧ ಶಾಲಾ ಮಕ್ಕಳು ಹಾಗೂ ವಿವಿಧ ತುಕಡಿಗಳಿಂದ ಗೌರವ ವಂದನೆ ಸಲ್ಲಿಕೆಯಾಗಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಸಾಧಕರಿಗೆ ಗಣರಾಜ್ಯೋತ್ಸವ ಪ್ರಶಸ್ತಿಯನ್ನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಪ್ರದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರ  ರಘುನಾಥ್ ಮಲ್ಕಾಪುರೆ, ಶಾಸಕ ರಹಿಂಖಾನ .ಬಂಡೆಪ್ಪಾ ಖಾಶೆಂಪುರ, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಎಸ್ಐಐಡಿ ರಾಜ್ಯ ಅದ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಸೇರಿದಂತೆ ಹಲವಾರು ಭಾಗಿಯಾಗಿದ್ದರು. 

ದಾವಣಗೆರೆ 

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್‌ ಅವರು ಧ್ವಜಾರೋಹಣ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಎಸ್‌ಪಿ ಸಿಬಿ ರಿಷ್ಯಂತ್, ಡಿಸಿ ಶಿವಾನಂದ ಕಾಪಾಶಿ, ಸಿಇಒ ಚನ್ನಪ್ಪ ಬಾಗಿಯಾಗಿದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಸಚಿವ ಬೈರತಿ ಬಸವರಾಜ್‌ ಸನ್ಮಾನ ಮಾಡಿದ್ದಾರೆ.

ಹುಬ್ಬಳ್ಳಿ 

ಹುಬ್ಬಳ್ಳಿ ನಗರದ ನೆಹರೂ ಮೈದಾನದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹಾಗೂ ಹುಬ್ಬಳ್ಳಿ ತಾಲೂಕು ತಹಶೀಲ್ದಾರ ಶಶಿಧರ್ ಮಾಡ್ಯಾಳ್ ಧ್ವಜಾರೋಹಣ ನೆರವೇರಿಸಿದ್ದಾರೆ. ನಂತರ ಪೊಲೀಸರು ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಫಥಸಂಚಲನ ನಡೆದಿದೆ. ವಿಶೇಷ ಪಥಸಂಚಲನದ ಮೂಲಕ ಪೊಲೀಸ್ ಪಡೆ ಹಾಗೂ ವಿದ್ಯಾರ್ಥಿಗಳು ಗಮನ ಸೆಳೆದಿದ್ದಾರೆ. 

Follow Us:
Download App:
  • android
  • ios