ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಮತ್ತು ತಮಿಳುನಾಡಿಗೆ ನಿರಂತರ ನೀರು ಬಿಡುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ಶ್ರೀರಂಗಪಟ್ಟಣ (ನ.8): ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ, ತಮಿಳುನಾಡಿಗೆ ನಿರಂತರವಾಗಿ ನೀರು ಬಿಡುತ್ತಿರುವ ಪರಿಣಾಮ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿದೆ.

5 ದಿನಗಳಿಂದ 7000 ಕ್ಯುಸೆಕ್ ನೀರು ತಮಿಳುನಾಡಿಗೆ

ಕಳೆದ ಏಳೆಂಟು ದಿನಗಳ ಹಿಂದೆ ಮೂರ್ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದು 104 ಅಡಿ ನೀರು ತುಂಬಿತ್ತು. ಆದರೆ, ಕಾವೇರಿ ಪ್ರಾಧಿಕಾರದ ಆದೇಶದಂತೆ ಸರ್ಕಾರ ಕಳೆದ ಐದು ದಿನಗಳಿಂದ 7 ಸಾವಿರಕ್ಕೂ ಹೆಚ್ಚಿನ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಹಾಗೂ ನಾಲೆಗಳಿಗೆ ಬಿಡುತ್ತಿರುವ ಪರಿಣಾಮ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಹೀಗಾಗಿ ಬೇಸಿಗೆಯಲ್ಲಿ ಬೆಂಗಳೂರು ಸೇರಿದಂತೆ‌ ಕಾವೇರಿ ನೀರು ಅವಲಂಬಿತ ಜಿಲ್ಲೆಗಳಿಗೆ ಕುಡಿಯುವ‌ ನೀರಿನ ಸಮಸ್ಯೆ ಎದುರಾಗುವ ಸಂಭವವಿದೆ.

ಸದ್ಯ ಡ್ಯಾಂನಲ್ಲಿ 21 ಟಿಎಂಸಿ ನೀರು ಮಾತ್ರ ಶೇಖರಣೆಯಾಗಿದೆ. ಇದರಲ್ಲಿ 6 ಟಿಎಂಸಿ ಡೆಡ್ ಸ್ಟೋರೇಜ್ ಇದ್ದು, ಬಳಕೆಗೆ ಇರೋದು ಕೇವಲ‌ 16 ಟಿಎಂಸಿ ನೀರು ಮಾತ್ರ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ 124.80 ಅಡಿ ನೀರು ಪೂರ್ಣ ಪ್ರಮಾಣದಲ್ಲಿ ಸಂಗ್ರಹವಾಗಿತ್ತು.

ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (7-11-2026):

ಜಲಾಶಯ ಶೇಕಡ ಗರಿಷ್ಠ ಮಟ್ಟ ಇಂದಿನ ಮಟ್ಟ

  • ಕಬಿನಿ 66% 2284 2272.22
  • ಹೇಮಾವತಿ 49% 2922 2897.66
  • ತುಂಗಭದ್ರಾ 34% 1633 1609.34
  • ಸೂಪಾ(ಮೀ.) 49% 564 543.59
  • ಕೆಆರ್‌ಎಸ್ 44% 124.80 98.54
  • ಘಟಪ್ರಭಾ 93% 2175 2170.75
  • ಲಿಂಗನಮಕ್ಕಿ 50% 1819.12 1791.05
  • ಭದ್ರಾ 78% 2158 2144.58
  • ಹಾರಂಗಿ 64% 2859 2847.71
  • ಆಲಮಟ್ಟಿ(ಮೀ.) 50% 519.60 514.77
  • ನಾರಾಯಣಪುರ(ಮೀ.) 66% 492.25 489.44
  • ಮಲಪ್ರಭಾ 54% 2079.50 2064.40