ಬೆಂಗಳೂರು(ಮೇ.18): ಕೊರೋನಾ ಸೋಂಕು ಹೆಚ್ಚಳಕ್ಕೆ ತಬ್ಲಿಘಿ, ಅಜ್ಮೇರ್‌ ನಂತರ ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದ ಆಘಾತ ಎದುರಾಗಿದೆ. ರಾಜ್ಯದಲ್ಲಿ ಭಾನುವಾರ ಹೊಸದಾಗಿ 70 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ಬಹುಪಾಲು 40 ಮಂದಿ ಮಹಾರಾಷ್ಟ್ರ ಪ್ರವಾಸದಿಂದ ವಾಪಸ್ಸಾದವರಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1162ಕ್ಕೆ ಏರಿಕೆಯಾಗಿದೆ. ಜೊತೆಗೆ ಒಂದೇ ದಿನ 70 ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು. ಈವರೆಗೆ ಮೇ 15ರಂದು 69 ಪ್ರಕರಣ ದಾಖಲಾಗಿದ್ದು ದಾಖಲೆ ಆಗಿತ್ತು.

ಭಾನುವಾರ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು 22, ಬೆಂಗಳೂರಿನಲ್ಲಿ 15, ಕಲಬುರಗಿ 10, ಹಾಸನ 6, ಧಾರವಾಡ 4, ಯಾದಗಿರಿ, ಕೋಲಾರ ತಲಾ 3, ಶಿವಮೊಗ್ಗ, ದಕ್ಷಿಣ ಕನ್ನಡ ತಲಾ 2, ವಿಜಯಪುರ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ತಲಾ 1 ಪ್ರಕರಣಗಳು ದೃಢಪಟ್ಟಿವೆ.

ಮಹಾರಾಷ್ಟ್ರದಿಂದ ಬರಲಿದ್ದಾರೆ 50 ಸಾವಿರಕ್ಕೂ ಅಧಿಕ ಮಂದಿ!

ಭಾನುವಾರ ಸಂಜೆ 5 ಗಂಟೆವರೆಗೂ 55 ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಪ್ರಕಟಿಸಿತ್ತು. ಈ ಪ್ರಕಟಣೆಯಲ್ಲಿ ಬೆಂಗಳೂರಿನಲ್ಲಿ ಒಂದೂ ಕೊರೋನಾ ಸೋಂಕು ವರದಿಯಾಗಿರಲಿಲ್ಲ. ಆದರೆ, ರಾತ್ರಿ ಬಂದ ವರದಿಯಲ್ಲಿ ಶಿವಾಜಿನಗರದಲ್ಲಿ ಹೌಸ್‌ಕೀಪಿಂಗ್‌ ಸಿಬ್ಬಂದಿಯ ಸಂಪರ್ಕದಿಂದ ಮತ್ತೆ 15 ಜನರಿಗೆ ಸೋಂಕು ದೃಢಪಟ್ಟಿದೆ ಎಂದು ಬಿಬಿಎಂಪಿಯ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿವೆ. ಇದರಿಂದ ಭಾನುವಾರದ ಒಟ್ಟು ಸೋಂಕಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಶನಿವಾರದ ವರೆಗೂ ಈ ಹೌಸ್‌ಕೀಪಿಂಗ್‌ ವ್ಯಕ್ತಿಯಿಂದ 29 ವ್ಯಕ್ತಿಗಳಿಗೆ ಸೋಂಕು ಹರಡಿತ್ತು.

ಮಹಾ ಪ್ರವಾಸದಿಂದ 40 ಮಂದಿಗೆ ಸೋಂಕು:

ಮಂಡ್ಯದ 18, ಹಾಸನ, ಕಲಬುರಗಿಯ ತಲಾ 6, ಯಾದಗಿರಿ, ಧಾರವಾಡದ ತಲಾ ಮೂವರು, ಶಿವಮೊಗ್ಗದ ಇಬ್ಬರು, ಉಡುಪಿ, ದಕ್ಷಿಣ ಕನ್ನಡದ ತಲಾ ಒಬ್ಬರು ಸೇರಿ ಒಟ್ಟು 40 ಮಂದಿ ಮಹಾರಾಷ್ಟ್ರದ ಮುಬೈ, ಥಾಣೆ ಮತ್ತು ಕೊಲ್ಹಾಪುರ ಪ್ರವಾಸದ ಹಿನ್ನೆಲೆಯುಳ್ಳವರಾಗಿದ್ದಾರೆ. ಇದರಲ್ಲಿ 27 ಜನ ಪುರುಷರು, 13 ಜನ ಮಹಿಳೆಯರಾಗಿದ್ದಾರೆ. ಜೊತೆಗೆ ಕೋಲಾರದಲ್ಲಿ ತಮಿಳುನಾಡಿನ ಚೆನ್ನೈನಿಂದ ಬಂದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ.

ಇನ್ನುಳಿದ 14 ಪ್ರಕರಣಗಳಲ್ಲಿ ಮಂಡ್ಯದಲ್ಲಿ ನಾಲ್ವರಿಗೆ ಪಿ.869 ರೋಗಿಯಿಂದ ಸೋಂಕು ಹರಡಿದೆ. ಕಲಬುರಗಿಯಲ್ಲಿ ಪಿ.927ರ ಸಂಪರ್ಕದಿಂದ ಇಬ್ಬರಿಗೆ, ಕ್ವಾರಂಟೈನ್‌ ಪ್ರದೇಶದ ಒಬ್ಬರಿಗೆ, ಧಾರವಾಡದಲ್ಲಿ ಪಿ.589ನೇ ರೋಗಿಯಿಂದ ಒಬ್ಬರಿಗೆ, ವಿಜಯಪುರದಲ್ಲಿ ಪಿ.577ನೇ ರೋಗಿಯಿಂದ ಒಬ್ಬರಿಗೆ, ಉತ್ತರ ಕನ್ನಡದ ಭಟ್ಕಳದಲ್ಲಿ ಪಿ.740ನೇ ರೋಗಿಯಿಂದ ಒಬ್ಬರಿಗೆ, ಕೋಲಾರದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಒಬ್ಬರಿಗೆ ಸೋಂಕು ಹರಡಿದೆ. ಅಲ್ಲದೆ, ಕೋಲಾರ, ಕಲಬುರಗಿ ಮತ್ತು ದಕ್ಷಿಣ ಕನ್ನಡದ ಒಂದೊಂದು ಪ್ರತ್ಯೇಕ ಪ್ರಕರಣಗಳಲ್ಲಿ ಸೋಂಕಿಗೆ ಸಂಪರ್ಕ ಪತ್ತೆಕಾರ್ಯ ನಡೆಯುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಬಸ್‌ ಸ್ಟ್ಯಾಂಡ್‌ನಲ್ಲಿ ಕೊರೋನಾ ಸೋಂಕಿತನ ಶವ, ತನಿಖೆಗೆ ಸಿಎಂ ಆದೇಶ!

13 ಜನ ಡಿಸ್‌ಚಾಜ್‌ರ್‍:

ಭಾನುವಾರ ಬೆಂಗಳೂರಿನಲ್ಲಿ ಏಳು ಮಂದಿ, ಕಲಬುರಗಿಯ ನಾಲ್ವರು, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರು ಸೇರಿ ಒಟ್ಟು 13 ಜನ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಇದರಿಂದ ಒಟ್ಟು 1147 ಪ್ರಕರಣಗಳಲ್ಲಿ ಈ ವರೆಗೆ ಗುಣಮುಖರಾದವರ ಸಂಖ್ಯೆ 509ರಷ್ಟಾಗಿದೆ. 37 ಜನ ಮೃತಪಟ್ಟಿದ್ದು, ಉಳಿದ 600 ಜನರು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

9 ಮಕ್ಕಳಿಗೆ ಸೋಂಕು:

ಭಾನುವಾರ ಮಂಡ್ಯದ ಒಂದು ವರ್ಷದ ಗಂಡು ಮಗು ಸೇರಿ ಒಟ್ಟು ಒಂಬತ್ತು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ ಮೇ 10ರವರೆಗೂ ಸುಮಾರು 45 ಮಕ್ಕಳಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಮೇ 16ರ ಶನಿವಾರ ನಾಲ್ಕು ಪುಟ್ಟಮಕ್ಕಳಿಗೆ ಸೋಂಕು ದೃಢಪಟ್ಟಿತ್ತು. ಇದರಿಂದ ಸೋಂಕಿಗೊಳಗಾದ ಒಟ್ಟು ಮಕ್ಕಳ ಸಂಖ್ಯೆ ಸುಮಾರು 58ರಷ್ಟಾಗಿದೆ.

ಮೃತ ಸೋಂಕಿತರ ಸಂಖ್ಯೆ 37ಕ್ಕೆ

ಈ ಮಧ್ಯೆ ಉಡುಪಿಯಲ್ಲಿ ಶನಿವಾರ ಹೃದಯಾಘಾತದಿಂದ ಮೃತಪಟ್ಟಮುಂಬೈ ಪ್ರವಾಸ ಹಿನ್ನೆಲೆಯ 54 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇದ್ದದ್ದು ವರದಿಯಲ್ಲಿ ದೃಢಪಟ್ಟಿದೆ. ಇದರಿಂದ ಇದುವರೆಗೂ ಮೃತಪಟ್ಟಒಟ್ಟು ಸೋಂಕಿತರ ಸಂಖ್ಯೆ 37ರಷ್ಟಾಗಿದೆ.

ಉಡುಪಿಯ ಪಿ.1093 ಸಂಖ್ಯೆಯ 54 ವರ್ಷದ ಸೋಂಕಿತ ವ್ಯಕ್ತಿ ಹೃದಯ ಸಂಬಂಧಿ ತೊಂದರೆಯಿಂದ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಇವರು ಮೇ 14ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಅವರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿತ್ತು. ಮೇ 16ರಂದು ವರದಿ ಬಂದಿದ್ದು, ಸೋಂಕು ದೃಢಪಟ್ಟಿದೆ.

ಕರ್ನಾಟಕದಲ್ಲಿ ನಿನ್ನೆ ದಾಖಲೆಯ 70 ಕೇಸ್‌

ಬೆಂಗಳೂರು: ರಾಜ್ಯದಲ್ಲಿ ಭಾನುವಾರ 70 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದು ಒಂದು ದಿನದಲ್ಲಿ ದಾಖಲಾದ ಅತ್ಯಂತ ಹೆಚ್ಚು ಪ್ರಕರಣಗಳು. ಮೇ 15ರಂದು 69 ಪ್ರಕರಣ ದಾಖಲಾಗಿದ್ದು ಈವರೆಗಿನ ದಾಖಲೆ ಆಗಿತ್ತು.