Covid Crisis: ಕೋವಿಡ್ ತುಸು ಏರಿಕೆ: 628 ಕೇಸ್ ಪತ್ತೆ, 15 ಸಾವು
ರಾಜ್ಯದಲ್ಲಿ ಕೋವಿಡ್ ಪ್ರಕರಣ ಮತ್ತು ಪಾಸಿಟಿವಿಟಿ ದರದಲ್ಲಿ ತುಸು ಏರಿಕೆ ದಾಖಲಾಗಿದೆ. ಶುಕ್ರವಾರ 628 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15 ಮಂದಿ ಮರಣವನ್ನಪ್ಪಿದ್ದಾರೆ. 1,349 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,518ಕ್ಕೆ ಕುಸಿದಿದೆ.
ಬೆಂಗಳೂರು (ಫೆ.26): ರಾಜ್ಯದಲ್ಲಿ (Karnataka) ಕೋವಿಡ್ ಪ್ರಕರಣ (Covid Cases) ಮತ್ತು ಪಾಸಿಟಿವಿಟಿ ದರದಲ್ಲಿ (Positivity Rate) ತುಸು ಏರಿಕೆ ದಾಖಲಾಗಿದೆ. ಶುಕ್ರವಾರ 628 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 15 ಮಂದಿ ಮರಣವನ್ನಪ್ಪಿದ್ದಾರೆ. 1,349 ಮಂದಿ ಚೇತರಿಸಿಕೊಂಡಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,518ಕ್ಕೆ ಕುಸಿದಿದೆ. ಪಾಸಿಟಿವಿಟಿ ದರ ಶೇ.0.92ಕ್ಕೆ ಏರಿದೆ. ಜ.17ರಂದು 14 ಮಂದಿ ಮರಣವನ್ನಪ್ಪಿದ ಬಳಿಕದ ಒಂದು ದಿನದ ಕನಿಷ್ಠ ಸಾವು ಶುಕ್ರವಾರ ವರದಿಯಾಗಿದೆ.
ಬೆಂಗಳೂರು (Bengaluru) ನಗರದಲ್ಲಿ 346 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಳಗಾವಿ 30, ಚಿತ್ರದುರ್ಗ 22, ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ತಲಾ 21 ಪ್ರಕರಣ ವರದಿಯಾಗಿದೆ. ಯಾದಗಿರಿ, ಗದಗ ಜಿಲ್ಲೆಯಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಇನ್ನುಳಿದ ಜಿಲ್ಲೆಗಳಲ್ಲಿ ಒಂದಂಕಿ ಪ್ರಕರಣ ವರದಿಯಾಗಿದೆ. ಬೆಂಗಳೂರು ನಗರದಲ್ಲಿ 12 ಮಂದಿ, ತುಮಕೂರು, ಧಾರವಾಡ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ. ಶುಕ್ರವಾರ ರಾಜ್ಯದಲ್ಲಿ 1.05 ಲಕ್ಷ ಮಂದಿ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ.
Covid Crisis: ರಾಜ್ಯದಲ್ಲಿ ಕೋವಿಡ್ ಭಾರಿ ಇಳಿಕೆ: ಕೇವಲ 588 ಕೇಸ್!
1.05 ಲಕ್ಷ ಜನರಿಗೆ ಲಸಿಕೆ: ಗುರುವಾರ 1.05 ಲಕ್ಷ ಮಂದಿ ಕೋವಿಡ್ ಲಸಿಕೆ (Covid Vaccine) ಪಡೆದಿದ್ದಾರೆ. 6,298 ಮಂದಿ ಮೊದಲ ಡೋಸ್, 93,225 ಮಂದಿ ಎರಡನೇ ಡೋಸ್ ಮತ್ತು 6,372 ಮಂದಿ ಮುನ್ನೆಚ್ಚರಿಕಾ ಡೋಸ್ (Booster Dose) ಪಡೆದಿದ್ದಾರೆ. ಈವರೆಗೆ ಒಟ್ಟು 5.21 ಕೋಟಿ ಮೊದಲ ಡೋಸ್, 4.70 ಕೋಟಿ ಎರಡನೇ ಮತ್ತು 11.71 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 10.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ಬಿಎ.2ಗಿಂತ ಬಿಎ.1 ಒಮಿಕ್ರೋನ್ ಉಪತಳಿ ಅಬ್ಬರ: ರಾಜ್ಯದಲ್ಲಿ ಮೂರನೇ ಅಲೆಯನ್ನು ಒಮಿಕ್ರೋನ್‌ನ ನ ಬಿಎ1. 1.529 ಉಪ ತಳಿ ಹೆಚ್ಚು ಪ್ರಭಾವಿಸಿದೆ ಎಂಬುದು ತಳಿ ಪತ್ತೆ ಪರೀಕ್ಷೆಯಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 1,115 ಒಮಿಕ್ರೋನ್ ಪ್ರಕರಣ ಪತ್ತೆ ಆಗಿದ್ದು ಈ ಪೈಕಿ 807 ಪ್ರಕರಣಗಳು ಬಿಎ 1. 1.529 ಉಪತಳಿಗೆ ಸೇರಿದೆ. ಉಳಿದಂತೆ 219 ಪ್ರಕರಣ ಇನ್ನೊಂದು ಉಪತಳಿ ಬಿಎ2 ಗೆ ಸೇರಿದೆ. ಬಿಎ1 ರ 89 ಪ್ರಕರಣ ಪತ್ತೆಯಾಗಿದೆ.
ಎರಡನೇ ಅಲೆಯನ್ನು ಪ್ರಭಾವಿಸಿದ ಹೆಚ್ಚು ಮಾರಣಾಂತಿಕವಾದ ಡೆಲ್ಟಾರೂಪಾಂತರಿ 2022ರಲ್ಲಿ 404 ಮಂದಿಯಲ್ಲಿ ಪತ್ತೆಯಾಗಿದ್ದು ಈ ಅಪಾಯಕಾರಿ ತಳಿ ಇನ್ನೂ ಸಕ್ರಿಯವಾಗಿದೆ. ಜ.1 ರಿಂದ ಈವರೆಗೆ 1,555 ತಳಿ ಪತ್ತೆ ಪರೀಕ್ಷೆ ನಡೆದಿದ್ದು ಶೇ. 26 ಡೆಲ್ಟಾ, ಶೇ. 6ರಷ್ಟುಇಟಿಎ, ಕಪ್ಪಾ ಮತ್ತು ಪೋಗೋ ತಳಿಗಳು ಮತ್ತು ಉಳಿದ ಶೇ. 68 ಪ್ರಕರಣಗಳು ಒಮಿಕ್ರೋನ್ ಪರಿವಾರಕ್ಕೆ ಸೇರಿದೆ. ಮೊದಲ ಅಲೆಯನ್ನು ಪ್ರಭಾವಿಸಿದ್ದ ಅಲ್ಫಾ, ಬೀಟಾ ತಳಿಗಳು ಈ ವರ್ಷ ಪತ್ತೆ ಆಗಿಲ್ಲ.
Covid Crisis: ಬೆಂಗ್ಳೂರಲ್ಲಿ ಕೋವಿಡ್ ಪರೀಕ್ಷೆ ಅರ್ಧದಷ್ಟು ಇಳಿಕೆ: 7 ಸಾವು
ಕ್ಷಿಪ್ರ ನಿಯಂತ್ರಣ: ಮೂರನೇ ಅಲೆ ಜನವರಿ ತಿಂಗಳಿಡೀ ಹೆಚ್ಚು ಪ್ರಬಲವಾಗಿದ್ದರೂ ಮೊದಲ ಮತ್ತು ಎರಡನೇ ಅಲೆಗೆ ಹೋಲಿಸಿದರೆ ಕ್ಷಿಪ್ರವಾಗಿ ಹರಡಿ ಅಷ್ಟೇ ವೇಗವಾಗಿ ನಿಯಂತ್ರಣಕ್ಕೆ ಬಂದಿದೆ. ಹಾಗೆಯೇ ಈ ಹಿಂದಿನ ಅಲೆಗಳಿಗೆ ಹೋಲಿಸಿದರೆ ಸಾವುನೋವಿನ ಪ್ರಮಾಣವೂ ಕಡಿಮೆ ಇದೆ. ಈ ಹಿಂದಿನ ಅಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5ರೊಳಗೆ ತರಲು ತಿಂಗಳಾನುಗಟ್ಟಲೆ ಲಾಕ್‌ಡೌನ್ ನಂತಹ ಕಠಿಣ ಕ್ರಮವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಈ ಬಾರಿ ಸರ್ಕಾರ ಲಘು ಕ್ರಮಗಳನ್ನಷ್ಟೇ ಕೈಗೊಂಡಿತ್ತು.
ಆದರೆ ಈಗ ಪಾಸಿಟಿವಿಟಿ ದರ ಕಡಿಮೆ ಆಗುತ್ತಿದ್ದರೂ ರಾಜ್ಯದ ಹಳ್ಳಿಹಳ್ಳಿಗಳಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವರದಿ ಆಗುತ್ತಿದೆ. ಮೈಸೂರು, ಧಾರವಾಡ, ದಕ್ಷಿಣ ಕನ್ನಡ, ಚಿತ್ರದುರ್ಗ, ಬೀದರ್ ಜಿಲ್ಲೆಗಳಲ್ಲಿ ನಗರ ಭಾಗದಲ್ಲಿ ಹೆಚ್ಚು ಸೋಂಕು ಪತ್ತೆ ಆಗುತ್ತಿದ್ದರೆ ಉಳಿದ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಮಂದಿ ಸೋಂಕಿತರು ಪತ್ತೆ ಆಗುತ್ತಿದ್ದಾರೆ.