ಬೆಂಗಳೂರು(ಆ.05): ರಾಜ್ಯದಲ್ಲಿ ಸೋಮವಾರ ಕೊಂಚ ಇಳಿಕೆಯಾಗಿದ್ದ ಕೊರೋನಾ ಸೋಂಕು ಮರುದಿನವೇ ದಾಖಲೆ ಸಂಖ್ಯೆಯಲ್ಲಿ ಸ್ಫೋಟಗೊಂಡಿದೆ. ಮಂಗಳವಾರ ಒಂದೇ ದಿನ 6,259 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದೇ ದಿನ ಬೆಂಗಳೂರಿನಲ್ಲಿ 4274 ಜನ ಸೇರಿ ಸೋಂಕಿನಿಂದ ಗುಣಮುಖರಾಗಿ, ರಾಜ್ಯಾದ್ಯಂತ ದಾಖಲೆಯ 6,777 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ ಜೂ.30ರಂದು ರಾಜ್ಯದಲ್ಲಿ ಒಂದೇ ದಿನ 6128 ಮಂದಿ ಸೋಂಕು ದೃಢಪಟ್ಟಿದ್ದು, ಜು.3ರಂದು 4776 ಮಂದಿ ಗುಣಮುಖರಾಗಿದ್ದೇ ಈ ವರೆಗಿನ ದಾಖಲೆಯಾಗಿತ್ತು. ಮಂಗಳವಾರ ಸೋಂಕು ಮತ್ತು ಚೇತರಿಕೆ ಎರಡರಲ್ಲೂ ಹೊಸ ದಾಖಲೆಯೊಂದಿಗೆ ರಾಜ್ಯದ ಈ ವರೆಗಿನ ಸೋಂಕಿತರ ಸಂಖ್ಯೆ 1,39,571ಕ್ಕೆ, ಒಟ್ಟು ಗುಣಮುಖರಾದವರ ಸಂಖ್ಯೆ 62,500ಕ್ಕೆ ಏರಿಕೆಯಾಗಿದೆ.

ಆಸ್ಪತ್ರೆಯಿಂದಲೇ ಸಿಎಂ ಬಿಎಸ್‌ವೈ ಕೆಲಸ: ಚಿಕಿತ್ಸೆ ಪಡೆಯುತ್ತಲೇ ಕಡತ ಪರಿಶೀಲನೆ!

ಇದರ ನಡುವೆ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 30 ಮಂದಿ ಸೇರಿ ರಾಜ್ಯದಲ್ಲಿ ಮಂಗಳವಾರ ಒಟ್ಟು 110 ಸೋಂಕಿತರು ಸಾವನ್ನಪ್ಪಿದ್ದಾರೆ. ತನ್ಮೂಲಕ ಕೋವಿಡ್‌ಗೆ ಬಲಿಯಾದವರ ಒಟ್ಟು ಸಂಖ್ಯೆ 2594ಕ್ಕೆ (8 ಅನ್ಯ ಕಾರಣದ ಸಾವು ಹೊರತುಪಡಿಸಿ) ಏರಿಕೆಯಾಗಿದೆ.

ಉಳಿದಂತೆ ಬೆಂಗಳೂರಿನಲ್ಲಿ 36,290 ಮಂದಿ ಸೇರಿ 74,469 ಸಕ್ರಿಯ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಬೆಂಗಳೂರಲ್ಲಿ 322 ಮಂದಿ ಸೇರಿ ಗಂಭೀರ ಆರೋಗ್ಯ ಸ್ಥಿತಿಯ ಒಟ್ಟು 629 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೂ ತಗುಲಿದ ಕೊರೋನಾ ಸೋಂಕು!

ಬೆಂಗಳೂರಲ್ಲೇ 2 ಸಾವಿರಕ್ಕೂ ಹೆಚ್ಚು:

ರಾಜಧಾನಿ ಬೆಂಗಳೂರು ನಗರದಲ್ಲೇ ಮಂಗಳವಾರ ಮತ್ತೆ 2035 ಮಂದಿಗೆ ಸೋಂಕು ದೃಢಪಟ್ಟಿದೆ. ಇತರೆ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ 662, ಕಲಬುರಗಿ 285, ಬಳ್ಳಾರಿ 284, ಬೆಳಗಾವಿ 263, ದಕ್ಷಿಣ ಕನ್ನಡ 225, ದಾವಣಗೆರೆ 191, ಧಾರವಾಡ, ಹಾಸನ ತಲಾ 188, ಚಿಕ್ಕಬಳ್ಳಾಪುರ 171, ಉಡುಪಿ 170, ಕೊಪ್ಪಳ 163, ಹಾವೇರಿ 157, ರಾಯಚೂರು, ಬಾಗಲಕೋಟೆ ತಲಾ 144, ಮಂಡ್ಯ 126, ಬೀದರ್‌ 114, ಗದಗ 96, ಬೆಂಗಳೂರು ಗ್ರಾಮಾಂತರ 82, ತುಮಕೂರು 78, ಯಾದಗಿರಿ 76, ವಿಜಯಪುರ 71, ರಾಮನಗರ 65, ಚಿಕ್ಕಮಗಳೂರು 63, ಉತ್ತರ ಕನ್ನಡ, ಚಾಮರಾಜನಗರ ತಲಾ 57, ಕೋಲಾರ 46, ಕೊಡಗು 31, ಶಿವಮೊಗ್ಗ 15 ಹಾಗೂ ಚಿತ್ರದುರ್ಗದಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ.

ಸಾವು ಎಲ್ಲಿ ಎಷ್ಟು:

ಮಂಗಳವಾರ ಬೆಂಗಳೂರಿನಲ್ಲೇ 30 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಅಲ್ಲದೆ, ದಕ್ಷಿಣ ಕನ್ನಡದಲ್ಲಿ 13, ಮೈಸೂರಿನಲ್ಲಿ 9, ಧಾರವಾಡ 8, ಉಡುಪಿ 6, ಬಳ್ಳಾರಿ, ದಾವಣಗೆರೆ ತಲಾ 5, ಶಿವಮೊಗ್ಗ 4, ಚಿತ್ರದುರ್ಗ, ಚಾಮರಾಜನಗರ, ಬೀದರ್‌ ತಲಾ 3, ಕಲಬುರಗಿ, ಹಾಸನ, ಚಿಕ್ಕಬಳ್ಳಾಪುರ, ರಾಯಚೂರು, ಮಂಡ್ಯ, ಯಾದಗಿರಿ, ಚಿಕ್ಕಮಗಳೂರು ತಲಾ 2, ವಿಜಯಪುರ, ತುಮಕೂರು, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. 110 ಪ್ರಕರಣಗಳಲ್ಲಿ 19ರಲ್ಲಿ ಸೋಂಕಿನ ಮೂಲ ಪತ್ತೆಯಾಗಿಲ್ಲ. ಉಳಿದ ಪ್ರಕರಣಗಳಲ್ಲಿ ಐಎಲ್‌ಐ, ಸಾರಿ ಮತ್ತು ಇತರೆ ಪೂರ್ವ ಕಾಯಿಲೆಗಳಿಂದ ಸೋಂಕಿತರು ಬಳಲುತ್ತಿದ್ದುದಾಗಿ ಆರೋಗ್ಯ ಇಲಾಖೆ ಹೇಳಿದೆ.