ಬೆಂಗಳೂರಿನಲ್ಲಿ 46 ಕಸ ಬಳಿಯುವ ಯಂತ್ರಗಳನ್ನು 7 ವರ್ಷಗಳ ಅವಧಿಗೆ ಬಾಡಿಗೆಗೆ ಪಡೆಯಲು ರಾಜ್ಯ ಸರ್ಕಾರ 613 ಕೋಟಿ ರೂ. ಅನುಮೋದಿಸಿದೆ. ಸ್ವಂತ ಖರೀದಿಗೆ 100 ಕೋಟಿ ರೂ. ಸಾಕು ಎನ್ನುವಾಗ ಇಷ್ಟು ದೊಡ್ಡ ಮೊತ್ತದ ಬಾಡಿಗೆ ಒಪ್ಪಂದ ಭ್ರಷ್ಟಾಚಾರದ ಶಂಕೆ, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ  ಹುಟ್ಟುಹಾಕಿದೆ.

ಬೆಂಗಳೂರು (ನ.18): ನಗರ ವ್ಯಾಪ್ತಿಯಲ್ಲಿ ಮುಂದಿನ ಏಳು ವರ್ಷಗಳ ಅವಧಿಗೆ 46 ಕಸ ಬಳಿಯುವ ಯಂತ್ರ ಅಳವಡಿಸಿರುವ ವಾಹನಗಳ ಬಾಡಿಗೆಗೆ ರಾಜ್ಯ ಸರ್ಕಾರ 613 ಕೋಟಿ ರು. ಖರ್ಚು ಮಾಡಲು ಅನುಮೋದನೆ ನೀಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಯಂತ್ರಗಳ ಖರೀದಿಗೆ 100 ಕೋಟಿ ಸಾಕು:

100 ಕೋಟಿ ರು. ಖರ್ಚು ಮಾಡಿದರೆ 46 ಯಂತ್ರಗಳನ್ನು ಸ್ವಂತಕ್ಕೆ ಖರೀದಿ ಮಾಡಲು ಅವಕಾಶವಿರುವಾಗ, 613 ಕೋಟಿ ರು. ಖರ್ಚು ಮಾಡಿ ಬಾಡಿಗೆಗೆ ಪಡೆಯುವ ಅವಶ್ಯಕತೆಯಾದರೂ ಏನಿದೆ? ಎಂದು ಜಾಲತಾಣಗಳಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ.

ಬಾಡಿಗೆಯ ಹಿಂದೆ ಭ್ರಷ್ಟಾಚಾರ, ಹಗರಣದ ವಾಸನೆ ಬಡಿಯುತ್ತಿದೆ. ಒಂದು ವಾಹನಕ್ಕೆ ಬಾಡಿಗೆಗಾಗಿ ವರ್ಷಕ್ಕೆ 2 ಕೋಟಿ ರು. ಖರ್ಚು ಮಾಡುವುದು ಶಂಕಾಸ್ಪದವಾಗಿದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಬಿಬಿಎಂಪಿಯಿಂದ ಜಿಬಿಎ ಬದಲು, ಆದ್ರೆ ಹಳೆ ಚಾಳಿ ಬದಲಾಗಿಲ್ಲ:

‘ಬಿಬಿಎಂಪಿಯಿಂದ ಜಿಬಿಎ ಎಂದು ಹೆಸರು ಬದಲಾಗಿರಬಹುದು. ಆದರೆ, ಹಳೆ ಚಾಳಿಯೇ ಮುಂದುವರಿದಿದೆ. 7 ವರ್ಷಗಳ ಬಾಡಿಗೆಗೆ 613 ಕೋಟಿ ರು. ಖರ್ಚು ಮಾಡುತ್ತಿರುವುದು ಏಕೆ? ಎಂಬುದನ್ನು ಜಿಬಿಎ ಅಧಿಕಾರಿಗಳು ಸ್ಪಷ್ಟವಾಗಿ ವಿವರಿಸಬೇಕು’ ಎಂದು ಜಾಲತಾಣ ಎಕ್ಸ್‌ನಲ್ಲಿ ಮಣ್ಣಿನ ಮಗ ಎಂಬುವರು ಪ್ರಶ್ನಿಸಿದ್ದಾರೆ.

ಜಿಬಿಎ ಐಡಿಯಾಗೆ ಬೆಂಬಲಿಸಿ ಪೋಸ್ಟ್ ಮಾಡಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್ದಾರ್ ಶಾ, ವಾಹನ ಮತ್ತು ಯಂತ್ರದ ನಿರ್ವಹಣೆ ಮತ್ತು ತರಬೇತಿ ಹೊಂದಿರುವ ಸಿಬ್ಬಂದಿ ಸೇವೆಯನ್ನು ಕೂಡ ಹೊರಗುತ್ತಿಗೆ ಒಪ್ಪಂದ ಒಳಗೊಂಡಿರುತ್ತದೆ. ಸ್ವಂತಕ್ಕೆ ಖರೀದಿಸಿದರೆ ಅದರ ನಿರ್ವಹಣೆ ಮತ್ತು ಸೂಕ್ತ ಕಾರ್ಯಾಚರಣೆ ಮಾಡುವುದು ಎಂದಿಗೂ ಸವಾಲಿನದ್ದಾಗಿರುತ್ತದೆ ಎಂದಿದ್ದಾರೆ.

ನಿರ್ವಹಣೆಯ ವೆಚ್ಚವನ್ನು ಸೇರಿಸಿದರೆ ಅರ್ಧದಷ್ಟು ಹಣವೂ ಖರ್ಚಾಗುವುದಿಲ್ಲ. ತೆರಿಗೆದಾರರ ಹಣವನ್ನು ಈ ರೀತಿ ವಿನಿಯೋಗಿಸುವುದು ಸರಿಯಲ್ಲ ಎಂದು ಸುಧೀಶ್ ರಾವ್ ಪ್ರತಿಕ್ರಿಯಿಸಿದ್ದಾರೆ.

ಜಿಬಿಎ ಸ್ವಂತಕ್ಕೆ ಖರೀದಿ ಮಾಡಿದರೆ 100 ಕೋಟಿ ರು. ಒಳಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.

ಯಂತ್ರದ ಬದಲು ಇಷ್ಟು ಹಣ ಖರ್ಚು ಮಾಡಿ ಕಾರ್ಮಿಕರನ್ನು ನೇಮಿಸಿಕೊಂಡರೆ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಅನೇಕರು ಸಲಹೆ ನೀಡಿದ್ದಾರೆ.