Asianet Suvarna News Asianet Suvarna News

ಮಕ್ಕಳಿಗೆ 6 ದಿನ ಮೊಟ್ಟೆ: ವಿಪ್ರೋ ಪ್ರೇಮ್‌ಜಿ ಫೌಂಡೇಷನ್‌ನಿಂದ 1500 ಕೋಟಿ ನೆರವು?

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಸುಮಾರು 60 ಲಕ್ಷ ಮಕ್ಕಳಿಗೆ ಇನ್ಮುಂದೆ ಭಾನುವಾರ ರಜಾದಿನ ಹೊರತುಪಡಿಸಿ ವಾರದ ಉಳಿದ ಆರೂ ದಿನ ಬೇಯಿಸಿದ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನೊಂದಿಗೆ ಜು.21ರಂದು ಶಿಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. 

6 day egg for children 1500 crore aid from wipro premji foundation gvd
Author
First Published Jul 19, 2024, 9:35 AM IST | Last Updated Jul 19, 2024, 9:57 AM IST

ಲಿಂಗರಾಜು ಕೋರಾ

ಬೆಂಗಳೂರು (ಜು.19): ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿವರೆಗಿನ ಸುಮಾರು 60 ಲಕ್ಷ ಮಕ್ಕಳಿಗೆ ಇನ್ಮುಂದೆ ಭಾನುವಾರ ರಜಾದಿನ ಹೊರತುಪಡಿಸಿ ವಾರದ ಉಳಿದ ಆರೂ ದಿನ ಬೇಯಿಸಿದ ಮೊಟ್ಟೆ ನೀಡಲು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನೊಂದಿಗೆ ಜು.21ರಂದು ಶಿಕ್ಷಣ ಇಲಾಖೆಯು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ವಾರದಲ್ಲಿ ಎರಡು ದಿನ ನೀಡುತ್ತಿರುವ ಮೊಟ್ಟೆಯನ್ನು ಆರು ದಿನಗಳಿಗೆ ಹೆಚ್ಚಿಸುವ ಪ್ರಸ್ತಾವನೆಯು ಸರ್ಕಾರದಲ್ಲಿ ಮೊದಲೇ ಇತ್ತಾದರೂ ಅನುದಾನದ ಕೊರತೆಯಿಂದ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ. 

ಆದರೆ, ಈಗ ಸರ್ಕಾರ ಮೊಟ್ಟೆ ವಿತರಿಸುವ ವಾರದ ಎರಡು ದಿನ ಬಿಟ್ಟು ಉಳಿದ ನಾಲ್ಕು ದಿನವೂ ಮೊಟ್ಟೆ ನೀಡಲು ತಗಲುವ ಆರ್ಥಿಕ ನೆರವನ್ನು ಬರಿಸಲು ಅಜೀಂ ಪ್ರೇಮ್‌ಜಿ ಫೌಂಡೇಷನ್ ಮುಂದೆ ಬಂದಿದ್ದು, ಶನಿವಾರ ಈ ಸಂಬಂಧ 1500 ಕೋಟಿ ರು. ಅನುದಾನ ಒದಗಿಸುವ ಸಂಬಂಧ ಒಪ್ಪಂದಕ್ಕೆ ಸಹಿ ಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಒಪ್ಪಂದವು ಕೇವಲ ಪ್ರಸಕ್ತ ಶೈಕ್ಷಣಿಕ ಸಾಲಿಗೆ ಸೀಮಿತವಾಗಿರುವುದಿಲ್ಲ. 2024-2580 ಮೂರು ಶೈಕ್ಷಣಿಕ ಸಾಲಿಗೆ ಅನ್ವಯಿಸಲಿದೆ. 1500 ಕೋಟಿ ರು.ಗಳಲ್ಲಿ ಪ್ರತೀ ಸಾಲಿಗೆ ತಗಲುವ ಅನುದಾನವನ್ನು ಹಂತ ಹಂತವಾಗಿ ಫೌಂಡೇಷನ್ ಸರ್ಕಾರಕ್ಕೆ ಒದಗಿಸಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಖಚಿತಪಡಿಸಿವೆ. 

ಭೂಕುಸಿತವೆಂದು ಗುಡ್ಡಗಳೇ ಕುಸಿಯುತ್ತಿರೋದೇಕೆ?: ಮಾನವ ಕುಲಕ್ಕೆ ಪ್ರಕೃತಿಯ ಪ್ರತೀಕಾರ

ಈ ಹಿಂದೆ ಸರ್ಕಾರದಿಂದ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ವಾರದಲ್ಲಿ ಒಂದು ದಿನ ಮೊಟ್ಟೆ ನೀಡಲಾಗುತ್ತಿತ್ತು. ನಂತರ ಅದನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 10ನೇ ತರಗತಿವರೆಗಿನ ಮಕ್ಕಳಿಗೂ ವಿಸ್ತರಿಸಿ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡಲಾಗುತ್ತಿದೆ. ಸಂಸ್ಥೆಗಳ ಸಾಮಾಜಿಕ ಸಾಂಸ್ಥಿಕ ಜವಾಬ್ದಾರಿ (ಸಿಎಸ್‌ಆರ್) ಅನುದಾನದ ನೆರವು ದೊರೆತರೆ ಇದನ್ನು ವಾರದಲ್ಲಿ ಶೈಕ್ಷಣಿಕ ದಿನದ ಆರೂ ದಿನ ಜಾರಿಗೊಳಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚೆ ನಡೆದಿತ್ತು. ಇದೀಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ಹಣಕಾಸಿನ ನೆರವು ನೀಡಲು ಮುಂದೆ ಬಂದಿರುವುದರಿಂದ ಜಾರಿಗೊಳಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

6 ದಿನಕ್ಕೆ ಮೊಟ್ಟೆ ಖರೀದಿ ಮತ್ತು ಸರಬ ರಾಜು ಮಾಡುವ ವಿಧಾನದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸದ್ಯ ಎರಡು ದಿನಗಳ ಮೊಟ್ಟೆ ಪೂರೈಕೆ ಹೊಣೆಯನ್ನು ಆಯಾ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಗಳಿಗೆ (ಎಸ್‌ಡಿಎಂಸಿ) ನೀಡಲಾಗಿದೆ. ಸ್ಥಳೀಯ ಮಟ್ಟ ದಲ್ಲಿ ಮೊಟ್ಟೆಗಳನ್ನು ಖರೀದಿಸಿ ಶಾಲೆಯಲ್ಲೇ ಬೇಯಿಸಿ ನೀಡಲಾಗುತ್ತಿದೆ. ಇದೇ ಮಾದರಿ ಯನ್ನೇ ಉಳಿದ 4 ದಿನಗಳಿಗೂ ವಿಸ್ತರಿಸುವುದಾ ಅಥವಾ ಬದಲಾವಣೆ ಮಾಡುವುದಾ ಎಂಬ ಬಗ್ಗೆ ಫೌಂಡೇಷನ್‌ನೊಂದಿಗೆ ಚರ್ಚಿಸಿ ನಿರ್ಧಾರಿಸಲಾಗುವುದು ಎಂದು ಹೇಳಿದ್ದಾರೆ.

ವಾಲ್ಮೀಕಿ ನಿಗಮ ಹಗರಣ, ನೈತಿಕತೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆವರೆಗೂ ಪ್ರತಿಭಟನೆ: ಬಿಜೆಪಿ

60 ಲಕ್ಷ ಮಕ್ಕಳಿಗೆ ಮೊಟ್ಟೆ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಸುಮಾರು 60 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಅವರಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲು ಪ್ರಸ್ತುತ ಸರ್ಕಾರದಿಂದ 300 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ. ಈ ಪೈಕಿ ಮೊಟ್ಟೆ ತಿನ್ನಲು ನಿರಾಕರಿಸಿರುವ ಶೇ.30ರಷ್ಟು ಮಕ್ಕಳಿಗೆ ಬಾಳೆಹಣ್ಣು/ ಶೇಂಗಾ ಚಿಕ್ಕಿ ನೀಡಲಾಗುತ್ತಿದೆ.

Latest Videos
Follow Us:
Download App:
  • android
  • ios