Asianet Suvarna News Asianet Suvarna News

Jana Sevaka Initiative: 26ರಿಂದ ಜಿಲ್ಲೆಗಳಲ್ಲಿ ಆಧಾರ್‌, ಪಿಂಚಣಿ ಸೇರಿ 58 ಸೇವೆ ಮನೆಬಾಗಿಲಿಗೆ: ಸಿಎಂ

*26ರಿಂದ ಜಿಲ್ಲೆಗಳಲ್ಲಿ ಜನಸೇವಕ ಸೇವೆ ಜಾರಿ
*ಆಧಾರ್‌, ಪಿಂಚಣಿ ಸೇರಿ 58 ಸೇವೆ ಮನೆಬಾಗಿಲಿಗೆ
*ಮೊರಾರ್ಜಿ ದೇಸಾಯಿ ವಸತಿ ನಿಲಯ ಉದ್ಘಾಟನೆ

58 Services including Pension will be given door steps in 26 Districts Karnataka mnj
Author
Bengaluru, First Published Jan 5, 2022, 2:45 AM IST
  • Facebook
  • Twitter
  • Whatsapp

ಕಲಬುರಗಿ (ಜ.5): ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ‘ಜನಸೇವಕ’ ಸೇವೆಯನ್ನು (Jana Sevaka initiative) ಜ.26ರಿಂದ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ. ಹೀಗಾಗಿ ರಾಜ್ಯ ರಾಜಧಾನಿ ಬೆಂಗಳೂರಲ್ಲಿ (Bengaluru) ಕಳೆದ ವರ್ಷ ನ.1ರಂದು ಪ್ರಾಯೋಗಿಕವಾಗಿ ಜಾರಿಗೊಳಿಸಲ್ಪಟ್ಟಸೇವೆ ಇದೀಗ ಉಳಿದ ಜಿಲ್ಲೆಗಳಿಗೂ ವಿಸ್ತರಿಸಲಿದೆ.

ಮಂಗಳವಾರ ಆಳಂದ ಪಟ್ಟಣದಲ್ಲಿ ಮೊರಾರ್ಜಿ ದೇಸಾಯಿ ವಸತಿ ನಿಲಯ ಉದ್ಘಾಟನೆ ಮತ್ತು ಪ್ರಧಾನಿ ಮಂತ್ರಿ ಆವಾಸ್‌ ಯೋಜನೆಯಡಿ 1314 ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಮಾತನಾಡುವ ವೇಳೆ ಮುಖ್ಯಮಂತ್ರಿ ಬೊಮ್ಮಾಯಿ ಈ ವಿಚಾರ ಖಚಿಪಡಿಸಿದರು. ಜನರ ಸುತ್ತ ಅಭಿವೃದ್ಧಿಯಾಗಬೇಕೇ (Development) ಹೊರತು, ಅಭಿವೃದ್ಧಿ ಸುತ್ತ ಜನರಿರಬಾರದು ಎಂಬ ಅಭಿಲಾಷೆಯಿಂದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವ ಜನಸೇವಕ ಸೇವೆ ಬರುವ ಜ.26ರಿಂದ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಆಧಾರ್‌, ಪಿಂಚಣಿ ಸೇರಿ 58 ಸೇವೆ ಮನೆಬಾಗಿಲಿಗೆ

ಆಧಾರ್‌ ಕಾರ್ಡ್‌ (Aadhaar), ಅಂಗವಿಕಲರ ವೇತನ, ವಿಧವಾ ಪಿಂಚಣಿ, ವೃದ್ಧಾಪ್ಯ ವೇತನ ಸೇರಿದಂತೆ ಸರ್ಕಾರದ 8 ಇಲಾಖೆಗಳ 58 ಸೇವೆಗಳನ್ನು ಜನರ ಮನೆಗೆ ತಲುಪಿಸುವ ಜನಸೇವಕ ಸೇವೆಗೆ ಕನ್ನಡ ರಾಜ್ಯೋತ್ಸವದ (Kannada Rajyotsava) ಹಿನ್ನೆಲೆಯಲ್ಲಿ 2021ರ ನ.1ರಂದು ಬೆಂಗಳೂರು ನಗರ ಜಿಲ್ಲೆಗೆ ಸೀಮಿತಪಡಿಸಿ ಪ್ರಾಯೋಗಿಕವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದ್ದರು.

ಇದನ್ನೂ ಓದಿ36ನೇ ರಾಜ್ಯ ಪತ್ರಕರ್ತರ ಸಮ್ಮೇಳನ: ಪತ್ರಿಕೋದ್ಯಮಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದೆ: ಬೊಮ್ಮಾಯಿ!

ಜೊತೆಗೆ ಸಚಿವ ಡಾ.ಅಶ್ವತ್ಥ್‌ ನಾರಾಯಣ್‌ ಅವರ ಕ್ಷೇತ್ರವಾದ ಮಲ್ಲೇಶ್ವರ ವ್ಯಾಪ್ತಿಯ 10 ಮನೆಗಳಿಗೆ ವಿವಿಧ ಸೇವೆಗಳನ್ನು ಸ್ವತಃ ಮುಖ್ಯಮಂತ್ರಿಯವರು ಸಚಿವರೊಂದಿಗೆ ತೆರಳಿ ತಲುಪಿಸಿದ್ದರು. ಸದ್ಯ ಈ ಯೋಜನೆ ಬೆಂಗಳೂರು ನಗರಕ್ಕೆ ಸೀಮಿತವಾಗಿದ್ದು ಜ.26ರಂದು ಗ್ರಾಮೀಣ ಭಾಗಕ್ಕೂ ವಿಸ್ತರಿಸಲಾಗುವುದು. ಮುಂದಿನ ದಿನಗಳಲ್ಲಿ ಪಡಿತರವನ್ನು ಕೂಡ ನೇರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಈ ವೇಳೆ ಮಾಹಿತಿ ನೀಡಿದ್ದರು.
ರಾಮನಗರದಲ್ಲಿ ನಡೆದ ಗಲಾಟೆ

ಕರ್ನಾಟಕದ ಸಂಸ್ಕೃತಿ ಅಲ್ಲ: ಸಿಎಂ

ರಾಮನಗರದಲ್ಲಿ ಸೋಮವಾರ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ (DK Suresh) ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್‌ ನಾರಾಯಣ್‌ (Ahwath Narayan) ನಡುವೆ ನಡೆದ ಗಲಾಟೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದು ಕರ್ನಾಟಕದ ಸಂಸ್ಕೃತಿ ಅಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಇದನ್ನೂ ಓದಿ: Dharwad: ರಾಜ್ಯದ ವಿಶೇಷ ಸ್ಥಳಗಳ ಪುಸ್ತಕ ಸರಣಿ ಯೋಜನೆ: ಸಿಎಂ ಬೊಮ್ಮಾಯಿ

ನಗರದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರು ರಾಮನಗರ ಜಿಲ್ಲೆಯಲ್ಲಿ ತಮ್ಮ ಮುಂದೆಯೇ ವೇದಿಕೆ ಮೇಲೆ ನಡೆದ ಜಗಳದ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿಗಳು ಈ ರೀತಿ ಪ್ರತಿಕ್ರಿಯಿಸಿದರು. ಮಾತಿನಿಂದ ನಮ್ಮ ವಿಚಾರವನ್ನು ಹೇಳಬಹುದು. ಆದರೆ ಈ ರೀತಿ ದಾಂಧಲೆ ಮಾಡುವ ಮೂಲಕ ಹೇಳೋದು ಸರಿಯಲ್ಲ. ಆದರೆ ಈ ರೀತಿ ಬಹಿರಂಗವಾಗಿ ಇಂತಹ ವೇದಿಕೆಗಳಲ್ಲಿ ಜವಾಬ್ದಾರಿ ಸ್ಥಾನದಲ್ಲಿದ್ದವರಿಂದ ಇಂತಹ ವರ್ತನೆ ಸರಿಯಲ್ಲ. ಇದು ಕರ್ನಾಟಕದ ಸಂಸ್ಕೃತಿಯಲ್ಲ ಎಂದು ಹೇಳಿದರು.

ತಜ್ಞರ ಜೊತೆ ಸಭೆ ಬಳಿಕ ಲಾಕ್‌ಡೌನ್‌ ನಿರ್ಧಾರ

ಕೊರೋನಾ ಮತ್ತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಕೇಂದ್ರ ಸರ್ಕಾರ ಅನೇಕ ಮಾರ್ಗದರ್ಶನ ನೀಡಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಿ, ಗಡಿಗಳನ್ನು ಬಿಗಿ ಮಾಡಲಾಗಿದೆ ಎಂದರು.

ಔಷಧಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ ಶಾಲೆಗಳ ರಜೆಯ ಬಗ್ಗೆ ಉನ್ನತ ಮಟ್ಟದ ತಜ್ಞರ ಜೊತೆಗೆ ಮಾತಾಡಿ, ಅವರು ಎನು ಹೇಳುತ್ತಾರೆಯೋ ಎಂಬುದನ್ನು ಕೇಳಿ ತೀರ್ಮಾನ ಮಾಡಲಾಗುವುದು. ಈ ಸಮಯದಲ್ಲಿ ಜನರ ಸಹಕಾರ ಕೂಡಾ ಅಗತ್ಯ ಇದೆ. ಜನ ಸಹಕಾರ ನೀಡಿದರೆ ಕೋವಿಡ್‌ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಇನ್ನಷ್ಟುಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios