ನವದೆಹಲಿ(ನ.14): ಪ್ರಕೃತಿ ವಿಕೋಪದಿಂದ ಇತ್ತೀಚೆಗೆ ತೀವ್ರ ಬಾಧಿತವಾಗಿದ್ದ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ 4,382 ಕೋಟಿ ರು.ಗಳ ನೆರವು ಬಿಡುಗಡೆಗೆ ಅನುಮೋದನೆ ನಿಡಿದೆ. ಇದರಲ್ಲಿ ಕರ್ನಾಟಕಕ್ಕೆ 577.84 ಕೋಟಿ ರು. ಲಭಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರೀಯ ನೆರವು ಬಿಡುಗಡೆಗೆ ಅನುಮೋದನೆ ನೀಡಲಾಯಿತು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ಅಡಿ ನೆರವು ದೊರಕಲಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಕರ್ನಾಟಕವಲ್ಲದೆ ಪಶ್ಚಿಮ ಬಂಗಾಳ, ಒಡಿಶಾ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಸಿಕ್ಕಿಂಗಳಿಗೂ ಈ ನೆರವಿನಲ್ಲಿ ಪಾಲು ದೊರಕಲಿದೆ.

ಸಂತಸದ ಸುದ್ದಿ: ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ವ್ಯಾಪಾರಿಗಳಿಗೆ ಸಾಲ

ಇತ್ತೀಚೆಗೆ ಉತ್ತರ ಕರ್ನಾಟಕ, ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ತೀವ್ರ ಪ್ರವಾಹ ಪರಿಸ್ಥಿತಿ ಕಂಡಿದ್ದ ಕರ್ನಾಟಕಕ್ಕೆ 577.84 ಕೋಟಿ ರು., ‘ಅಂಫನ್‌’ ಚಂಡಮಾರುತದಿಂದ ಧೃತಿಗೆಟ್ಟಿದ್ದ ಪಶ್ಚಿಮ ಬಂಗಾಳಕ್ಕೆ 2,707.77 ಕೋಟಿ ರು. ಹಾಗೂ ಒಡಿಶಾಗೆ 128.23 ಕೋಟಿ ರು. ಒದಗಿಸಲಾಗಿದೆ. ‘ನಿಸರ್ಗ’ ಚಂಡಮಾರುತದಿಂದ ತತ್ತರಿಸಿದ ಮಹಾರಾಷ್ಟ್ರಕ್ಕೆ 268.59 ಕೋಟಿ ರು. ಲಭಿಸಲಿದೆ. ಮಧ್ಯಪ್ರದೇಶ ಹಾಗೂ ಸಿಕ್ಕಿಂ ಕ್ರಮವಾಗಿ 611.61 ಹಾಗೂ 87.84 ಕೋಟಿ ರು. ಪಡೆಯಲಿವೆ.