ಬಟ್ಟೆ ಅಳತೆ ನೆಪದಲ್ಲಿ ಅಪ್ರಾಪ್ತೆಯ ದೇಹ ಮುಟ್ಟಿದ ಆರೋಪ ಎದುರಿಸುತ್ತಿರುವ 53 ವರ್ಷದ ಟೈಲರ್, ಘಟನೆ ನಡೆದ ದಿನ ಆಸ್ಪತ್ರೆಯಲ್ಲಿದ್ದೆ ಎಂದು ದಾಖಲೆ ಸಲ್ಲಿಸಿದ್ದಾನೆ. ಈ ದಾಖಲೆ ಕಂಡು ದಿಗ್ಭ್ರಮೆಗೊಂಡ ಹೈಕೋರ್ಟ್, ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ತನಿಖಾಧಿಕಾರಿಗೆ ಆದೇಶಿಸಿದೆ.
ಬೆಂಗಳೂರು: ಬಟ್ಟೆ ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಅಪ್ರಾಪ್ತೆಯ ದೇಹಪೂರ್ತಿ ಮುಟ್ಟಿದ ಆರೋಪ ಎದುರಿಸುತ್ತಿರುವ 53 ವರ್ಷದ ಟೈಲರ್, ಘಟನೆ ನಡೆದ ದಿನದಂದು ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸಿ ದಾಖಲೆ ಸಲ್ಲಿಸಿರುವುದಕ್ಕೆ ದಿಗ್ಭ್ರಮೆಗೊಂಡ ಹೈಕೋರ್ಟ್, ಆಸ್ಪತ್ರೆಗೆ ಆರೋಪಿ ದಾಖಲಾದ, ಬಿಡುಗಡೆಯಾದ ಮತ್ತು ಪಡೆದಿರುವ ಚಿಕಿತ್ಸೆ ವಿವರ ಪಡೆದು ಪ್ರಮಾಣ ಪತ್ರ ಸಲ್ಲಿಸುವಂತೆ ತನಿಖಾಧಿಕಾರಿಗೆ ತಾಕೀತು ಮಾಡಿದೆ.
ಪೋಕ್ಸೋ ಕಾಯ್ದೆಯಡಿ ತನ್ನ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಆರ್.ವೆಂಕಟೇಶ್ ರೆಡ್ಡಿ (53) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿದೆ. ಅಲ್ಲದೆ, ಪ್ರಮಾಣ ಪತ್ರ ಸಲ್ಲಿಸದೆ ಹೋದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತನಿಖಾಧಿಕಾರಿಗೆ ಮೌಖಿಕವಾಗಿ ಎಚ್ಚರಿಸಿ ವಿಚಾರಣೆಯನ್ನು ಆ.20ಕ್ಕೆ ಮುಂದೂಡಿದೆ.
ಅರ್ಜಿದಾರ ವೃತ್ತಿಯಲ್ಲಿ ಟೈಲರ್. ಬಟ್ಟೆ ಹೊಲಿಯಲು ಅಳತೆ ತೆಗೆದುಕೊಳ್ಳುವ ನೆಪದಲ್ಲಿ 13 ವರ್ಷದ ಬಾಲಕಿಯ ದೇಹದ ಎಲ್ಲ ಭಾಗ ಮುಟ್ಟಿದ ಆರೋಪ ಮೇಲೆ ಅರ್ಜಿದಾರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೋಕ್ಸೋ ಕಾಯ್ದೆಯಡಿ ಸೆಕ್ಷನ್ 7, 8 ಮತ್ತು 12 ಅಡಿಯ ಅಪರಾಧ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ ಎಂದು ಆದೇಶದಲ್ಲಿ ನ್ಯಾಯಪೀಠ ಉಲ್ಲೇಖಿಸಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಾಖಲೆ ಸಲ್ಲಿಕೆ
ಘಟನೆ ನಡೆದ ದಿನದಂದು ತಾನು ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ ಎಂಬ ಆಧಾರದಲ್ಲಿ ಪ್ರಕರಣ ರದ್ದತಿಗೆ ಅರ್ಜಿದಾರ ಕೋರಿದ್ದಾರೆ. ಆದರೆ, ಯಾವ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದನ್ನು ಪರಿಶೀಲಿಸಿದಾಗ ನ್ಯಾಯಾಲಯ ಆಘಾತಕ್ಕೆ ಒಳಗಾಗಬೇಕಾಯಿತು. ಅಳತೆ ತೆಗೆದುಕೊಂಡ ದಿನ ಸೇರಿ ಆರೋಪ ಕೇಳಿಬಂದ ನಿರ್ದಿಷ್ಟ 3 ದಿನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಮಧುಮೇಹ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದೆ ಎಂದು ತಿಳಿಸುತ್ತಿರುವ ಅರ್ಜಿದಾರ, ಆ ಕುರಿತ ವೈದ್ಯಕೀಯ ದಾಖಲೆ ಸಲ್ಲಿಸಿದ್ದಾರೆ. ಹಾಗಾಗಿ, ಅದರ ಬಗ್ಗೆ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ನಂತರ ಪ್ರಕರಣದ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿರುವ ತನಿಖಾಧಿಕಾರಿ, ಇದೀಗ ಸತ್ಯಸಾಯಿ ಉನ್ನತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಅರ್ಜಿದಾರ ಈ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಆತ ಆಸ್ಪತ್ರೆಗೆ ದಾಖಲಾಗಿರುವುದು ಮತ್ತು ನಿರ್ಗಮಿಸಿರುವುದಕ್ಕೆ ಸಂಬಂಧಿಸಿದ ದಾಖಲೆ ಪಡೆದು ಆ.20ರಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಇದಕ್ಕೂ ಮುನ್ನ ವಿಚಾರಣೆ ವೇಳೆ ಆರೋಪಿ ಪರ ವಕೀಲರು, ಅರ್ಜಿದಾರ ಘಟನೆ ನಡೆದಿದೆ ಎನ್ನಲಾದ ದಿನದಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಟ್ಟೆ ಹೊಲಿಯಲು ಅಳತೆ ತೆಗೆದುಕೊಳ್ಳುವಾಗ 13 ವರ್ಷದ ಅಪ್ರಾಪ್ತೆಯ ದೇಹದ ಎಲ್ಲ ಕಡೆ ಮುಟ್ಟಿದ ಆರೋಪ ಅರ್ಜಿದಾರನ ಮೇಲಿದೆ. ಆದರೆ, ನೀವು ಅರ್ಜಿದಾರ ಚಿಕಿತ್ಸೆ ಪಡೆಯುತ್ತಿದ್ದ ಎಂದು ಹೇಳುತ್ತೀದ್ದೀರಿ. ಯಾವಾಗ ಹಾಗೂ ಯಾವ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪ್ರಶ್ನಿಸಿತು.
ತನಿಖೆಗೆ ಆದೇಶಿಸಲಾಗುವುದು ಎಂದ ಜಡ್ಜ್
ಅರ್ಜಿದಾರರ ಪರ ವಕೀಲರು ಉತ್ತರಿಸಿ, ಘಟನೆ 2026ರ ಜೂ.17ರಂದು ನಡೆದಿದೆ ಎನ್ನಲಾಗಿದೆ. ಆದರೆ. ಅರ್ಜಿದಾರರು ಜೂ.16ರಿಂದ 18ರವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಸಮಜಾಯಿಷಿ ನೀಡಿದರು. ಇದರಿಂದ ಕೋಪಗೊಂಡ ನ್ಯಾಯಮೂರ್ತಿಗಳು, ಆ ದಾಖಲೆಗಳನ್ನು ನ್ಯಾಯಾಲಯಕ್ಕೆ ಕೊಡಿ ಎಂದು ಕೇಳಿತು. ನಂತರ ಅರ್ಜಿಯೊಂದಿಗೆ ಲಗತ್ತಿಸಲಾಗಿದ್ದ ಚಿಕಿತ್ಸಾ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿಗಳು, ಅರ್ಜಿದಾರರಿಗೆ ಏನಾಗಿತ್ತು? ಮಧುಮೇಹ ಸಮಸ್ಯೆ ಕಾಡುತ್ತಿತ್ತೇ? ಮಧುಮೇಹಕ್ಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ಕಿಟೋಸಿಸ್ ಆಗಿತ್ತೇ ಎಂದು ಕೇಳಿದರಲ್ಲದೆ, ಆ ಕುರಿತು ತನಿಖೆಗೆ ಆದೇಶಿಸಲಾಗುವುದು ಎಂದು ನುಡಿದರು.


