ಒಂದು ಕೆಜಿ ಮೆಣಸಿನ ಕಾಯಿಗೆ ಹೆಚ್ಚೆಂದರೆ 100 ರು.ಗಳಿರಬಹುದು, ಆದರೆ ಮೆಣಸಿನ ಕಾಯಿ ಬೀಜದ ಬೆಲೆ ಮಾತ್ರ ಒಂದು ಕೆಜಿಗೆ 50 ಸಾವಿರ ರು.ಗಳಿದೆ. 

ಬೆಂಗಳೂರು : ಮೆಣಸಿನಕಾಯಿ ಎಂದಾಕ್ಷಣ ನಮಗೆ ಗುಂಟೂರು ಮೆಣಸು, ಬ್ಯಾಡಗಿ ಮೆಣಸು, ದಪ್ಪ ಮೆಣಸು ಹೀಗೆ ನಾಲ್ಕೈದು ತಳಿಗಳು ಮಾತ್ರ ನೆನಪಾಗುತ್ತವೆ. ಆದರೆ ಕೃಷಿ ಮೇಳದಲ್ಲಿ ಒಂದೇ ಸೂರಿನಡಿ ಸುಮಾರು 14 ಬಗೆಯ ಮೆಣಸಿನಕಾಯಿ ತಳಿಗಳನ್ನು ನೋಡಬಹುದು. ವಿಶೇಷವೆಂದರೆ ಈ ತಳಿಗಳ ಒಂದು ಕೆಜಿ ಬಿತ್ತನೆ ಬೀಜಕ್ಕೆ ಬರೋಬ್ಬರಿ 35ರಿಂದ 50 ಸಾವಿರ ಇದೆ!

ಪ್ರತಿಯೊಂದರ ಬಣ್ಣ, ಗಾತ್ರ, ರುಚಿಯಲ್ಲಿ ವೈವಿಧ್ಯತೆಯಿಂದ ಕೂಡಿದ್ದು, ಬಂಪರ್‌ ಮೆಣಸಿನಕಾಯಿ ಬೆಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಹೇಳಿ ಮಾಡಿಸಿದ ತಳಿಗಳಾಗಿವೆ. ಅಶೋಕ ಸೀಡ್ಸ್‌ ಕಂಪನಿ ಅಭಿವೃದ್ಧಿ ಪಡಿಸಿರುವ 664, 210, ಪ್ರಗತಿ, ಪ್ರಗತಿ 2, ಸೀತ 50, ತೇಜ, ನಿತ್ಯ, ಶಾಂತಿ, ದೀಪ, ಅಶೋಕ ವಂಡರ್‌, ಅಶೋಕ ಶ್ರೀ, ಕೃಷ್ಣ, ಒಮೆಗಾ ತಳಿಗಳು ಕೇಳಲು ಯಾರದ್ದೋ ಹೆಸರಿನಂತೆ ಇವೆ. ಆದರೆ, ಇವೆಲ್ಲವೂ ಹೈಬ್ರಿಡ್‌ ಮೆಣಸಿನಕಾಯಿ ತಳಿಗಳಾಗಿವೆ. ಇದಲ್ಲದೇ ಇನ್ನು ಮಾರುಕಟ್ಟೆಗೆ ಬಿಡುಗಡೆಯಾಗದ ಇನ್ನೂ 15 ತಳಿಗಳು ಸಂಶೋಧನೆ ಹಂತದಲ್ಲಿವೆ.

ಅಶೋಕ ಸೀಡ್ಸ್‌ ಕಂಪನಿ ಇದುವರೆಗೂ 14 ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು, ಇನ್ನೂ 15 ಹೈಬ್ರಿಡ್‌ ತಳಿಗಳು ಶೀಘ್ರವೇ ರೈತರಿಗೆ ಲಭ್ಯವಾಗಲಿವೆ ಎನ್ನುತ್ತಾರೆ ಕಂಪನಿಯ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್‌.

ದರಕ್ಕೆ ತಕ್ಕಂತೆ ಇಳುವರಿ!

ತೇಜ ತಳಿ ಹೆಚ್ಚು ಖಾರ ಮತ್ತು ಒಳ್ಳೆಯ ಬಣ್ಣ ಇದ್ದು, ಆಕರ್ಷಕವಾಗಿದೆ. ಒಂದು ಎಕರೆಗೆ ಕೇವಲ 60 ಗ್ರಾಂ ಬೀಜವಾದರೆ ಸಾಕು. 75 ದಿನಕ್ಕೆ ಮೊದಲ ಕೊಯ್ಲಿಗೆ ಬರುತ್ತದೆ. ಒಟ್ಟು 140 ದಿನಗಳ ವರೆಗೂ 10 ಕೊಯ್ಲುಗಳನ್ನು ಮಾಡಬಹುದಾಗಿದೆ. ಸುಮಾರು 15ರಿಂದ 16 ಕ್ವಿಂಟಾಲ್‌ ಫಸಲು ಬರುತ್ತದೆ.

ಅದೇ ರೀತಿ ಅಶೋಕ 168 ತಳಿಯು ಒಣ ಮತ್ತು ಹಸಿ ಮೆಣಸಿನಕಾಯಿಯಾಗಿ ಬಳಸಲು ಸೂಕ್ತವಾಗಿದೆ. ಮಧ್ಯಮ ಖಾರವಿದ್ದು, ಎಲ್ಲ ಕಾಲಕ್ಕೂ ಹೊಂದಿಕೊಳ್ಳುವ ತಳಿ ಇದಾಗಿದೆ. ಒಂದು ಎಕರೆಗೆ 50 ಗ್ರಾಂ ಬೀಜಗಳು ಸಾಕಾಗುತ್ತವೆ. ಒಣ ಮೆಣಸಿನಕಾಯಿಯಾಗಿ 6ರಿಂದ 8 ಕ್ವಿಂಟಾಲ್‌ ಒಂದು ಎಕರೆಗೆ ಇಳುವರಿ ಬಂದರೆ, ಹಸಿ ಮೆಣಸಿನಕಾಯಿಯಾಗಿ 18 ಕ್ವಿಂಟಾಲ್‌ ಇಳುವರಿ ಪಡೆಯಬಹುದಾಗಿದೆ.

ನಿತ್ಯ ಎಂಬ ತಳಿಯು ಮಧ್ಯಮ ಖಾರದ ತಳಿಯಾಗಿದ್ದು, ಎಲ್ಲ ಕಾಲದಲ್ಲೂ ಎಲ್ಲ ಪ್ರದೇಶಗಳಲ್ಲೂ ಬೆಳೆಯುವ ತಳಿ. ಹೀಗೆ ಪ್ರತಿಯೊಂದು ತಳಿಯ ಬೀಜಗಳು ಕೆಜಿಗೆ 30ರಿಂದ 50 ಸಾವಿರ ಇದ್ದು, ಬೆಲೆಗೆ ತಕ್ಕಂತೆ ಇಳುವರಿ ಸಿಗುತ್ತದೆ. ನರ್ಸರಿಯಲ್ಲಿ ಅಥವಾ ಭತ್ತದ ಸಸಿಗಳನ್ನು ಬೆಳೆಯುವಂತೆ ಚಿಕ್ಕ ಜಾಗದಲ್ಲಿ ಬೆಳೆದು, 35 ದಿನಗಳ ನಂತರ ಹೊಲಗಳಿಗೆ ನಾಟಿ ಮಾಡಬೇಕು. ನಂತರ 50 ದಿನಕ್ಕೆ ಮೊದಲ ಕೊಯ್ಲು ಬರುತ್ತದೆ.

ಕ್ಯಾಪ್ಸಿಕಂ ಎಲಿಫೆಂಟ್‌

ಹೈಬ್ರಿಡ್‌ ತಳಿಗಳಲ್ಲಿ ಮತ್ತೊಂದು ವಿಶೇಷ ತಳಿ ಕ್ಯಾಪ್ಸಿಕಂ ಎಲಿಫೆಂಟ್‌. ಸಾಮಾನ್ಯವಾಗಿ ಕ್ಯಾಪ್ಸಿಕಂಗಳನ್ನು ಹಸಿರು ಮನೆಗಳಲ್ಲಿ ಬೆಳೆಯಲಾಗುತ್ತದೆ. ಆದರೆ, ಈ ತಳಿಯನ್ನು ಹಸಿರು ಮನೆಯ ಹೊರಭಾಗದಲ್ಲೂ ಬೆಳೆಯಬಹುದು. ಒಂದು ಎಕರೆಗೆ ಕೇವಲ 40 ಗ್ರಾಂ ಬೀಜ ಸಾಕಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್‌ (8050724670) ಅವರನ್ನು ಸಂಪರ್ಕಿಸಬಹುದು.

ವರದಿ : ಸಂಪತ್‌ ತರೀಕೆರೆ