ಡಿಸೆಂಬರ್ ವೇಳೆಗೆ 50 ಲಕ್ಷ ವೆಚ್ಚದ ಅರ್ಜುನ ಆನೆ ಸ್ಮಾರಕ ಸಿದ್ಧ: ಸಚಿವ ಈಶ್ವರ ಖಂಡ್ರೆ
ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಈ ವರ್ಷ ಡಿಸೆಂಬರ್‌ನಲ್ಲಿ ದಸರಾ ಆನೆ ಅರ್ಜುನನ ಸ್ಮಾರಕ ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸಕಲೇಶಪುರ (ಹಾಸನ) (ಜು.07): ತಾಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಈ ವರ್ಷ ಡಿಸೆಂಬರ್‌ನಲ್ಲಿ ದಸರಾ ಆನೆ ಅರ್ಜುನನ ಸ್ಮಾರಕ ಉದ್ಘಾಟನೆಗೊಳ್ಳಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಕಾಡನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಮೃತಪಟ್ಟ ತಾಲೂಕಿನ ದಬ್ಬಳಿಕಟ್ಟೆ ಅರಣ್ಯಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಅರ್ಜುನ ಆನೆ ಮೃತಪಟ್ಟು ಡಿಸೆಂಬರ್‌ಗೆ ಒಂದು ವರ್ಷವಾಗಲಿದ್ದು, ಸರ್ಕಾರ ಆನೆ ಮೃತಪಟ್ಟ ವರ್ಷದ ಪುಣ್ಯಸ್ಮರಣೆಯನ್ನು ದಬ್ಬಳ್ಳಿಕಟ್ಟೆಯಲ್ಲಿ ಹಮ್ಮಿಕೊಳ್ಳಲಿದೆ.
ಈ ವೇಳೆಗೆ ೫೦ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸ್ಮಾರಕವನ್ನು ಉದ್ಘಾಟಿಸಲಾಗುವುದು. ಅಲ್ಲದೆ ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲೂ ಸ್ಮಾರಕ ನಿರ್ಮಿಸಲಾಗುವುದು ಎಂದರು. ಮಾನವ-ಪ್ರಾಣಿ ಸಂಘರ್ಷ ಅನಾದಿಕಾಲದಿಂದಲೂ ನಡೆಯುತ್ತಿದ್ದು, ವನ್ಯಜೀವಿಗಳೊಂದಿಗೆ ಹೊಂದಾಣಿಕೆ ಬದುಕು ಕಲಿಯಬೇಕಿದೆ. ಇಂದು ವನ್ಯಜೀವಿಗಳು ಕಾಡುಬಿಟ್ಟು ನಾಡಿಗೆ ಬರಲು ಕಾರಣ ಹುಡುಕುವ ಕೆಲಸವಾಗುತ್ತಿದ್ದು, ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಕಾರ್ಯಾಗಾರವನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ಅಲ್ಲಿ ವ್ಯಕ್ತವಾಗುವ ಅಭಿಪ್ರಾಯದಂತೆ ಮುಂದಿನ ಯೋಜನೆ ರೂಪಿಸಲಾಗುವುದು ಎಂದರು. ಕಾಡಾನೆಯಿಂದ ಮೃತಪಟ್ಟವರಿಗೆ ಹಾಗೂ ಗಾಯಗೊಂಡವರಿಗೆ ನಿಗದಿತ ಪರಿಹಾರವನ್ನು ನಿಶ್ಚಿತವಾಗಿ ನೀಡಿದ್ದೇವೆ. ಆದರೂ ಗಾಯಾಳುಗಳಿಗೆ ಪರಿಹಾರ ದೊರೆತಿಲ್ಲವೆಂದರೆ ನಮಗೆ ದೂರು ನೀಡಬಹುದು ಎಂದರು. ಕಾಡಾನೆ ದಾಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರೈಲ್ವೆ ಬ್ಯಾರಿಕೇಡ್, ಸೋಲಾರ್ ಬೇಲಿ ನಿರ್ಮಾಣ, ಕಂದಕ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ೧೩೦ ಕಿ.ಮೀ. ಸೋಲಾರ್ ಬೇಲಿಯನ್ನು ಪ್ರತಿ ಕಿ.ಮೀ.ಗೆ ಒಂದೂವರೆ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
ಬಿಜೆಪಿಯವರು ಭಾರತ್ ಅಕ್ಕಿ ಸ್ಕೀಂ ಲೋಕಸಭೆ ಎಲೆಕ್ಷನ್‌ಗಾಗಿ ತಂದದ್ದು: ಸಿಎಂ ಸಿದ್ದರಾಮಯ್ಯ
ಇನ್ನೂ ೧೦೧ ಕಿ.ಮೀ.ಸೋಲಾರ್ ಬೇಲಿ ಒಂದು ವರ್ಷದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ಆಗಸ್ಟ್ ತಿಂಗಳ ಒಳಗಾಗಿ ಬೇಡಿಕೆ ಇರುವ ಎಲ್ಲ ಸೋಲಾರ್ ಬೇಲಿ ಪ್ರಸ್ತಾವನೆಗಳಿಗೆ ಮಂಜೂರಾತಿ ನೀಡುವ ಮೂಲಕ ಕಾಮಗಾರಿ ಆರಂಭಿಸಲಾಗುವುದು. ಕಾಡಾನೆ ಸಮಸ್ಯೆ ನಿವಾರಣೆಗೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು. ಉಸ್ತುವರಿ ಸಚಿವ ಕೆ.ಎನ್. ರಾಜಣ್ಣ, ಶಾಸಕ ಸಿಮೆಂಟ್ ಮಂಜು ಮತ್ತಿತರರು ಇದ್ದರು.