ರಾಮನಗರ ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗುತ್ತಿದ್ದು, ಕಾಡಾನೆಗಳ ದಾಳಿ ತಡೆಗಟ್ಟಲು 50 ಕೋಟಿ ರೂ. ವೆಚ್ಚದಲ್ಲಿ ಆನೆ ಕ್ಯಾಂಪ್ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಾಮನಗರ (ಜ.28): ರಾಜ್ಯ ರಾಜಧಾನಿ ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹೆಚ್ಚಾಗಿದೆ. ಅದರಲ್ಲಿಯೂ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು, 50 ಕೋಟಿ ರೂ. ವೆಚ್ಚದಲ್ಲಿ ಆನೆ ಕ್ಯಾಂಪ್ ನಿರ್ಮಾಣ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ರಾಮನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ. ಪರಿಸರ ಸಮತೋಲಕ್ಕೆ ಮನುಷ್ಯನಷ್ಟೇ ಪ್ರಾಣಿಗಳೂ ಮುಖ್ಯ. ಆದರೆ, ನಮ್ಮ ರಾಜ್ಯದಲ್ಲಿ ಕಾಡಾನೆಗಳ ಸಂತತಿ ಹೆಚ್ಚಾಗಿದೆ. ಅರಣ್ಯದಲ್ಲಿ ಆಹಾರದ ಕೊರತೆ ಇದ್ದಾಗ ಜನವಸತಿ ಪ್ರದೇಶಕ್ಕೆ ಕಾಡಾನೆಗಳು ಬರುತ್ತಿವೆ. ರೈತರ ಜಮೀನಿನ ಬೆಳೆಗಳನ್ನ ತಿಂದು ಹಾಕುತ್ತಿವೆ. ಇದರ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದೇನೆ. ಈಗಾಗಲೇ ಜಿಲ್ಲೆಗೆ ಎರಡು ಆನೆ ಕಾರ್ಯಪಡೆ ನೀಡಲಾಗಿದೆ. ಮತ್ತೊಂದು ಆನೆ ಕಾರ್ಯಪಡೆಗೆ ಬೇಡಿಕೆ ಇದೆ. ಅದನ್ನ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದು ಹೇಳಿದರು.
ರಾಮನಗರ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಾಡಂಚಿನಲ್ಲಿ ಸಂಪೂರ್ಣ ರೈಲ್ವೆ ಬ್ಯಾರೀಕೇಡ್ ಹಾಕುವ ಬಗ್ಗೆ ಅನುದಾನ ನೀಡುತ್ತೇವೆ. ರೈತರಿಗೆ ಶೀಘ್ರವಾಗಿ ಪರಿಹಾರ ನೀಡುವ ಕೆಲಸ ಮಾಡುತ್ತಿದ್ದೇವೆ. ಡ್ರೋನ್ ವ್ಯವಸ್ಥೆ, ರೇಡಿಯೋ ಕಾಲರ್ ಮೂಲಕ ಆನೆಗಳ ಚಲನವಲನದ ಬಗ್ಗೆ ನಿಗಾ ಇರಿಸಲಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಯೋಜನಾ ವರದಿ ತಯಾರು ಮಾಡಿದ್ದಾರೆ. ಇದಕ್ಕೆ 300 ಕೋಟಿ ರೂ. ಹಣ ಬೇಕಾಗಿದೆ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ಅನುದಾನ ಪಡೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರಾಮನಗರ ಜಿಲ್ಲೆಯ ಕಾಡಂಚಿನ ಗ್ರಾಮಗಳಿಗೆ ಲಗ್ಗೆಯಿಟ್ಟು ದಾಳಿ ಮಾಡುವ ಕಾಡಾನೆಗಳನ್ನ ಸೆರೆಹಿಡಿದು ಆನೆ ಕ್ಯಾಂಪ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇಲ್ಲಿ ಹೊಸದಾಗಿ ದೊಡ್ಡ ಆನೆ ಕ್ಯಾಂಪ್ ನಿರ್ಮಾಣ ಮಾಡುವುದಕ್ಕೆ ಸುಮಾರು 50 ಕೋಟಿ ರೂಪಾಯಿ ಖರ್ಚಾಗಲಿದೆ. ಈ ಬಗ್ಗೆ ಕೂಡಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಮುಂದಿನ 24 ತಿಂಗಳಲ್ಲಿ ಸಂಪೂರ್ಣ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಅರಣ್ಯ ಕಾಯ್ದೆಗಳು ಸಾಕಷ್ಟು ಗಂಭೀರವಾಗಿವೆ. ಏನೇ ಮಾಡಿದರೂ ಕೇಂದ್ರದ ಅನುಮತಿ ಪಡೆದು ಕೆಲಸ ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಇದನ್ನೂ ಓದಿ: ಇಡೀ ಗ್ರಾಮವೇ ಇಕ್ಬಾಲ್ ಹುಸೇನ್ ಹೆಸರಲ್ಲಿ? ಗ್ರಾಮಸ್ಥರ ಆರೋಪ ಸುಳ್ಳು ನಾನೊಬ್ಬ ರೈತನ ಮಗ ಅಂತಾರೆ ಶಾಸಕ!
ಇದೇ ಸಭೆಯಲ್ಲಿ ಮಾತನಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಈ ಹಿಂದೆ ಆನೆ ದಾಳಿಯಿಂದ ರೈತರು ಸಾವನ್ನಪ್ಪಿದ್ದಾಗ ಸಚಿವರು ಜಿಲ್ಲೆಗೆ ಬಂದಿದ್ದರು. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮನವಿ ಮಾಡಿದ್ದೆವು. ಹೀಗಾಗಿ, 60 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ 300 ಕೋಟಿ ರೂ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲು ಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು ಆನೆ ಕಾರ್ಯಪಡೆಗೂ ನಾವು ಮನವಿ ಮಾಡಿದ್ದೇವೆ. ಸಂಪೂರ್ಣ ಬ್ಯಾರಿಕೇಡ್ ಹಾಗೂ ಆನೆ ಕ್ಯಾಂಪ್ ಮಾಡಬೇಕು ಅಂತ ಸಚಿವರಿಗೆ ಮನವಿ ಮಾಡಲಾಗಿದೆ. ರೈತರು ಬೆಳೆ ಪರಿಹಾರದ ಬಗ್ಗೆಯೂ ಸಚಿವರು ಮಾಹಿತಿ ನೀಡಲಿದ್ದಾರೆ. ನಿಮ್ಮ ಪರವಾಗಿ ಸರ್ಕಾರ ಇದೆ ಎಂದು ಹೇಳಿದರು.
ಚನ್ನಪಟ್ಟಣದ ಜನರು ವಿಶ್ವಾಸ ಇಟ್ಟು ಯೋಗೇಶ್ವರ್ ಅವರನ್ನು ಆಯ್ಕೆ ಮಾಡಿದ್ದೀರಿ. ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಮೇಲೆ ವಿಶ್ವಾಸ ಇಟ್ಟು ಆಯ್ಕೆ ಮಾಡಿದ್ದೀರಿ. ಚುನಾವಣಾ ಪೂರ್ವದಲ್ಲಿ ಏನೆಲ್ಲ ಭರವಸೆ ನೀಡಿದ್ದೆವೋ ಅವೆಲ್ಲವನ್ನೂ ಬಗೆಹರಿಸಲಾಗುತ್ತದೆ. ತೆಂಗು, ಮಾವು, ಎಲ್ಲಾ ಬೆಳೆ ನಾಶಕ್ಕೂ ಅರಣ್ಯ ಇಲಾಖೆ ಪರಿಹಾರ ನೀಡುತ್ತಿದೆ. ರೈತರ ಆನೆ ಹಾವಳಿಯಿಂದ ರೈತರ ವ್ಯವಸಾಯವನ್ನೆ ಬಿಟ್ಟಿದ್ದಾರೆ. ನಾನು ಸಿಎಂ ಬಳಿ ಮಾತನಾಡ್ತೇನೆ. ರೈತರಿಗೆ ಒಂದು ಶಾಶ್ವತ ಪರಿಹಾರ ನೀಡಬೇಕು ಅಂತ ಮನವಿ ಮಾಡುತ್ತೇನೆ ಎಂದು ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.
ಇದನ್ನೂ ಓದಿ: ಮದುವೆ ನಿಶ್ಚಯವಾಗಿದ್ದ, ಕನಕಪುರ ನರೇಗಾ ಇಂಜಿನಿಯರ್ ಶರಣ್ಯಾ ಗೌಡ ಅಪಘಾತದಲ್ಲಿ ಸಾವು!
