ತಾಯಿ ಮಡಿಲು ಸೇರಲು ವಿಮಾನದಲ್ಲಿ ಒಬ್ಬನೇ ಬಂದ 5ರ ಬಾಲಕ!
ವಿಮಾನದಲ್ಲಿ ಒಬ್ಬನೇ ಬಂದ 5ರ ಬಾಲಕ!| 3 ತಿಂಗಳಿಂದ ದಿಲ್ಲಿಯ ಅಜ್ಜಿ ಮನೆಯಲ್ಲಿದ್ದ ಹುಡುಗ| ಪೋಷಕರು ಜೊತೆಗೆ ಇಲ್ಲದೆ ಬೆಂಗಳೂರಿಗೆ ಪ್ರಯಾಣ| ವಿಶೇಷ ಕೇಸೆಂದು ಪರಿಗಣಿಸಿ ಕ್ವಾರಂಟೈನ್ ವಿನಾಯಿತಿ
ಬೆಂಗಳೂರು(ಮೇ.26): ಕಳೆದ ಮೂರು ತಿಂಗಳಿಂದ ತಾಯಿಯಿಂದ ದೂರವಿದ್ದ ಐದು ವರ್ಷದ ಬಾಲಕ ದೆಹಲಿಯಿಂದ ಒಬ್ಬನೇ ವಿಮಾನದಲ್ಲಿ ಮರಳಿ ಬಂದು ತಾಯಿ ಮಡಿಲು ಸೇರಿದ ಹೃದಯಸ್ಪರ್ಶಿ ಘಟನೆಗೆ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾಕ್ಷಿಯಾಯಿತು.
ದೆಹಲಿಯಿಂದ ಒಂಟಿಯಾಗಿ ಬರಲಿದ್ದ ಮಗನಿಗಾಗಿ ಬೆಳಗ್ಗೆ ಆರು ಗಂಟೆಯಿಂದ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದ ತಾಯಿ, ಮಗನನ್ನು ಕಂಡ ತಕ್ಷಣ ಬಿಗಿದಪ್ಪಿ ಮುದ್ದಾಡಿ ಆನಂದಬಾಷ್ಪ ಸುರಿಸಿದರು. ತಾಯಿ-ಮಗ ಒಂದಾದ ದೃಶ್ಯ ಕಂಡು ವಿಮಾನ ನಿಲ್ದಾಣದ ಪ್ರಯಾಣಿಕರು ಖುಷಿಪಟ್ಟರು.
ಚಲಿಸುವ ರೈಲಿನಲ್ಲಿಯೇ ಮಗುವಿಗೆ ಜನ್ಮ, ಸೆಲ್ಯೂಟ್ ಬೆಂಗಳೂರು ಪೊಲೀಸ್
ತಾಯಿಯ ಮಡಿಲು ಸೇರಿದ ಈ ಬಾಲಕ ಕಳೆದ ಫೆಬ್ರವರಿ ಅಂತ್ಯದಲ್ಲಿ ಪಾಲಕರೊಂದಿಗೆ ದೆಹಲಿಯ ಅಜ್ಜ-ಅಜ್ಜಿ ಮನೆಗೆ ತೆರಳಿದ್ದ. ಕೆಲವು ದಿನ ದೆಹಲಿಯಲ್ಲೇ ಇದ್ದ ಪಾಲಕರು, ಬಾಲಕನನ್ನು ಪೋಷಕರ ಬಳಿಯೇ ಬಿಟ್ಟು ಕಾರ್ಯ ನಿಮಿತ್ತ ಬೆಂಗಳೂರಿಗೆ ವಾಪಸಾಗಿದ್ದರು.
ಇದಾದ ಬಳಿಕ ಕೊರೋನಾ ಹಿನ್ನೆಲೆಯಲ್ಲಿ ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ್ದರಿಂದ ವಿಮಾನ, ರೈಲು, ಬಸ್ ಸೇರಿದಂತೆ ಸಾರಿಗೆ ಸ್ಥಗಿತವಾದ ಹಿನ್ನೆಲೆಯಲ್ಲಿ ಪಾಲಕರು ಮತ್ತೆ ದೆಹಲಿಗೆ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಬಾಲಕ ಅಜ್ಜ-ಅಜ್ಜಿಯ ಬಳಿಯೇ ಉಳಿಯಬೇಕಾಯಿತು. ಈ ನಡುವೆ ಪಾಲಕರು ನಿತ್ಯ ಕರೆ ಮಾಡಿ ಮಗನ ಆರೋಗ್ಯ ವಿಚಾರಿಸುತ್ತಿದ್ದರು. ಪ್ರೀತಿಯ ಮಗನನ್ನು ಕಾಣಲಾಗದೆ ರೋದಿಸಿದ್ದರು.
ಅಜ್ಜ-ಅಜ್ಜಿಗೆ ಕ್ವಾರಂಟೈನ್ ಭಯ:
ಮೇ 19ರ ಬಳಿಕ ಲಾಕ್‌ಡೌನ್ ಸಡಿಲಗೊಳಿಸಿ ಆಯ್ದ ಸ್ಥಳಗಳಿಗೆ ರೈಲು ಸಂಚಾರ ಆರಂಭವಾದರೂ ದೆಹಲಿಯ ಅಜ್ಜ-ಅಜ್ಜಿಗೆ ಮೊಮ್ಮಗನನ್ನು ಬೆಂಗಳೂರಿಗೆ ಕರೆತರಲು ಸಾಧ್ಯವಾಗಿರಲಿಲ್ಲ. ಏಕೆಂದರೆ, ಅವರು ಬೆಂಗಳೂರಿಗೆ ಬಂದಿದ್ದರೆ 14 ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಬೇಕಾಗಿತ್ತು. ಹೀಗಾಗಿ ಅವರು ಇಲ್ಲಿಗೆ ಬರಲು ಹಿಂದೇಟು ಹಾಕಿದ್ದರು. ಸೋಮವಾರ ವಿಮಾನ ಸೇವೆ ಆರಂಭವಾದ್ದರಿಂದ ಪಾಲಕರ ಮನವಿ ಮೇರೆಗೆ ವಿಮಾನಯಾನ ಕಂಪನಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಬಾಲಕನಿಗೆ ಬೆಂಗಳೂರಿಗೆ ಪ್ರಯಾಣಿಸಲು ಅನುಕೂಲ ಮಾಡಿಕೊಟ್ಟಿತ್ತು. ವಿಮಾನದ ಸಿಬ್ಬಂದಿ ಜತನದಿಂದ ಬಾಲಕನನ್ನು ಕರೆತಂದು ತಾಯಿಯ ಮಡಿಲು ಸೇರಿಸಿದರು.
ದೇಶೀಯ ವಿಮಾನ ಸಂಚಾರ ಆರಂಭ: ಪ್ರಯಾಣಿಕರಿಗೆ ಹೊಸ ಆಘಾತ!
ಬಾಲಕ ಹೈ ರಿಸ್ಕ್ ಪಟ್ಟಿಯಲ್ಲಿರುವ ದೆಹಲಿಯಿಂದ ನಗರಕ್ಕೆ ಬಂದಿದ್ದರೂ ಪಾಲಕರ ಮನವಿ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಭಾವಿಸಿ ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿದೆ. ಆದರೆ, ಕಡ್ಡಾಯವಾಗಿ ಹೋಂ ಕ್ವಾರಂಟೈನ್‌ಗೆ ಸೂಚಿಸಲಾಗಿದೆ. ಅಧಿಕಾರಿಗಳು ಬಾಲಕ ಹಾಗೂ ಪಾಲಕರ ಪೂರ್ಣ ಮಾಹಿತಿ ಸಂಗ್ರಹಿಸಿ, ಬಳಿಕ ಮನೆಗೆ ತೆರಳಲು ಅನುವು ಮಾಡಿಕೊಟ್ಟರು.