ಟ್ರಾಫಿಕ್ ದಂಡ ಪಾವತಿಗೆ ಮುಗಿಬಿದ್ದ ಜನ: ಒಂದೇ ದಿನ 5.6 ಕೋಟಿ ಸಂಗ್ರಹ!
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ಫೆ.11ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಿರುವುದಕ್ಕೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಂಗಳೂರು (ಫೆ.04): ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತ ಪಾವತಿಗೆ ರಾಜ್ಯ ಸರ್ಕಾರ ಫೆ.11ರವರೆಗೆ ಶೇ.50ರಷ್ಟು ರಿಯಾಯಿತಿ ನೀಡಿರುವುದಕ್ಕೆ ರಾಜಧಾನಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನವಾದ ಶುಕ್ರವಾರ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ನಗರದ ಸಂಚಾರ ಪೊಲೀಸ್ ಠಾಣೆಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದರು.
ರಾಜ್ಯ ಸರ್ಕಾರ ಒಮ್ಮೆಗೆ ಮಾತ್ರ ಈ ರಿಯಾಯಿತಿ ದಂಡ ಪಾವತಿಗೆ ಅವಕಾಶ ಕಲ್ಪಿಸಿರುವುದರಿಂದ ಸಾಕಷ್ಟು ಮಂದಿ ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಲು ಮುಂದಾದರು. ನಗರದ ಸಂಚಾರ ಪೊಲೀಸ್ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಟಿಎಂಸಿ ಕಟ್ಟಡದ ಬಳಿಯೂ ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ದಂಡ ಪಾವತಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.
ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಕಟ್ಟಿದರೆ 50% ರಿಯಾಯಿತಿ: ಸರ್ಕಾರದ ಆದೇಶ
ಇನ್ನು ಕರ್ನಾಟಕ ಒನ್ ವೆಬ್‌ಸೈಟ್ ಹಾಗೂ ಪೇಟಿಎಂ ಆ್ಯಪ್‌ನಲ್ಲಿ ಬಾಕಿ ದಂಡ ಪಾವತಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ ವಾಹನ ನೋಂದಣಿ ಸಂಖ್ಯೆ ನಮೂದಿಸಿದರೆ, ಆ ವಾಹನದ ವಿರುದ್ಧ ದಾಖಲಾದ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳ ಸಂಖ್ಯೆ ಹಾಗೂ ರಿಯಾಯಿತಿ ದಂಡದ ಮೊತ್ತ ತೆರೆದುಕೊಳ್ಳಲಿದೆ. ಈ ವೇಳೆ ಆನ್‌ಲೈನ್‌ನಲ್ಲಿ ಸಾರ್ವಜನಿಕರು ಆ ದಂಡದ ಮೊತ್ತವನ್ನು ಪಾವತಿಸಬಹುದಾಗಿದೆ. ಸಂಚಾರ ಪೊಲೀಸ್ ಠಾಣೆಗಳು ಹಾಗೂ ಟಿಎಂಸಿ ಕಟ್ಟಡದಲ್ಲಿ ದಂಡ ಪಾವತಿಸುವವರ ಸಂಖ್ಯೆಗಿಂತ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿ ಮಾಡಿದವರ ಸಂಖ್ಯೆ ಹೆಚ್ಚಿತ್ತು.
ಸರ್ವರ್ ಡೌನ್: ಏಕಕಾಲಕ್ಕೆ ಭಾರೀ ಸಂಖ್ಯೆ ಜನರು ಬೆಂಗಳೂರು ಸಂಚಾರ ಪೊಲೀಸ್ ವೆಬ್‌ಸೈಟ್ ಮುಖಾಂತರ ಆನ್‌ಲೈನ್‌ನಲ್ಲಿ ಬಾಕಿ ದಂಡ ಪಾವತಿಗೆ ಮುಂದಾದ ಹಿನ್ನೆಲೆಯಲ್ಲಿ ವೆಬ್‌ಸೈಟ್‌ನ ಸರ್ವರ್ ಡೌನ್ ಆಗಿ ಕೊನೆಗೆ ವೆಬ್ ಪೇಜ್ ತೆರೆಯದಂತಾಗಿತ್ತು. ಈ ಬಗ್ಗೆ ಹಲವರು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತ ಸಂಚಾರ ಪೊಲೀಸರು, ಸರ್ವರ್ ದುರಸ್ಥಿಗೆ ಕ್ರಮ ಕೈಗೊಂಡರು. ಆದರೂ ಸಂಜೆವರೆಗೂ ವೆಬ್‌ಸೈಟ್‌ನ ಸರ್ವರ್ ನಿಧಾನಗತಿಯಲ್ಲಿ ಕಾರ್ಯ ನಿರ್ವಹಿಸಿತು. ಇನ್ನು ಸಾಕಷ್ಟು ಮಂದಿ ಪೆಟಿಎಂ ಆ್ಯಪ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡದ ಮೊತ್ತ ಪಾವತಿಸಿದರು.
ಬಾಕಿ ಮೊತ್ತ ಹೆಚ್ಚಿದ್ದವರಿಗೆ ವರದಾನ: ಕೆಲವು ವಾಹನಗಳ ವಿರುದ್ಧ 10ರಿಂದ 15 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ದಂಡದ ಮೊತ್ತವೇ .10 ಸಾವಿರಕ್ಕೂ ಅಧಿಕವಿರುತ್ತದೆ. ಭಾರೀ ಪ್ರಮಾಣದ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ಈ ಶೇ.50ರ ರಿಯಾಯಿತಿ ಅವಕಾಶ ವರದಾನವಾಗಿದೆ. ಈ ಹಿಂದೆ ಕೆಲ ವಾಹನ ಸವಾರರು 30, 40 ಸಾವಿರ ದಂಡದ ಮೊತ್ತ ಬಾಕಿ ಉಳಿಸಿಕೊಂಡು ಪೊಲೀಸರಿಗೆ ಸಿಕ್ಕಿಬಿದ್ದು ಪೇಚಿಗೆ ಸಿಲುಕಿದ ನಿದರ್ಶನಗಳು ಇವೆ. ಹೀಗಾಗಿ ಹೆಚ್ಚಿನ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ಈ ರಿಯಾಯಿತಿ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳಬಹುದಾಗಿದೆ.
ಇಲ್ಲಿ ದಂಡ ಪಾವತಿಸಬಹುದು
ಹತ್ತಿರದ ಸಂಚಾರ ಪೊಲೀಸ್ ಠಾಣೆ
ಇನ್ಫಾಂಟ್ರಿ ರಸ್ತೆಯ ಟಿಎಂಸಿ ಕಟ್ಟಡ
ಕರ್ನಾಟಕ ಒನ್ ವೆಬ್‌ಸೈಟ್
ಪೆಟಿಎಂ ಆ್ಯಪ್
ದಾಖಲೆಯ 7561 ಕೋಟಿ ರು. ಅನುದಾನ: ರಾಜ್ಯಕ್ಕೆ ರೈಲ್ವೆ ಬಂಪರ್!
ಯಾವುದಕ್ಕೆ ಎಷ್ಟು ದಂಡ?
ಉಲ್ಲಂಘನೆ ನಿಗದಿತ ದಂಡ(.) ರಿಯಾಯಿತಿ ದಂಡ(.)
ಹೆಲ್ಮೆಟ್ 500 250
ವೇಗದ ಚಾಲನೆ 2,000 1,000
ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 1,000 500
ಟ್ರಾಫಿಕ್ ಸಿಗ್ನಲ್ ಜಂಪ್ 500 250
ದೋಷಪೂರಿತ ನೋಂದಣಿ ಫಲಕ 500 250
ಒನ್ ವೇ/ನೋ ಎಂಟ್ರಿ 500 250
ನೋ ಪಾರ್ಕಿಂಗ್ 500 250
ಲಘು ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 3,000 1,500
ಭಾರೀ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 5,000 2,500