2.67 ಕೋಟಿ ಪುರುಷ, 2.64 ಕೋಟಿ ಮಹಿಳಾ, 4927 ಇತರೆ ಮತದಾರರು, ಮೊದಲ ಬಾರಿಗೆ ಮತ ಚಲಾವಣೆಯ ಹಕ್ಕು ಪಡೆದವರ ಸಂಖ್ಯೆ 11.71 ಲಕ್ಷ.
ಬೆಂಗಳೂರು(ಏ.27): ಮುಂದಿನ ತಿಂಗಳು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 5.31 ಕೋಟಿ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಈ ತಿಂಗಳಾಂತ್ಯದೊಳಗೆ ಮತದಾರರ ಚೀಟಿ ಹಾಗೂ ಬಾಕಿ ಇರುವ 3.50 ಲಕ್ಷ ಜನರ ಮತದಾರರ ಗುರುತಿನ ಚೀಟಿ ವಿತರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15ರಂದು ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 5.30 ಕೋಟಿ ಮತದಾರರು ಅರ್ಹರಿದ್ದರು. ನಂತರದಲ್ಲಿ 16.04 ಲಕ್ಷ ಮತದಾರರು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಮತದಾರರ ಪೈಕಿ 2.67 ಕೋಟಿ ರು. ಪುರುಷರು, 2.64 ಕೋಟಿ ಮಹಿಳೆಯರು ಹಾಗೂ 4,927 ಇತರೆ ಮತದಾರರಿದ್ದಾರೆ. ಮೊದಲ ಬಾರಿಗೆ ಮತ ಚಲಾಯಿಸುವ ಯುವ ಮತದಾರರು 11.71 ಲಕ್ಷ ಇದ್ದು, 6.45 ಲಕ್ಷ ಪುರುಷರು, 5.26 ಲಕ್ಷ ಮಹಿಳೆಯರು, 181 ಇತರರು ಇದ್ದಾರೆ ಎಂದು ಹೇಳಿದರು. ಏ. 25ರವರೆಗೆ 37.94 ಲಕ್ಷ ‘ಮತದಾರರ ಗುರುತಿನ ಚೀಟಿ’ ವಿತರಿಸಿದ್ದು, ಬಾಕಿ ಇರುವ 3.50 ಮತದಾರರ ಗುರುತಿನ ಚೀಟಿಯನ್ನು ತಿಂಗಳ ಅಂತ್ಯಕ್ಕೆ ವಿತರಿಸಲಾಗುವುದು ಎಂದು ತಿಳಿಸಿದರು.
Karnataka Assembly Elections 2023: ಮತದಾನ ದಿನ ವಾರ್ಡ್‌ಗೊಂದು ಆ್ಯಂಬುಲೆನ್ಸ್..!
ಬೆಳಗಾವಿಯಲ್ಲಿ ಹೆಚ್ಚು ಸೇವಾ ಮತ:
ರಾಜ್ಯ ಹಾಗೂ ದೇಶದ ವಿವಿಧ ಭಾಗದ 561 ಇಲಾಖೆ/ಕಚೇರಿಗಳಲ್ಲಿ 47,488 ಸೇವಾ ಮತದಾರರಿದ್ದಾರೆ. ಎಲ್ಲ ಸೇವಾ ಮತದಾರರಿಗೆ ವಿದ್ಯುನ್ಮಾನವಾಗಿ ಅಂಚೆ ಮತಪತ್ರಗಳನ್ನು ಕಳುಹಿಸಲಾಗಿದೆ. ಸೇವಾ ಮತದಾರರಿಂದ ಚಲಾಯಿಸುವ ಅಂಚೆ ಮತಪತ್ರಗಳು ಎಣಿಕೆಯ ದಿನದಂದು ಬೆಳಗ್ಗೆ 8ಗಂಟೆಗೆ ಅಥವಾ ಅದಕ್ಕಿಂತ ಮುಂಚಿತವಾಗಿ ಚುನಾವಣಾಧಿಕಾರಿಗಳಿಗೆ ತಲುಪಬೇಕಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತ್ಯಧಿಕ 20,424 ಸೇವಾ ಮತದಾರರಿದ್ದಾರೆ. ನಂತರ ಬಾಗಲಕೋಟೆ ಜಿಲ್ಲೆಯಲ್ಲಿ 3,262 ಸೇವಾ ಮತದಾರರಿದಾರೆ ಎಂದು ವಿವರಿಸಿದರು.
ಒಟ್ಟು 58,545 ಮತಗಟ್ಟೆ ಸ್ಥಾಪನೆ
ಮತದಾರರ ಸಂಖ್ಯೆಗನುಗುಣವಾಗಿ ಈ ಮೊದಲು 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಮತದಾರರ ಸಂಖ್ಯೆ ನೋಂದಣಿಯಲ್ಲಿ ಹೆಚ್ಚಳವಾಗಿರುವುದರಿಂದ 263 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 2018ರ ಚುನಾವಣೆಯಲ್ಲಿ 56,696 ಮತಗಟ್ಟೆಸ್ಥಾಪಿಸಲಾಗಿತ್ತು. ಮತದಾನ ಕೇಂದ್ರದಲ್ಲಿ ಮೂಲಸೌಲಭ್ಯ, ಆಯ್ದ ಸ್ಥಳಗಳಲ್ಲಿ ಮತದಾರರಿಗೆ ಕುರ್ಚಿಗಳನ್ನು ಒಳಗೊಂಡ ಶಾಮಿಯಾನ ಒದಗಿಸಲಾಗುತ್ತದೆ. ಕೆಲವು ಜಿಲ್ಲೆಯಲ್ಲಿ ವಿಶ್ರಾಂತಿ ಕೊಠಡಿಯಲ್ಲಿ ಮತದಾರರಿಗೆ ಟೋಕನ್ ನೀಡಲಾಗುವುದು. ಇದು ಸರತಿಯಲ್ಲಿ ನಿಲ್ಲುವ ಸಮಯವನ್ನು ಕಡಿಮೆ ಮಾಡಲಿದೆ.
1,15 ಲಕ್ಷ ಬ್ಯಾಲೆಟ್ ಯೂನಿಟ್ ಬಳಕೆ
ಚುನಾವಣೆಯಲ್ಲಿ 1,15,709 ಬ್ಯಾಲೆಟ್ ಯೂನಿಟ್ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್ ಯೂನಿಟ್, 89,379 ವಿವಿಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈಗಾಗಲೇ ಇವಿಎಂ ಬಗ್ಗೆ ಅರಿವು ಕಾರ್ಯಕ್ರಮ ಮಾಡಲಾಗಿದೆ. 16 ವಿಧಾನಸಭೆ ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯೂನಿಟ್‌ಗಳನ್ನು ಬಳಸಲಾಗುವುದು.
ಕೊಡಗು: ಮತದಾರರ ಓಲೈಕೆಗೆ ಅಭ್ಯರ್ಥಿಗಳ ತಂತ್ರಗಾರಿಕೆ ಬಿರುಸು
80,459 ಸಿಬ್ಬಂದಿ ಭದ್ರತೆಗೆ ನಿಯೋಜನೆ
ಚುನಾವಣೆ ಶಾಂತಿಯುತವಾಗಿ ನಡೆಯಲು ಭದ್ರತೆಗಾಗಿ 80,459 ಸಿಬ್ಬಂದಿ ನಿಯೋಜಿಸಲಾಗಿದೆ. 54,682 ಪೊಲೀಸ್ ಸಿಬ್ಬಂದಿ, 20 ಸಾವಿರ ಗೃಹ ರಕ್ಷಕ ಸಿಬ್ಬಂದಿ, 90 ಕೆಎಸ್‌ಆರ್‌ಪಿ ತುಕಡಿ, 5,037 ಸಿಎಆರ್/ಡಿಎಆರ್, 650 ಎಸ್‌ಎಪಿ/ಸಿಎಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 650 ಎಸ್‌ಎಪಿ/ಸಿಎಪಿಎಫ್ ಸಿಬ್ಬಂದಿ ಪೈಕಿ 405 ಸಿಬ್ಬಂದಿ ಈಗಾಗಲೇ ರಾಜ್ಯಕ್ಕೆ ಆಗಮಿಸಿದ್ದು, 245 ಸಿಬ್ಬಂದಿ ಶೀಘ್ರದಲ್ಲಿಯೇ ಬರಲಿದ್ದಾರೆ.
ಬಳ್ಳಾರಿಯಲ್ಲಿ ಅತಿ ಹೆಚ್ಚು, 7 ಕಡೆ ಕಡಿಮೆ ಅಭ್ಯರ್ಥಿಗಳು
ಚುನಾವಣಾ ಕಣದಲ್ಲಿ 2,615 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 2429 ಪುರುಷರು, 185 ಮಹಿಳೆಯರು ಮತ್ತು ಇತರೇ ಒಬ್ಬರು ಅಭ್ಯರ್ಥಿ ಕಣದಲ್ಲಿದ್ದಾರೆ. ಬಳ್ಳಾರಿ ನಗರ ವಿಧಾನ ಕ್ಷೇತ್ರದಲ್ಲಿ ಅತಿ ಹೆಚ್ಚು 24 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೊಸಕೋಟೆಯಲ್ಲಿ 23, ಚಿತ್ರದುರ್ಗದಲ್ಲಿ 21 ಹಾಗೂ ಯಲಹಂಕ ಕ್ಷೇತ್ರದಲ್ಲಿ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಯಮಕನಮರಡಿ, ದೇವದುರ್ಗ, ತೀರ್ಥಹಳ್ಳಿ, ಕುಂದಾಪುರ, ಕಾಪು, ಮಂಗಳೂರು, ಬಂಟ್ವಾಳ ಕ್ಷೇತ್ರದಲ್ಲಿ ತಲಾ ಐವರು ಸ್ಪರ್ಧಿಸಿದ್ದಾರೆ.
