Asianet Suvarna News Asianet Suvarna News

Karnataka Assembly Elections 2023: ಮತದಾನ ದಿನ ವಾರ್ಡ್‌ಗೊಂದು ಆ್ಯಂಬುಲೆನ್ಸ್‌..!

ಬೆಂಗಳೂರು ನಗರದ ಪ್ರತಿ ವಾರ್ಡ್‌ಗೊಂದು ಆ್ಯಂಬುಲೆನ್ಸ್‌, ಅಧಿಕಾರಿಗಳು, ಮತದಾರರಿಗೆ ಆರೋಗ್ಯ ಸಮಸ್ಯೆ ಆದರೆ ತಕ್ಷಣ ಸ್ಪಂದಿಸಲು ನಗರ ಚುನಾವಣಾ ವಿಭಾಗದಿಂದ ಸಿದ್ಧತೆ. 

Ambulance to the Ward on Polling Day in Bengaluru grg
Author
First Published Apr 27, 2023, 5:27 AM IST

ಬೆಂಗಳೂರು(ಏ.27): ವಿಧಾನಸಭಾ ಚುನಾವಣೆ ಸಮರ್ಪಕವಾಗಿ ನಡೆಸಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಮತದಾನದ ದಿನದಂದು ಮತದಾರರು ಮತ್ತು ಮತಗಟ್ಟೆಸಿಬ್ಬಂದಿ ಆರೋಗ್ಯ ಕಾಪಾಡುವ ಸಲುವಾಗಿ ಎಲ್ಲ 243 ವಾರ್ಡ್‌ಗಳಲ್ಲೂ ತಲಾ ಒಂದು ಆ್ಯಂಬುಲೆನ್ಸ್‌ ಕಾಯ್ದಿರಿಸಲಾಗುತ್ತಿದೆ.

ಮತಗಟ್ಟೆ ಅಧಿಕಾರಿಗಳಾಗಿ ಕೆಲಸ ಮಾಡುವವರು ಮತದಾನದ ಹಿಂದಿನ ದಿನವೇ ಮತಗಟ್ಟೆಗಳಿಗೆ ತೆರಳಿ ವಾಸ್ತವ್ಯ ಹೂಡುತ್ತಾರೆ. ಹೀಗೆ ಹೋಗುವ ಅಧಿಕಾರಿ, ಸಿಬ್ಬಂದಿ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳದಿದ್ದರೆ, ಆಹಾರದಲ್ಲಿ ವ್ಯತ್ಯಾಸವಾದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಅದೇ ರೀತಿ ಮತ ಚಲಾಯಿಸಲು ಬರುವ ಮತದಾರರು ಸರತಿ ಸಾಲಲ್ಲಿ ನಿಲ್ಲುವುದು ಸೇರಿ ಇನ್ನಿತರ ಕಾರಣಗಳಿಂದ ಆರೋಗ್ಯ ಹಾಳಾಗುವ ಸಾಧ್ಯತೆಗಳೂ ಇರುತ್ತವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ತಪಾಸಣೆ ಮಾಡಲು ಹಾಗೂ ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಬಿಬಿಎಂಪಿಯ ಎಲ್ಲ 243 ವಾರ್ಡ್‌ಗಳಲ್ಲಿ ತಲಾ ಒಂದು ಆ್ಯಂಬುಲೆನ್ಸ್‌ ಕಾಯ್ದಿರಿಸಲು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ ನಿರ್ಧರಿಸಿದೆ.

ಮತದಾನ ಹೆಚ್ಚಿಸಲು ತಂತ್ರ: ಚುನಾವಣಾ ಕಚೇರಿಗೆ ವರ್ಣರಂಜಿತ ಮೇಕ್ ಓವರ್ ನೀಡಿದ ಮಂಗಳಮುಖಿಯರು

ಬಿಬಿಎಂಪಿ ನಿರ್ವಹಣೆಯಲ್ಲಿನ ಆಸ್ಪತ್ರೆಗಳಲ್ಲಿ 10ಕ್ಕೂ ಹೆಚ್ಚಿನ ಆ್ಯಂಬುಲೆನ್ಸ್‌ಗಳಿವೆ. ಅದರ ಜತೆಗೆ ಆರೋಗ್ಯ ಇಲಾಖೆ ಅಡಿಯಲ್ಲಿನ 108 ಆ್ಯಂಬುಲೆನ್ಸ್‌ಗಳು, ಖಾಸಗಿ ಆಸ್ಪತ್ರೆಗಳಲ್ಲಿನ ಆ್ಯಂಬುಲೆನ್ಸ್‌ಗಳನ್ನು ಚುನಾವಣಾ ಕೆಲಸಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಬಿಬಿಎಂಪಿಯ 243 ವಾರ್ಡ್‌ಗಳಲ್ಲಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್‌ನಲ್ಲಿನ ವೈದ್ಯರು ಹಾಗೂ ನರ್ಸ್‌ಗಳನ್ನು ಆ್ಯಂಬುಲೆನ್ಸ್‌ಗಳಲ್ಲಿ ಕೆಲಸ ಮಾಡಲು ನಿಯೋಜಿಸಲಾಗುತ್ತದೆ. ಪ್ರತಿ ಆ್ಯಂಬುಲೆನ್ಸ್‌ನಲ್ಲಿ ಒಬ್ಬರು ವೈದ್ಯರು ಹಾಗೂ ಇಬ್ಬರು ನರ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆ್ಯಂಬುಲೆನ್ಸ್‌ಗಳಲ್ಲಿ ಬಿಸಿಲಿನ ತಾಪಕ್ಕೆ ಸುಸ್ತಾದಾಗ ಆರೈಕೆ ಮಾಡಲು ಬೇಕಾಗುವ ಔಷಧಗಳನ್ನು ಮುಖ್ಯವಾಗಿ ಇಡಲಾಗುತ್ತದೆ. ಅದರ ಜತೆಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯವಿರುವ ಔಷಧಗಳು, ವೈದ್ಯಕೀಯ ಪರಿಕರಗಳನ್ನು ಇಡಲಾಗುತ್ತದೆ. ಅಲ್ಲದೆ, ವಾರ್ಡ್‌ನ ಯಾವುದಾದರೊಂದು ಕಡೆ ಆ್ಯಂಬುಲೆನ್ಸನ್ನು ನಿಲ್ಲಿಸಲಾಗುತ್ತದೆ. ಯಾವುದಾದರು ಮತಗಟ್ಟೆಯಲ್ಲಿ ತುರ್ತು ಪರಿಸ್ಥಿತಿ ಎದುರಾದರೆ ಆ್ಯಂಬುಲೆನ್ಸ್‌ನಲ್ಲಿನ ಚಾಲಕರು ಅಥವಾ ವೈದ್ಯರಿಗೆ ಕರೆ ಮಾಡಿದರೆ, ಅವರು ಕೂಡಲೆ ಮತಗಟ್ಟೆಗೆ ತೆರಳಿ ಚಿಕಿತ್ಸೆ ನೀಡಲಿದ್ದಾರೆ. ಅದಕ್ಕಾಗಿ ಮತಗಟ್ಟೆಗೆ ಸಿಬ್ಬಂದಿ ತೆರಳುವ ಸಂದರ್ಭದಲ್ಲಿ ಆ್ಯಂಬುಲೆನ್ಸ್‌ ಕರೆಸಲು ಬೇಕಾದ ದೂರವಾಣಿ ಸಂಖ್ಯೆಯನ್ನು ನೀಡಲಾಗುತ್ತದೆ.

Follow Us:
Download App:
  • android
  • ios