ಕೊರೋನಾ ರಣಕೇಕೆ: ರಾಜ್ಯದಲ್ಲಿ ಸಕ್ರಿಯ ಕೇಸು ಸಂಖ್ಯೆ ಈಗ 5 ಲಕ್ಷ..!
ಒಂದೇ ದಿನ 49,058 ಹೊಸ ಕೊರೋನಾ ಕೇಸ್, 328 ಸಾವು|ಗುಣಮುಖರ ಸಂಖ್ಯೆ 19 ಸಾವಿರಕ್ಕೆ ಕುಸಿತ| ಎರಡೇ ದಿನದಲ್ಲಿ 99 ಸಾವಿರ ಪ್ರಕರಣ|ಸಕ್ರಿಯ ಕೇಸು ಮೊದಲ ಅಲೆಗಿಂತ 5 ಪಟ್ಟು ಹೆಚ್ಚಳ: ಹೆಚ್ಚಿದ ಆತಂಕ|
ಬೆಂಗಳೂರು(ಮೇ.07): ರಾಜ್ಯದಲ್ಲಿ ಗುರುವಾರ 49,058 ಜನರಲ್ಲಿ ಕೊರೋನಾ ಸೋಂಕು ದೃಢಪಡುವುದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 5.17 ಲಕ್ಷ ತಲುಪಿದೆ. ಮೊದಲ ಅಲೆಯಲ್ಲಿ ಗರಿಷ್ಠ 1.25 ಲಕ್ಷದಷ್ಟಿದ್ದ ಸಕ್ರಿಯ ಪ್ರಕರಣ ಈಗ ಹೆಚ್ಚು ಕಡಿಮೆ ಐದು ಪಟ್ಟು ಹೆಚ್ಚಾಗಿದೆ.
ಗುರುವಾರ 49,058 ಹೊಸ ಪ್ರಕರಣ ಪತ್ತೆಯಾಗಿದ್ದು 328 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 18,943 ಜನರು ಗುಣಮುಖರಾಗಿದ್ದಾರೆ. ಬೆಂಗಳೂರು ನಗರದಲ್ಲಿ 3.32 ಲಕ್ಷ ಮತ್ತು ಅನ್ಯ ಭಾಗದಲ್ಲಿ 1.84 ಲಕ್ಷ ಸಕ್ರಿಯ ಪ್ರಕರಣಗಳಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಏರುತ್ತಿದ್ದಂತೆ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಕುಸಿಯುತ್ತಿದೆ. ಮಾಚ್‌ರ್‍ನಲ್ಲಿ ಶೇ.98ರಷ್ಟಿದ್ದ ಚೇತರಿಸಿಕೊಂಡವರ ಪ್ರಮಾಣ ಈಗ ಶೇ.70ಕ್ಕೆ ಇಳಿದಿದೆ. ಕಳೆದೆರಡು ದಿನಗಳಲ್ಲೇ ರಾಜ್ಯದ ಕೋವಿಡ್ ಸೋಂಕಿನ ಖಾತೆಗೆ 99,170 ಪ್ರಕರಣಗಳ ಸೇರ್ಪಡೆಯಾದಂತೆ ಆಗಿದೆ. ಪಾಸಿಟಿವಿಟಿ ದರ ಶೇ.29.83ರಷ್ಟಿದೆ.
"
50 ಸಾವಿರಕ್ಕೆ ಕೆಲವು ಕಮ್ಮಿ.. ಕರ್ನಾಟಕದಲ್ಲಿ ನಿಯಂತ್ರಣಕ್ಕೆ ಬರ್ತಿಲ್ಲ!
ಸತತ ಎರಡನೇ ದಿನ 300 ಕ್ಕಿಂತ ಹೆಚ್ಚು ಸಾವು ದಾಖಲಾಗಿದೆ. ಬೆಂಗಳೂರು ನಗರದಲ್ಲಿ 139 ಮಂದಿ ಅಸುನೀಗಿದ್ದು, ಮರಣ ದರ ಶೇ.0.66 ದಾಖಲಾಗಿದೆ. ಬೆಂಗಳೂರು ಹೊರತು ಪಡಿಸಿ ಆರು ಜಿಲ್ಲೆಗಳಲ್ಲಿ 10ಕ್ಕಿಂತ ಹೆಚ್ಚು ಸಾವು ವರದಿಯಾಗಿದೆ. 18,943 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಈ ಮಧ್ಯೆ 1.64 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು ಮೇ 2ರ ಬಳಿಕ ಮೊದಲ ಬಾರಿಗೆ 1.60 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ನಡೆದಿದೆ. ಈವರೆಗೆ ಒಟ್ಟು 2.65 ಕೋಟಿ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಈವರೆಗೆ 17.90 ಲಕ್ಷ ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು 12.55 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 17,212 ಮಂದಿ ಮೃತರಾಗಿದ್ದಾರೆ.
ಸಾವು ಎಲ್ಲಿ ಎಷ್ಟು?:
ಬೆಂಗಳೂರು ನಗರದಲ್ಲಿ 139, ಬಳ್ಳಾರಿಯಲ್ಲಿ 26, ಮೈಸೂರು 18, ಶಿವಮೊಗ್ಗ 16, ತುಮಕೂರು, ಕಲಬುರಗಿ ತಲಾ 14, ಕೊಡಗು 12, ರಾಮನಗರ ಮತ್ತು ಹಾಸನ ತಲಾ 9, ಬೆಂಗಳೂರು ಗ್ರಾಮಾಂತರ 8, ಬಾಗಲಕೋಟೆ 7, ವಿಜಯಪುರ, ಉತ್ತರ ಕನ್ನಡ, ಧಾರವಾಡ ತಲಾ 6, ಚಾಮರಾಜನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ತಲಾ 5, ಬೀದರ್ 4, ಹಾವೇರಿ, ದಾವಣಗೆರೆ, ಚಿಕ್ಕಬಳ್ಳಾಪುರ ತಲಾ 3, ಯಾದಗಿರಿ, ಮಂಡ್ಯ, ಗದಗ ತಲಾ 2 ಮತ್ತು ಬೆಳಗಾವಿಯಲ್ಲಿ ತಲಾ ಒಬ್ಬರು ಮೃತರಾಗಿದ್ದಾರೆ.
ಮಿತಿ ಮೀರಿದ ಸೋಂಕು : 2 ವಾರ ಲಾಕ್ಡೌನ್ ಪಕ್ಕಾ!
ಜಿಲ್ಲೆಗಳಲ್ಲೂ ಸಾವಿರ ಸಾವಿರ ಸೋಂಕಿತರು:
ಬೆಂಗಳೂರು ನಗರದಲ್ಲಿ 23,706, ಮೈಸೂರು 2,531, ತುಮಕೂರು 2,418, ಕಲಬುರಗಿ 1,652, ಉಡುಪಿ 1,526, ಹಾಸನ 1,403, ಮಂಡ್ಯ 1,301, ದಕ್ಷಿಣ ಕನ್ನಡ 1,191 ಜಿಲ್ಲೆಯಲ್ಲಿ ಸೋಂಕು ಧೃಢ ಪಟ್ಟಿದೆ. ಗದಗದಲ್ಲಿ 191 ಪ್ರಕರಣ ಹೊರತು ಪಡಿಸಿ ಉಳಿದಂತೆ ಎಲ್ಲ ಜಿಲ್ಲೆಯಲ್ಲಿ 200 ಕ್ಕಿಂತ ಹೆಚ್ಚು ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
ಕೇವಲ 42 ಸಾವಿರ ಮಂದಿಗೆ ಲಸಿಕೆ
ರಾಜ್ಯದಲ್ಲಿ ಗುರುವಾರ 201 ಲಸಿಕಾ ಕೇಂದ್ರದಲ್ಲಿ ಒಟ್ಟು 42,850 ಮಂದಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. 60 ವರ್ಷ ಮೇಲ್ಪಟ್ಟ21,425, 44 ವರ್ಷದಿಂದ 59 ವರ್ಷದೊಳಗಿನ 9,552, 18 ರಿಂದ 44 ವರ್ಷದೊಳಗಿನ 363, ಆರೋಗ್ಯ ಕಾರ್ಯಕರ್ತರು 518, 1408 ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona