ಬೆಂಗಳೂರು (ಮೇ.07):  ಕೊರೋನಾ ಸೋಂಕಿನ ಪ್ರಮಾಣ ಎಲ್ಲೆ ಮೀರುತ್ತಿರುವುದರಿಂದ ರಾಜ್ಯದಲ್ಲಿ ಎರಡು ವಾರಗಳ ಲಾಕ್‌ಡೌನ್‌ ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ.

ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳಲಿದೆ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರದೇ ಇರುವುದರಿಂದ ಲಾಕ್‌ಡೌನ್‌ ವಿಧಿಸುವುದೊಂದೇ ಈಗ ಉಳಿದಿರುವ ಮಾರ್ಗ ಎಂಬ ನಿಲುವಿಗೆ ಸರ್ಕಾರ ಬಂದಿದೆ. ಈ ಸಂಬಂಧ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ್ದು, ರೂಪರೇಷೆಗಳನ್ನು ಸಿದ್ಧಪಡಿಸುವಲ್ಲಿ ನಿರತರಾಗಿದ್ದಾರೆ.

ಈಗಿರುವ ಜನತಾ ಕರ್ಫ್ಯೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದರೆ ಲಾಕ್‌ಡೌನ್‌ ವಿಧಿಸುವ ಅಗತ್ಯ ಬೀಳುತ್ತಿರಲಿಲ್ಲ. ಆದರೆ, ಜನರು ನಿಯಮಗಳನ್ನು ಪಾಲಿಸದೆ ಅನಗತ್ಯವಾಗಿ ಸಂಚರಿಸಿದ್ದರಿಂದ ಕೊರೋನಾ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಲೇ ಇಲ್ಲ. ಈಗಾಗಲೇ ಸೋಂಕಿತರಿಂದಾಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಿದೆ. ಬೆಡ್‌ಗಳು ಸಿಗುತ್ತಿಲ್ಲ. ಆಕ್ಸಿಜನ್‌ ಕೊರತೆಯಾಗಿದೆ. ಪರಿಸ್ಥಿತಿ ಇನ್ನೂ ಕೆಲ ದಿನಗಳ ಕಾಲ ಹೀಗೆಯೇ ಮುಂದುವರೆದರೆ ಇಡೀ ಆರೋಗ್ಯ ವ್ಯವಸ್ಥೆಯೇ ಕುಸಿದು ಹೋಗಲಿದೆ ಎಂಬ ಆತಂಕ ಉಂಟಾಗಿದೆ. ಈ ಕಾರಣಕ್ಕಾಗಿಯೇ ಲಾಕ್‌ಡೌನ್‌ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

4 ರಾಜ್ಯದ CM,ಇಬ್ಬರು ರಾಜ್ಯಪಾಲರ ಜೊತೆ ಮೋದಿ ಮಾತು; ಕೊರೋನಾ ಸ್ಥಿತಿಗತಿ ಚರ್ಚೆ! ..

ಲಾಕ್‌ಡೌನ್‌ ವಿಧಿಸುವಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸೇರಿದಂತೆ ರಾಜ್ಯದ ಹಲವು ಸಚಿವರು ಬಹಿರಂಗವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳ ನಾಯಕರೂ ಹಿಂದೆಯೇ ಈ ಮಾತನ್ನು ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳ ಶಾಸಕರು ಲಾಕ್‌ಡೌನ್‌ ಅನಿವಾರ್ಯ ಎಂಬುದನ್ನು ಪ್ರತಿಪಾದಿಸುತ್ತಿದ್ದಾರೆ.

ಇನ್ನು ತಜ್ಞರು ಜನತಾ ಕರ್ಫ್ಯೂ ಜಾರಿಗೆ ತರುವ ಮೊದಲೇ ಲಾಕ್‌ಡೌನ್‌ ಜಾರಿಗೊಳಿಸುವುದು ಅಗತ್ಯ ಎಂಬುದನ್ನು ಸರ್ಕಾರಕ್ಕೆ ಅಂಕಿ ಅಂಶಗಳ ಸಮೇತ ವರದಿ ಸಲ್ಲಿಸಿದ್ದರು. ಅಲ್ಲದೆ, ಸಚಿವ ಸಂಪುಟ ಸಭೆಯಲ್ಲೂ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದರು. ಆದರೆ, ಇದಕ್ಕೆ ಮೀನಮೇಷ ಎಣಿಸಿದ ಸರ್ಕಾರ ಈಗ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

"

ಇಂದು ಲಾಕ್‌ಡೌನ್‌ ಬಗ್ಗೆ ಚರ್ಚೆ:  ಈ ನಡುವೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶುಕ್ರವಾರ ಸಂಜೆ 6ಗಂಟೆಗೆ ತಮ್ಮ ನಿವಾಸದಲ್ಲಿ ಕೋವಿಡ್‌ ಉಸ್ತುವಾರಿ ಹೊತ್ತಿರುವ ಸಚಿವರ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಪ್ರಸಕ್ತ ಬೆಳವಣಿಗೆಗಳ ಜೊತೆಗೆ ಲಾಕ್‌ಡೌನ್‌ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಲಿದೆ. ದೇಶದ ಇತರ ರಾಜ್ಯಗಳಲ್ಲಿ ಲಾಕ್‌ಡೌನ್‌ ವಿಧಿಸಿರುವ ಮಾದರಿ ಬಗ್ಗೆ ಸಮಾಲೋಚನೆ ನಡೆಯಲಿದೆ. ಬಳಿಕ ಈ ತಿಂಗಳ 10ರ ವೇಳೆಗೆ (ಸೋಮವಾರ) ನಿರ್ಧಾರ ತೆಗೆದುಕೊಂಡು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona