ರಾಜ್ಯದ ವಂದೇ ಭಾರತ್ ರೈಲು ಇಂದಿನಿಂದ ‘ಓಟ’ ಚೆನ್ನೈ-ಮೈಸೂರು ಪ್ರಾಯೋಗಿಕ ಸಂಚಾರ ದೇಶದ ಅತಿ ವೇಗದ ರೈಲು: 11ಕ್ಕೆ ಚಾಲನೆ
ಬೆಂಗಳೂರು (ನ.7) : ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಬೆಂಗಳೂರು-ಮೈಸೂರು ನಡುವೆ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಆರಂಭಿಸಿದೆ. ಈ ರೈಲು ಚೆನ್ನೈನ ಪೆರಂಬೂರಿನಲ್ಲಿರುವ ಐಸಿಎಫ್‌ನಲ್ಲಿ(ಇಂಟಿಗ್ರಲ್ ಕೋಚ್ ಫ್ಯಾಕ್ಟರಿ) ಸಿದ್ಧವಾಗಿದೆ. ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ ಮಾರ್ಪಾಡು ಮಾಡಲು ಟ್ರಯಲ್ ರನ್ ನಡೆಸಲಾಗುತ್ತಿದೆ. ಭಾನುವಾರ ತಡರಾತ್ರಿ ಚೆನ್ನೈ ರೈಲು ನಿಲ್ದಾಣದಿಂದ ಹೊರಟಿದ್ದು, ಸೋಮವಾರ ಬೆಳಿಗ್ಗೆ 10.20ಕ್ಕೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಆಗಮಿಸಲಿದೆ. 10.30ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ ಮೈಸೂರು ತಲುಪಲಿದೆ. ಬಳಿಕ ಮೈಸೂರಿನಿಂದ ಬೆಂಗಳೂರಿಗೆ ಮಧ್ಯಾಹ್ನ 2.55ಕ್ಕೆ ಆಗಮಿಸಲಿದ್ದು, 3.10ಕ್ಕೆ ಚೆನ್ನೈನತ್ತ ಹೊರಡಲಿದೆ.
ತಜ್ಞರು ರೈಲಿನಲ್ಲಿ ಸಂಚರಿಸಿ ತಾಂತ್ರಿಕ ದೋಷ ಪತ್ತೆ ಮಾಡಲಿದ್ದಾರೆ. ಬಳಿಕ ಐಸಿಎಫ್‌ನಲ್ಲಿ ಅಗತ್ಯ ಮಾರ್ಪಾಡು ಮಾಡಲಿದ್ದಾರೆ. ಸಾರ್ವಜನಿಕರಿಗೆ ರೈಲಿನಲ್ಲಿ ಪ್ರವೇಶವಿಲ್ಲ. ರೈಲ್ವೆ ಸಿಬ್ಬಂದಿಗಳು ಮಾತ್ರ ಓಡಾಟ ನಡೆಸಲಿದ್ದಾರೆ ಎಂದು ಬೆಂಗಳೂರು ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದರು. ನ.11ರಂದು ಬೆಳಿಗ್ಗೆ 10.50ಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಈ ರೈಲಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
Vande Bharat Express: ಚೆನ್ನೈ-ಮೈಸೂರು ಪ್ರಯಾಣಕ್ಕೆ 921 ರೂಪಾಯಿ ಟಿಕೆಟ್!
ದೇಶದ ಅತ್ಯಂತ ವೇಗದ ರೈಲು ಇದಾಗಿದ್ದು, ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತ ಶರವೇಗದಲ್ಲಿ ಓಡಲಿದೆ. ಆದರೆ ಮೈಸೂರು-ಚೆನ್ನೈ ಮಾರ್ಗದಲ್ಲಿ ದೇಶದ ಇತರೆಡೆ ಸಂಚರಿಸುತ್ತಿರುವಷ್ಟುವೇಗದಲ್ಲಿ ಈ ರೈಲು ಓಡುವುದಿಲ್ಲ ಎಂದು ಹೇಳಲಾಗಿದೆ.
