Asianet Suvarna News Asianet Suvarna News

ಆಘಾತಕಾರಿ ಸುದ್ದಿ: ಕೊರೋನಾ ಸೋಂಕು ಲಕ್ಷಣವೇ ಇಲ್ಲದ 43 ಮಂದಿ ಬಲಿ..!

ಪೂರ್ವ ಕಾಯಿಲೆ ಇಲ್ಲದ, ಸೋಂಕಿನ ಲಕ್ಷಣವಿದ್ದ 620 ಮಂದಿ ಸಾವು| ಆರೋಗ್ಯವಂತರಿಗೂ ಕೊರೋನಾ ಮಾರಕ|  ಬಿಬಿಎಂಪಿ ಸಾವು ವಿಶ್ಲೇಷಣೆಯಲ್ಲಿ ಬಹಿರಂಗ| ಸೆಪ್ಟೆಂಬರ್‌ ಅಂತ್ಯದವರೆಗಿನ 2316 ಮಂದಿ ಸಾವಿನ ಬಗ್ಗೆ ಅಧ್ಯಯನ| 

43 People Dies for Without Corona symptoms in Karnataka grg
Author
Bengaluru, First Published Oct 14, 2020, 7:23 AM IST

ಬೆಂಗಳೂರು(ಅ.14): ಸೋಂಕಿಗೆ ಪೂರ್ವದಲ್ಲೇ ವಿವಿಧ ಕಾಯಿಲೆಯಿದ್ದವರಿಗೆ ಮಾತ್ರ ಕೊರೋನಾ ಘಾತುಕ. ಇಂತಹ ಪೂರ್ವ ಕಾಯಿಲೆ ಇಲ್ಲದ ‘ಆರೋಗ್ಯವಂತ’ ಸೋಂಕಿತರಿಗೆ ಕೊರೋನಾ ಅಷ್ಟೇನೂ ಮಾರಕವಲ್ಲ ಎಂಬ ನಂಬಿಕೆಯನ್ನು ಛಿದ್ರಗೊಳಿಸುವ ಮಾಹಿತಿ ಬಿಬಿಎಂಪಿ ನಡೆಸಿದ ಸಾವು ವಿಶ್ಲೇಷಣೆ (ಡೆತ್‌ ಅನಾಲಿಸಿಸ್‌)ನಲ್ಲಿ ಬೆಳಕಿಗೆ ಬಂದಿದೆ.

ಈ ವಿಶ್ಲೇಷಣೆ ಪ್ರಕಾರ ಬೆಂಗಳೂರಿನಲ್ಲಿ ಸೆಪ್ಟಂಬರ್‌ ಅಂತ್ಯದವರೆಗೂ ಕೊರೋನಾ ಸೋಂಕಿನಿಂದಾಗಿ ಮೃತಪಟ್ಟ 2316 ಮಂದಿಯ ಪೈಕಿ 620 ಮಂದಿ ಆರೋಗ್ಯವಂತ ಸೋಂಕಿತರು (ಅರ್ಥಾತ್‌ ಬೇರೆ ಯಾವುದೇ ಪೂರ್ವ ಕಾಯಿಲೆ ಇಲ್ಲದೇ ಕೇವಲ ಕೊರೋನಾ ಸೋಂಕಿಗೆ ತುತ್ತಾದವರು) ಅಸುನೀಗಿದ್ದಾರೆ. ಅಷ್ಟೇ ಅಲ್ಲ ಈ ಪೈಕಿ 45 ಮಂದಿಗೆ ಯಾವುದೇ ಸೋಂಕಿನ ಲಕ್ಷಣಗಳೇ ಇರಲಿಲ್ಲ!

ಬೆಂಗಳೂರು ನಗರದಲ್ಲಿ ಕೊರೋನಾ ಸಾವಿಗೆ ತುತ್ತಾದವರ ಸಾವಿನ ನಿಜ ಕಾರಣ ಅರಿಯಲು ಬಿಬಿಎಂಪಿ ರಚಿಸಿದ್ದ ‘ಸಾವು ವಿಶ್ಲೇಷಣಾ ಸಮಿತಿ (ಡೆತ್‌ ಅನಾಲಿಸಸ್‌ ಕಮಿಟಿ) ಬಿಬಿಎಂಪಿ ಆಯುಕ್ತರಿಗೆ ಇತ್ತೀಚೆಗೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಈ ಅಂಶಗಳು ದಾಖಲಾಗಿವೆ.

ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಸೆಪ್ಟಂಬರ್‌ ಅಂತ್ಯದವರೆಗೆ ನಗರದಲ್ಲಿ ಮೃತಪಟ್ಟ2,936 ಸಾವಿನ ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಈ ಪೈಕಿ ಸೋಂಕು ತಗುಲಿ ಮೃತಪಟ್ಟ2,316 ಮಂದಿ ಪೈಕಿ 1,843 ಮಂದಿ ತೀವ್ರ ಉಸಿರಾಟದ ಸಮಸ್ಯೆ (ಸಾರಿ), 1,093 ಮಂದಿ ಜ್ವರ, ಶೀತ, ಕೆಮ್ಮು (ಐಎಲ್‌ಐ) ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು. ಉಳಿದ 620 ಮಂದಿ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕರೋನಾ ಸೋಂಕಿನಿಂದಾಗಿಯೇ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ರಾಜ್ಯದಲ್ಲಿ ಕಂಟ್ರೋಲ್ ತಪ್ಪಿದ ಕೊರೋನಾ: ದೇಶದಲ್ಲೇ ಕರ್ನಾಟಕ ಫಸ್ಟ್

ಈ 620 ಮಂದಿಯ ಪೈಕಿ 45 ಜನರು ಕೊರೋನಾ ಸೋಂಕಿನ ಲಕ್ಷಣಗಳು ಎಂದು ಹೇಳಲಾಗುವ ಕೆಮ್ಮು, ಜ್ವರ, ಶೀತ ಉಸಿರಾಟ ಸಮಸ್ಯೆ, ತಲೆ ನೋವು ಸೇರಿದಂತೆ ಇನ್ನಿತರ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳದೆ ಮೃತಪಟ್ಟಿದ್ದಾರೆ. ವಿಶ್ಲೇಷಣೆಗೆ ಒಳಪಟ್ಟ 2,936 ಮೃತರ ಪೈಕಿ 1,981 ಪುರುಷರು, 955 ಮಹಿಳೆಯರು ಹಾಗೂ ಓರ್ವ ಲೈಂಗಿಕ ಅಲ್ಪ ಸಂಖ್ಯಾತರು ಎಂದು ತಿಳಿದು ಬಂದಿದೆ.

ಆಸ್ಪತ್ರೆಗೆ ದಾಖಲಾದ 48 ತಾಸಿನಲ್ಲಿ ಹೆಚ್ಚು ಸಾವು

ಸೋಂಕಿನಿಂದ 24 ಗಂಟೆ, 48 ಗಂಟೆ ಹಾಗೂ ಮೂರು ದಿನಗಳಲ್ಲಿ ಸಾವನ್ನಪ್ಪಿರುವವರ ನಿರ್ದಿಷ್ಟಪ್ರಕರಣಗಳನ್ನು ಆಯ್ಕೆ ಮಾಡಿ ಸಮಿತಿ ಪರಿಶೀಲನೆ ಮಾಡಿದೆ. ಆಸ್ಪತ್ರೆಗೆ ದಾಖಲಾಗಿ 24 ಗಂಟೆಗಳಲ್ಲಿ 315 ಜನರು ಮೃತಪಟ್ಟಿದ್ದರೆ, 48 ಗಂಟೆಗಳಲ್ಲಿ 414 ಜನ ಹಾಗೂ 72 ಗಂಟೆಗಳ ಅವಧಿಯಲ್ಲಿ 164 ಜನರ ಮೃತಪಟ್ಟಿದ್ದಾರೆ. 2043 ಮಂದಿ ಮೂರು ದಿನಕ್ಕಿಂತ ಹೆಚ್ಚು ದಿನ ಚಿಕಿತ್ಸೆಯ ಬಳಿಕ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದ ಕೊರತೆ, ಸೋಂಕಿತರು ತುಂಬಾ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆಯಿಂದ ಕೊರೋನಾ ಸೋಂಕಿತರು ಮೃತಪಡುತ್ತಿದ್ದಾರೆ ಎಂದು ಸಮಿತಿ ತನ್ನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ವರದಿಯ ಪ್ರಮುಖ ಅಂಶ, ಶಿಫಾರಸು

*ಸೋಂಕಿತರ ಸಂಖ್ಯೆ ಹೆಚ್ಚಾದರೂ ಆಸ್ಪತ್ರೆಗಳಲ್ಲಿ ಐಸಿಯು ಹಾಸಿಗೆಗಳ ಸಂಖ್ಯೆ ಹೆಚ್ಚಳವಾಗಿಲ್ಲ.
*ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಬೇಕು.
*ಆಸ್ಪತ್ರೆಗಳಲ್ಲಿ ಗುಣಮಟ್ಟದ ವೆಂಟಿಲೇಟರ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಹೆಚ್ಚಿಸಬೇಕು.
*ಶೀಘ್ರ ಸೋಂಕು ಪರೀಕ್ಷೆ, ವರದಿ ವಿಳಂಬವಾಗಬಾರದು, ಕೊರೋನೇತರ ಸಮಸ್ಯೆ ಇರುವವರನ್ನು ಶೀಘ್ರ ಪತ್ತೆ ಮಾಡಬೇಕು.

ಎಚ್ಚರಿಕೆಯ ಗಂಟೆ

ಸಮಿತಿ ವಿಶ್ಲೇಷಣೆ ಹಿನ್ನೆಲೆಯಲ್ಲಿ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲವೆಂದು ಸುರಕ್ಷತಾ ಕ್ರಮಗಳನ್ನು ಪಾಲಿಸದ ಜನರಿಗೆ ಇದೊಂದು ಎಚ್ಚರಿಕೆ ಗಂಟೆಯಾದಂತಾಗಿದೆ. ರಾಜಧಾನಿಯಲ್ಲಿ ಅನೇಕ ಕಡೆ ಕನಿಷ್ಠ ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಓಡಾಡುತ್ತಿದ್ದಾರೆ. ವಿಶೇಷವಾಗಿತಮಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲವೆಂದು ಕಾಟಾಚಾರಕ್ಕೆ ಮಾಸ್ಕ್‌ ಧರಿಸದೇ ಸಂಚರಿಸುವವರನ್ನು ಇನ್ನು ಮುಂದೆ ಜಾಗೃತರಾಗಬೇಕಾದ ಅಗತ್ಯತೆಯನ್ನು ವರದಿ ಪರೋಕ್ಷವಾಗಿ ಹೇಳಿದೆ. ಅಲ್ಲದೇ ಸೋಂಕಿನ ಲಕ್ಷಣ ಇಲ್ಲದ 43 ಜನರು ಸಹ ಮೃತಪಟ್ಟಿದ್ದಾರೆ. ಸೋಂಕಿನ ಲಕ್ಷಣ ಇಲ್ಲದ ಜನರು ತಮಗೆ ಗೊತ್ತಿಲ್ಲದೇ ಬೇರೆಯವರಿಗೆ ಸುಲಭವಾಗಿ ಹರಡುವುದರಿಂದ ಶೀತ, ಜ್ವರದ ಲಕ್ಷಣ ಕಾಣಿಸಿಕೊಂಡರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂಬುದು ವರದಿಯಿಂದ ಅರ್ಥೈಯಿಸಬಹುದಾಗಿದೆ.
 

Follow Us:
Download App:
  • android
  • ios