ಶಿವಮೊಗ್ಗ (ಫೆ.16):  ರಾಜ್ಯದ ವಿವಿಧ ಮಹತ್ವದ ರೈಲ್ವೆ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರ ಸುಮಾರು 683 ಕೋಟಿ ಹಣವನ್ನು ಮೀಸಲಿಟ್ಟಿರುವುದಾಗಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ನಗರದ ರೈಲ್ವೇ ನಿಲ್ದಾಣದಲ್ಲಿ ಸೋಮವಾರ ಮೂರು ರೈಲ್ವೇ ಮೇಲ್ಸೇತುವೆಗಳ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಕೇಂದ್ರ ಸರ್ಕಾರವು ರಾಜ್ಯದ ವಿವಿಧ ಮಹತ್ವದ ರೈಲ್ವೇ ಯೋಜನೆಗಳಿಗೆ ಸುಮಾರು 4,000ಕೋಟಿ ರು.ಗಳನ್ನು ಮಂಜೂರು ಮಾಡಿದ್ದು, ಈ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು 683 ಕೋಟಿ ರು.ಗಳ ಅನುದಾನವನ್ನು ಒದಗಿಸಲಿದೆ ಎಂದರು.

ಪ್ರಸ್ತುತ ಗಿಣಿಗೆರಾ-ರಾಯಚೂರು, ಗದಗ-ವಾಡಿ, ತುಮಕೂರು-ಚಿತ್ರದುರ್ಗ-ದಾವಣಗೆರೆ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು-ಬೇಲೂರು, ಧಾರವಾಡ-ಬೆಳಗಾವಿ, ಶಿವಮೊಗ್ಗ-ರಾಣಿಬೆನ್ನೂರು ನೂತನ ರೈಲು ಮಾರ್ಗಗಳಿಗೆ ರಾಜ್ಯ ಸರ್ಕಾರವು ರೈಲ್ವೆ ಇಲಾಖೆಯೊಂದಿಗೆ ಶೇ.50ರಷ್ಟುವೆಚ್ಚವನ್ನು ಹಂಚಿಕೆ ಮಾಡಿಕೊಂಡಿದೆ. ಆರ್ಥಿಕ ವರ್ಷದಲ್ಲಿ 148 ಕೋಟಿಗಳ ಅನುದಾನವನ್ನು ಈ ಕಾಮಗಾರಿಗಾಗಿ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ ಎಂದರು.

ಕರ್ನಾಟಕದ ರೈಲ್ವೆಗೆ ಬಂಪರ್ : ಇತಿಹಾಸದಲ್ಲೇ ದಾಖಲೆ

ಇದೀಗ ಶಿವಮೊಗ್ಗದಲ್ಲಿ ನಿರ್ಮಾಣಗೊಳ್ಳುವ ಮೂರು ರಸ್ತೆ ಮೇಲ್ಸೇತುವೆಗಳ ಅಂದಾಜು ವೆಚ್ಚ 116.31 ಕೋಟಿ ರು.ಗಳಾಗಿದ್ದು, ಇವುಗಳ ಕಾಮಗಾರಿಯ ವೆಚ್ಚದ ಶೇ.50ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ. ರಾಜ್ಯ ಸರ್ಕಾರ ರೈಲ್ವೆ ಇಲಾಖೆಯೊಂದಿಗೆ ಶೇಕಡಾ 50:50ರ ಅನುಪಾತದಲ್ಲಿ ಕಾಮಗಾರಿಯ ವೆಚ್ಚವನ್ನು ಹಂಚಿಕೆ ಮಾಡಿಕೊಳ್ಳುವುದಲ್ಲದೆ, ಅಗತ್ಯವಿರುವ ಭೂಮಿಯನ್ನು ತನ್ನ ವೆಚ್ಚದಲ್ಲಿಯೇ ಖರೀದಿ ಮಾಡಿ ರೈಲ್ವೆಗೆ ಹಸ್ತಾಂತರಿಸಲು ಒಪ್ಪಿಗೆ ನೀಡಿ 46 ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳನ್ನು ತೆರವುಗೊಳಿಸಿ ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದರು.

ಇನ್ನು ಶಿಕಾರಿಪುರ-ಶಿವಮೊಗ್ಗ ರೈಲ್ವೇ ಮಾರ್ಗದ ನಿರ್ಮಾಣಕ್ಕೆ ಅಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ ಮುಂದಿನ 2 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.