Asianet Suvarna News Asianet Suvarna News

ಘಟ್ಟಪ್ರದೇಶಗಳಲ್ಲಿ ಭಾರೀ ಮಳೆ: 4 ಪ್ರಮುಖ ಘಾಟಿ ರಸ್ತೆಗಳು ಅಪಾಯದಲ್ಲಿ..!

*   ಆಗುಂಬೆ, ಶಿರಾಡಿ, ಮಡಿಕೇರಿ, ಚಾರ್ಮಾಡಿ ಘಾಟಿಗಳಲ್ಲಿ ಗುಡ್ಡ ಕುಸಿತ
*   ಆಗುಂಬೆಯಲ್ಲಿ ಸಂಚಾರ ಪೂರ್ಣ ಸ್ಥಗಿತ
*   ಮಳೆ ಹೆಚ್ಚಾದರೆ ಇನ್ನಷ್ಟು ಸಮಸ್ಯೆ ಸಾಧ್ಯತೆ
 

4 Major Shiradi Ghat Roads are at Risk Due to Heavy Rain grg
Author
Bengaluru, First Published Jul 11, 2022, 5:26 AM IST

ಬೆಂಗಳೂರು(ಜು.11): ಘಟ್ಟಪ್ರದೇಶಗಳಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಬಯಲು ಸೀಮೆಯನ್ನು ಕರಾವಳಿಯೊಂದಿಗೆ ಜೋಡಿಸುವ ನಾಲ್ಕು ಪ್ರಮುಖ ಘಾಟಿ ರಸ್ತೆಗಳಲ್ಲಿ ಭೂಕುಸಿತವಾಗಿದ್ದು, ಶಿವಮೊಗ್ಗ-ಉಡುಪಿ ರಾಷ್ಟ್ರೀಯ ಹೆದ್ದಾರಿಯಾಗಿರುವ ಆಗುಂಬೆ ಘಾಟಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇನ್ನು ರಾಜಧಾನಿ ಬೆಂಗಳೂರನ್ನು ಮಂಗಳೂರಿನೊಂದಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ, ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಪಾಜೆ ಘಾಟಿಗಳಲ್ಲೂ ಅಲ್ಲಲ್ಲಿ ಗುಡ್ಡ ಕುಸಿತವಾಗಿದೆ. 

ಶಿರಾಡಿ ಘಾಟ್‌ಗೆ ಪರ್ಯಾಯ ರಸ್ತೆಯಾಗಿರುವ ವಿಲ್ಲುಪುರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲೂ ಮರ ಬಿದ್ದಿರುವ ಘಟನೆ ವರದಿಯಾಗಿದೆ. ಇದೀಗ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಸಂಬಂಧ ‘ರೆಡ್‌ ಅಲರ್ಟ್‌’ ಇರುವ ಹಿನ್ನೆಲೆಯಲ್ಲಿ ಎಲ್ಲ ಘಾಟ್‌ ರಸ್ತೆಗಳಲ್ಲೂ ಭೂಕುಸಿತ, ರಸ್ತೆ ಕುಸಿತದ ಆತಂಕ ಎದುರಾಗಿದೆ.

ಬೆಳಗಾವಿ: ಖಾನಾಪುರದಲ್ಲಿ ಮಳೆ ಆರ್ಭಟ, ಮಲಪ್ರಭಾ ತೀರದಲ್ಲಿ ಪ್ರವಾಹ

ಭಾರಿ ಮಳೆಗೆ ಆಗುಂಬೆ ಘಾಟಿಯ ರಾಷ್ಟ್ರೀಯ ಹೆದ್ದಾರಿ 169ಎ ನಾಲ್ಕನೇ ಹಾಗೂ ಹತ್ತನೇ ತಿರುವುಗಳಲ್ಲಿ ಭಾನುವಾರ ಮುಂಜಾನೆ ಗುಡ್ಡ ಕುಸಿತವಾಗಿದ್ದು ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಆಗುಂಬೆ ಘಟ್ಟಪ್ರದೇಶ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಕಳೆದ ಹತ್ತು ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಗುಡ್ಡ ಜರಿದಿದೆ. ಗುಡ್ಡ ಕುಸಿತ ಉಂಟಾದ ಜಾಗದಲ್ಲಿ ಈಗಾಗಲೇ ಜೆಸಿಬಿಗಳಿಂದ ಮಣ್ಣು ತೆರವುಗೊಳಿಸಲಾಗುತ್ತಿದ್ದು, ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಮತ್ತೆ ಕುಸಿತ ಸಂಭವಿಸದಂತೆ ಎಚ್ಚರಿಕೆ ವಹಿಸಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಳ ಘಾಟ್‌ನಲ್ಲಿ ಸಂಚಾರ ದಟ್ಟಣೆ:

ಆಗುಂಬೆ ಘಾಟ್‌ನಲ್ಲಿ ಸಂಚಾರ ನಿರ್ಬಂಧ ಬಳಿಕ ಮಾಳಘಾಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಇಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದೆ. ಇಲ್ಲಿಯೂ ಸಣ್ಣಪುಟ್ಟಗುಡ್ಡ ಕುಸಿತ ಸಂಭವಿಸುತ್ತಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿವೆ. ಘನವಾಹನಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತಿವೆ.

ದೋಣಿಗಲ್‌ನಲ್ಲಿ ಮತ್ತೆ ಭೂಕುಸಿತ:

ಶಿರಾಡಿಯಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರ ತಾಲೂಕಿನ ಶಿರಾಡಿಘಾಟ್‌ನ ದೋಣಿಗಲ್‌ ಬಳಿ ಭೂಕುಸಿತ ಉಂಟಾಗಿದೆ. ಕಳೆದ ವರ್ಷ ಇದೇ ಸ್ಥಳದಲ್ಲಿ ಭೂ ಕುಸಿತ ಉಂಟಾಗಿ ಒಂದು ತಿಂಗಳು ಸಂಚಾರ ಬಂದ್‌ ಆಗಿತ್ತು. ಮತ್ತೆ ಅದೇ ಜಾಗದಲ್ಲಿ ಕುಸಿತವುಂಟಾಗಿದೆ. ಮತ್ತಷ್ಟು ಕುಸಿತವಾಗದಂತೆ ತಡೆಯಲು ಹೆದ್ದಾರಿ ನಿರ್ಮಾಣ ಕಂಪನಿ ಮರಳು ಚೀಲಗಳನ್ನು ಜೋಡಿಸುತ್ತಿದೆ. ಪ್ರತಿನಿತ್ಯ ಸುಮಾರು ಐದಾರು ಸಾವಿರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುವ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ಮಳೆ ಹೆಚ್ಚಾದರೆ ರಸ್ತೆ ಕುಸಿದು ಮತ್ತೆ ಹೆದ್ದಾರಿ ಬಂದ್‌ ಆಗುವ ಆತಂಕ ಎದುರಾಗಿದೆ.

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಳೆ ಅಬ್ಬರಕ್ಕೆ ಮೊದಲ ಬಲಿ..!

ಮೊಣ್ಣಂಗೇರಿಯಲ್ಲಿ ಬರೆ ಕುಸಿತ:

ಮಡಿಕೇರಿ- ಮಂಗಳೂರು ಹೆದ್ದಾರಿ ಸಾಗುವ ಮಡಿಕೇರಿ ಸಮೀಪದ ಮೊಣ್ಣಂಗೇರಿ ಸಮೀಪದಲ್ಲಿ ಮತ್ತೆ ಬರೆ ಕುಸಿದಿದೆ. ಬರೆ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಚಾರ್ಮಾಡಿ ಘಾಟಿಯ ಎಂಟನೇ ತಿರುವಿನ ಬಳಿ ಭಾನುವಾರ ಬೆಳಗ್ಗೆ ಮರವೊಂದು ರಸ್ತೆಗೆ ಬಿದ್ದು ವಾಹನಗಳ ಸಂಚಾರಕ್ಕೆ ಸುಮಾರು ಒಂದು ತಾಸು ಸಮಸ್ಯೆಯಾಯಿತು. ರಾಷ್ಟ್ರೀಯ ಹೆದ್ದಾರಿ ಇಲಾಖೆ ಹಾಗೂ ಅರಣ್ಯ ಇಲಾಖೆಯಿಂದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.

ಪರ್ಯಾಯ ಮಾರ್ಗ

ಆಗುಂಬೆ ಘಾಟಿಯಲ್ಲಿ ಸಂಚಾರಕ್ಕೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಇದೀಗ ವಾಹನಗಳು ಎರಡು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ತೀರ್ಥಹಳ್ಳಿ-ಎಡೂರು ಮಾಸ್ತಿಕಟ್ಟೆ- ಹುಲಿಕಲ್‌ ಘಾಟಿ-ಹೊಸಂಗಡಿ-ಸಿದ್ದಾಪುರ-ಹಾಲಾಡಿ ಮಾರ್ಗವಾಗಿ ಉಡುಪಿ, ಕಾರ್ಕಳ ಮತ್ತು ಹೆಬ್ರಿಗೆ ಸಂಚರಿಸಬೇಕಾಗಿದೆ. ಶೃಂಗೇರಿಯಿಂದ ನೆಮ್ಮಾರ್‌ ಕೆರೆಕಟ್ಟೆ- ಎಸ್‌.ಕೆ. ಬಾರ್ಡರ್‌- ಮಾಳಘಾಟ್‌ ಮೂಲಕ ಉಡುಪಿ, ಕಾರ್ಕಳ ತಲುಪಬಹುದಾಗಿದೆ.

ಹೊಸಪೇಟೆ: ತುಂಗಭದ್ರಾ ಡ್ಯಾಂ ಒಳ ಹರಿವಿನ ಅಬ್ಬರ, ಪ್ರವಾಹ ಭೀತಿ

ಕರಾವಳಿಗೆ ಮತ್ತೆ ರೆಡ್‌ ಅಲರ್ಟ್‌

ಬೆಂಗಳೂರು: ಭಾರಿ ಮಳೆಯಿಂದ ತತ್ತರಿಸಿರುವ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರದವರೆಗೂ 20 ಸೆಂ.ಮೀ.ವರೆಗೂ ಹೆಚ್ಚೂ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ‘ರೆಡ್‌ ಅಲರ್ಟ್‌’ ಮುಂದುವರಿಸಲಾಗಿದೆ. ಉತ್ತರ ಒಳನಾಡಿನಲ್ಲಿ ‘ಆರೆಂಜ್‌ ಅಲರ್ಟ್‌’ ಸಾರಲಾಗಿದೆ.

ನದಿಗಳು ಅಪಾಯ ಮಟ್ಟದಲ್ಲಿ

ಬೆಂಗಳೂರು: ಕರಾವಳಿ, ಮಲೆನಾಡಿನಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ತುಂಗಾ, ಭದ್ರಾ, ಹೇಮಾವತಿ, ಕಾವೇರಿ, ನೇತ್ರಾವತಿ, ಕುಮಾರಧಾರಾದಲ್ಲಿ ಭಾರಿ ನೀರು ಹರಿಯುತ್ತಿದೆ.
 

Follow Us:
Download App:
  • android
  • ios