ಬೆಂಗಳೂರು (ಸೆ.24):  ರಾಜ್ಯದಲ್ಲಿ ಬುಧವಾರ 6,997 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 38 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು 8,266 ಮಂದಿ ಕೊರೋನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದೇ ವೇಳೆ 5460 ಮಂದಿ ಕೊರೋನಾ ಜಯಿಸಿದ್ದಾರೆ.

ಬುಧವಾರ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಕೊರೋನಾದಿಂದ ಮರಣವನ್ನಪ್ಪಿದವರ ಸಂಖ್ಯೆ ಮತ್ತು 15 ಜಿಲ್ಲೆಗಳ ಕೊರೋನಾ ಗುಣಮುಖರಾದವರ ಸಂಖ್ಯೆ ಮಾತ್ರ ಆರೋಗ್ಯ ಇಲಾಖೆಯ ದೈನಂದಿನ ವರದಿಯಲ್ಲಿ ಪ್ರಕಟವಾಗಿದೆ. ಉಳಿದ ಜಿಲ್ಲೆಗಳಲ್ಲಿನ ಕೋವಿಡ್‌ ರೋಗಿಗಳ ಮರಣದ ಪ್ರಮಾಣ ಮತ್ತು ಗುಣಮುಖರಾದವರ ಪ್ರಮಾಣ ಶೂನ್ಯವೆಂದು ನಮೂದಾಗಿದೆ. ಇದೇ ವೇಳೆ ಕೊರೋನಾ ಸೋಂಕಿನ ಪರೀಕ್ಷೆಯ ಪ್ರಮಾಣ ಕೂಡ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿನ ಬುಧವಾರದ ಕೊರೋನಾದ ಸ್ಥಿತಿಗತಿಗಳ ಬಗ್ಗೆ ವಾಸ್ತವ ಚಿತ್ರಣ ಸಿಕ್ಕಿಲ್ಲ.

ಅಪಾಯ ಮರೆಯುತ್ತಿರುವ ಕರ್ನಾಟಕ, ಏಪ್ರಿಲ್‌ಗೆ ಕೊರೋನಾ ತಾರಕಕ್ಕೆ! ...

ಬುಧವಾರ 6,997 ಮಂದಿಗೆ ಕೊರೋನಾ ಸೋಂಕು ಬಂದಿರುವುದು ಖಚಿತವಾಗಿದ್ದು, ರಾಜ್ಯದ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 5.40 ಲಕ್ಷ ತಲುಪಿದೆ. ರಾಜ್ಯದಲ್ಲಿ ಒಟ್ಟು 94,652 ಸಕ್ರಿಯ ಕೊರೋನಾ ಪ್ರಕರಣಗಳಿದ್ದು ಈ ಪೈಕಿ 816 ಮಂದಿ ತೀವ್ರ ನಿಗಾ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5,460 ಮಂದಿ ಕೊರೋನಾದಿಂದ ಮುಕ್ತರಾಗಿದ್ದು, ಕೊರೋನಾ ಜಯಿಸಿದವರ ಒಟ್ಟು ಸಂಖ್ಯೆ 5.40 ಲಕ್ಷಕ್ಕೆ ಏರಿದೆ.

ರಾಜ್ಯದಲ್ಲಿ ಬುಧವಾರ 56,398 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ಈ ವರೆಗೆ ಒಟ್ಟು 43.94 ಲಕ್ಷ ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಬುಧವಾರ ಕೇವಲ ನಾಲ್ಕು ಜಿಲ್ಲೆಗಳಿಂದ ಮಾತ್ರ ಕೊರೋನಾದಿಂದ ಮರಣ ಹೊಂದಿದವರ ಪ್ರಕರಣ ವರದಿಯಾಗಿದೆ. ಹಾಗೆಯೇ 15 ಜಿಲ್ಲೆಗಳ ಕೊರೋನಾ ಮುಕ್ತರಾದವರ ಸಂಖ್ಯೆ ಶೂನ್ಯ ಎಂದು ಆರೋಗ್ಯ ಇಲಾಖೆಯ ದೈನಂದಿನ ವರದಿಯಲ್ಲಿ ಪ್ರಕಟವಾಗಿದೆ.

ನಿಯಂತ್ರಣಕ್ಕೆ ಬಂದಿಲ್ಲ ಕೊರೋನಾ; ಟಫ್‌ ರೂಲ್ಸ್‌ ಜಾರಿಗೆ ಮುಂದಾಗ್ತಾರಾ ಮೋದಿ? ..

ಬೆಂಗಳೂರು ನಗರದಲ್ಲಿ 23, ಶಿವಮೊಗ್ಗ 7, ಬೆಂಗಳೂರು ಗ್ರಾಮಾಂತರ 6, ವಿಜಯಪುರ 2 ಕೊರೋನಾದಿಂದಾಗಿ ಸಾವು ಸಂಭವಿಸಿದೆ. ಬೆಂಗಳೂರು ನಗರದಲ್ಲಿ 3,547, ಮೈಸೂರು 341, ಹಾಸನ 315, ಚಿಕ್ಕಮಗಳೂರು 252, ಮಂಡ್ಯ 203, ಬಳ್ಳಾರಿ 192, ಬೆಳಗಾವಿ 191, ಶಿವಮೊಗ್ಗ 187, ದಕ್ಷಿಣ ಕನ್ನಡ 186, ದಾವಣಗೆರೆ 138, ಬೆಂಗಳೂರು ಗ್ರಾಮಾಂತರ 128, ಧಾರವಾಡ 120, ಉತ್ತರ ಕನ್ನಡ 115, ಉಡುಪಿ 102, ಕಲಬುರಗಿ 100, ತುಮಕೂರು 90, ಚಿತ್ರದುರ್ಗ 89, ಕೊಪ್ಪಳ 88, ಚಿಕ್ಕಬಳ್ಳಾಪುರ 84, ವಿಜಯಪುರ 82, ಬೀದರ್‌ 63, ಗದಗ 59, ರಾಮನಗರ 57, ಬಾಗಲಕೋಟೆ 50, ಕೋಲಾರ 44, ಯಾದಗಿರಿ 40, ರಾಯಚೂರು 37, ಕೊಡಗು 33, ಹಾವೇರಿ ಮತ್ತು ಚಾಮರಾಜ ನಗರ ತಲಾ 32 ಮಂದಿಗೆ ಕೊರೋನಾ ಸೋಂಕಿತರಾಗಿದ್ದಾರೆ.