ಅಬಕಾರಿ ಇಲಾಖೆಯಿಂದ ಈ ವರ್ಷ 36 ಸಾವಿರ ಕೋಟಿ ರು. ಸಂಗ್ರಹಿಸುವ ಗುರಿ: ಸಿಎಂ ಸಿದ್ದರಾಮಯ್ಯ
ಇಲಾಖೆಗೆ ಪ್ರಸಕ್ತ ವರ್ಷದ ರಾಜಸ್ವ ಸಂಗ್ರಹ ಗುರಿ 36 ಸಾವಿರ ಕೋಟಿ ರು. ಇದ್ದು, ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ.5.31 ರಷ್ಟಿದೆ. ನಿಗದಿತ ಗುರಿ ಸಾಧನೆ ಮಾಡಲು ಎಲ್ಲ ಅಧಿಕಾರಿಗಳು ಗಮನಹರಿಸಬೇಕು ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು(ಸೆ.15): ಅಕ್ರಮ ಮದ್ಯ ನುಸುಳುವಿಕೆ ತಪ್ಪಿಸಬೇಕು ಮತ್ತು ಕಳ್ಳಭಟ್ಟಿಗೆ ಕಡಿವಾಣ ಹಾಕಬೇಕು. ಅಲ್ಲದೇ, ಬಾಕಿ ತೆರಿಗೆ ವಸೂಲಿ ಮಾಡಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಇಲಾಖೆಗೆ ಪ್ರಸಕ್ತ ವರ್ಷದ ರಾಜಸ್ವ ಸಂಗ್ರಹ ಗುರಿ 36 ಸಾವಿರ ಕೋಟಿ ರು. ಇದ್ದು, ತೆರಿಗೆ ಸಂಗ್ರಹದ ಬೆಳವಣಿಗೆ ದರ ಶೇ.5.31 ರಷ್ಟಿದೆ. ನಿಗದಿತ ಗುರಿ ಸಾಧನೆ ಮಾಡಲು ಎಲ್ಲ ಅಧಿಕಾರಿಗಳು ಗಮನಹರಿಸಬೇಕು ಎಂದರು.
ಒಂದೇ ಒಂದು ಬಾಟಲ್ ಎಣ್ಣೆ ಮಾರದೇ 2,600 ಕೋಟಿ ರೂ ಸಂಗ್ರಹಿಸಿದ ಅಬಕಾರಿ ಇಲಾಖೆ
ರಾಜ್ಯದ ಗಡಿ ಭಾಗಗಳಲ್ಲಿ, ವಿಶೇಷವಾಗಿ ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಕುರಿತು ಜಾರಿ ದಳದವರು ಹೆಚ್ಚಿನ ನಿಗಾ ವಹಿಸಬೇಕು. ಕಳ್ಳಭಟ್ಟಿ ಮದ್ಯ ತಯಾರಿಕೆಯಿಂದ ಬಡವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಕಳ್ಳಭಟ್ಟಿ ಮದ್ಯ ತಯಾರಿಕೆ ಮತ್ತು ಮಾರಾಟವನ್ನು ಮಟ್ಟಹಾಕಬೇಕು. ಎಲ್ಲೆಡೆ ಜಾಗೃತದಳ ಕಟ್ಟೆಚ್ಚರ ವಹಿಸಬೇಕು. ಇಲಾಖೆಯ ಎಲ್ಲ ಉಪ ಆಯುಕ್ತರು ರಾಜಸ್ವ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದರು.
ಹಳೆ ಬಾಕಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಇಲಾಖೆಯಲ್ಲಿ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚೆ ನಡೆಸಲಾಗುವುದು. ಗಡಿ ಭಾಗಗಳ ಚೆಕ್ ಪೋಸ್ಟ್‌ನಲ್ಲಿ ಗೃಹರಕ್ಷಕ ಸಿಬ್ಬಂದಿಯ ಸೇವೆ ಪಡೆದುಕೊಳ್ಳಿ ಮತ್ತು ಇತರ ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸುವಂತೆ ಹೇಳಿದರು.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಹಣಕಾಸು ಇಲಾಖೆಯ ಕಾರ್ಯದರ್ಶಿಗಳಾದ ಡಾ. ಪಿ.ಸಿ. ಜಾಫರ್ ಹಾಗೂ ಡಾ. ಎಂ.ಟಿ. ರೇಜು, ಅಬಕಾರಿ ಆಯುಕ್ತ ರವಿಶಂಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜು ಮತ್ತು ನಸೀರ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.