ಕೊಡಗು ಜಿಲ್ಲೆಯಾದ್ಯಂತ ಭಾನುವಾರ ದಿನವಿಡೀ ಮಳೆಯಾಗಿದ್ದು, ಪೊನ್ನಂಪೇಟೆ ತಾಲೂಕು ಬಿರುನಾಣಿ ವ್ಯಾಪ್ತಿಯ ಕಾಫಿ ತೋಟದಲ್ಲಿ ಭೂಕುಸಿತ ಉಂಟಾಗಿದೆ

ಬೆಂಗಳೂರು(ಆ.08): ಕಳೆದ ಕೆಲವು ದಿನಗಳಿಂದ ರಾಜ್ಯದ ಬಹುಭಾಗಗಳಲ್ಲಿ ಬಿರುಸಾಗಿದ್ದ ಮಳೆ ಭಾನುವಾರ ಕೊಂಚ ತಗ್ಗಿದ್ದರೂ ಅಲ್ಲಲ್ಲಿ ಭೂಕುಸಿತ, ರಸ್ತೆ ಕುಸಿತ, ಸೇತುವೆ ಕುಸಿತಗಳು ಮುಂದುವರಿದಿದ್ದು ಮಳೆ ಸಂಬಂಧಿ ಪ್ರತ್ಯೇಕ ಅನಾಹುತಗಳಲ್ಲಿ ಒಟ್ಟು 5 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಕಳೆದೊಂದು ವಾರದಲ್ಲಿ ಮೃತಪಟ್ಟಿರುವವರ ಒಟ್ಟು ಸಂಖ್ಯೆ 34ಕ್ಕೇರಿದೆ. ಇದೇ ವೇಳೆ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಮತ್ತು ತುಂಗಭದ್ರಾ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬಂದಿದ್ದು ನದಿ ತೀರದ ಪ್ರದೇಶಗಳು ಮುಳುಗಡೆಯಾಗಿವೆ.

ಕೊಡಗು, ಚಿಕ್ಕಮಗಳೂರು ಜಿಲ್ಲೆಗಲ್ಲಿ ಭಾರೀ ಮಳೆಯಾಗಿದ್ದರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಲ್ಲೂ ಉತ್ತಮ ಮಳೆ ಸುರಿದಿದೆ. ಇನ್ನು ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ. ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಸೋಮವಾರದವರೆಗೆ ಆರೆಂಜ್‌ ಅಲರ್ಟ್‌ ಇದ್ದು ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ ಮತ್ತು ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.

ಮಳೆ ಅವಾಂತರ, ರಾತ್ರಿಯಿಡಿ ಪರದಾಡಿದ ನಿವಾಸಿಗಳು

ಆ.1ರಿಂದ ರಾಜ್ಯದ ವಿವಿವಿಧೆಡೆ ಮಳೆ ಚುರುಕುಗೊಂಡ ಬಳಿಕ ಶನಿವಾರದವರೆಗೆ ಮಳೆ ಸಂಬಂಧಿ ಅನಾಹುತಗಳಲ್ಲಿ ಒಟ್ಟು 27 ಮಂದಿ ಮೃತಪಟ್ಟಿದ್ದರು. ಭಾನುವಾರ ಮತ್ತೆ 5 ಮಂದಿ ಮೃತಪಟ್ಟಿದ್ದು ಒಟ್ಟು ಮೃತಪಟ್ಟವರ ಸಂಖ್ಯೆ 34ಕ್ಕೇರಿದೆ. ಭಾನುವಾರ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಇಬ್ಬರು ಪುಟಾ​ಣಿ​ಗಳು ಸಾವ​ನ್ನ​ಪ್ಪಿ​ರುವ ಘಟನೆ ರಾಮನಗರ ಜಿಲ್ಲೆ ಕುದೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 75 ಗುಡೇಮಾರನಹಳ್ಳಿ ಹ್ಯಾಂಡ್‌ ಪೋಸ್ಟ್‌ ಬಳಿ ನಡೆ​ದಿದೆ. ನೇಪಾಳ ಮೂಲದ ಪರ್ಬೀನ್‌(4), ಇಷಿಕಾ(3) ಮೃತಪಟ್ಟಿದ್ದು, ಇವರ ತಾಯಂದಿ​ರಾದ ಮೀನಾ ಮತ್ತು ಮೋನಿ​ಷಾಗೆ ತೀವ್ರ ಗಾಯಗಳಾಗಿವೆ.

ಇನ್ನು ಚಿತ್ರದುರ್ಗ ಜಿಲ್ಲೆಯ ಪರಶುರಾಂಪುರ ಹೋಬಳಿಯ ಹಾಲಗೊಂಡನಹಳ್ಳಿ ಗ್ರಾಮದ ಹನುಮಕ್ಕ(62) ಎಂಬ ಮಹಿಳೆ ಕಾಲು ಜಾರಿ ವೇದಾವತಿ ನದಿಗೆ ಬಿದ್ದು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಹಳ್ಳದಲ್ಲಿ ಸಿಲುಕಿದ್ದ ಎಮ್ಮೆಗಳನ್ನು ರಕ್ಷಿಸಲು ಹೋಗಿದ್ದ ರೈತ ನಂದಪ್ಪ ಸೊನ್ನದ(65) ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಮಾಳೆ ಕೊಳಲು ಬಳಿ ಮಳೆ, ಗಾಳಿಗೆ ಮರ ಬಿದ್ದು ಬೈಕ್‌ ಸವಾರ ಕಲ್ಲೆಸೋಮನಹಳ್ಳಿ ಗ್ರಾಮದ ರಂಗಶೆಟ್ಟಿ(40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಪೊನ್ನಂಪೇಟೆಯಲ್ಲಿ ಭೂಕುಸಿತ: 

ಕೊಡಗು ಜಿಲ್ಲೆಯಾದ್ಯಂತ ಭಾನುವಾರ ದಿನವಿಡೀ ಮಳೆಯಾಗಿದ್ದು, ಪೊನ್ನಂಪೇಟೆ ತಾಲೂಕು ಬಿರುನಾಣಿ ವ್ಯಾಪ್ತಿಯ ಕಾಫಿ ತೋಟದಲ್ಲಿ ಭೂಕುಸಿತ ಉಂಟಾಗಿದೆ. ಕಾಫಿ ತೋಟದ ನಡುವೆ ನದಿಯಂತೆ ನೀರು ಹರಿದಿದ್ದು ಕಾಫಿ ಗಿಡಗಳು ಕೊಚ್ಚಿಕೊಂಡು ಹೋಗಿವೆ. ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಕೂಡ ಭಾರಿ ಮಳೆ ಹಿನ್ನೆಲೆಯಲ್ಲಿ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಭಾಗಮಂಡಲ- ನಾಪೋಕ್ಲು ರಸ್ತೆ ಜಲಾವೃತಗೊಂಡಿದೆ. ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಮತ್ತೆ ಬರೆ ಕುಸಿತವಾಗಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಜಿಲ್ಲೆಯಲ್ಲಿ ಒಟ್ಟು ಮೂರು ಮನೆಗಳಿಗೆ ಹಾನಿಯಾಗಿದೆ.

ಕುಸಿದ ಸೇತುವೆ: 

ರಾಮನಗರದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಕಣ್ವ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂದಿದೆ. ಜಲಾಶಯದಿಂದಲೂ ಭಾರೀ ಪ್ರಮಾಣದ ನೀರು ಹೊರಬಿಡಲಾಗುತ್ತಿದ್ದು ಅದರ ರಭಸಕ್ಕೆ ಕೇವಲ ಒಂದು ವರ್ಷದ ಹಿಂದೆ ನಿರ್ಮಾಣವಾಗಿದ್ದ ಚನ್ನಪಟ್ಟಣ ತಾಲೂಕಿನ ಕೊಂಡಾಪುರ, ಬಾಣಗಹಳ್ಳಿ ಸಂಪರ್ಕ ಸೇತುವೆ ಕುಸಿದು ಬಿದ್ದಿದೆ. ಹೀಗಾಗಿ ಈ ಗ್ರಾಮಸ್ಥರು ಹತ್ತಾರು ಕಿ.ಮೀ. ಸುತ್ತಿಕೊಂಡು ತಲುಪಬೇಕಾದ ಪರಿಸ್ಥಿತಿ ಉಂಟಾಗಿದೆ.

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

ಶಾಲೆ ಗೋಡೆ ಕುಸಿತ: 

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಭಾಗ ಉತ್ತಮ ಮಳೆಯಾಗುತ್ತಿದ್ದು ಭಟ್ಕಳ ತಾಲೂಕಿನ ಮುಂಡಳ್ಳಿಯ ನಂ.1 ಶಾಲೆಯ ಗೋಡೆ ಕುಸಿದು ಹಾನಿಯಾಗಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಭಾನುವಾರ ರಜೆ ಆದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಇನ್ನು ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ಗುಡ್ಡ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಇಂದಿನಿಂದ ಮಳೆಯ ಅಬ್ಬರ ತುಸು ಇಳಿಕೆ?

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ಮಳೆಯ ಅಬ್ಬರ ತುಸು ತಗ್ಗುವ ಲಕ್ಷಣಗಳಿವೆ. ಆದರೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಿಗೆ ಬುಧವಾರದ ತನಕ ಭಾರಿ ಮಳೆಯ ‘ಆರೆಂಜ್‌ ಅಲರ್ಟ್‌’ ಇರಲಿದೆ. ಬುಧವಾರದ ಬಳಿಕ ಮಳೆ ಇನ್ನಷ್ಟು ಕಡಿಮೆಯಾಗಲಿದೆ.

ಡ್ಯಾಂಗಳಿಂದ ನೀರು: ತೀರದಲ್ಲಿ ನೆರೆ ಭೀತಿ!

ಬೆಂಗಳೂರು: ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಕಾವೇರಿ, ಹೇಮಾವತಿ, ತುಂಗಭದ್ರಾ ನದಿಗಳು ತುಂಬಿ ಹರಿಯುತ್ತಿವೆ. ಕೆಆರೆಸ್‌, ತುಂಗಭದ್ರಾ ಡ್ಯಾಂಗಳಿಂದ ಲಕ್ಷಕ್ಕೂ ಅಧಿಕ ಕ್ಯೂಸೆಕ್ಸ್‌ ನೀರು ಹೊರಬಿಡಲಾಗುತ್ತಿದ್ದು ತೀರ ಪ್ರದೇಶದಲ್ಲಿ ಪ್ರವಾಹ ಸ್ಥಿತಿಯಿದೆ.