ಹಾಸನ (ಸೆ.17): ಖ್ಯಾತ ಮಕ್ಕಳ ತಜ್ಞ ಡಾ.ರಾಜೀವ್‌ ಅವರು ಬುಧವಾರ ನಿಧನರಾಗಿದ್ದಾರೆ. ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಜಿಟ್ಟೆನಹಳ್ಳಿ ಗ್ರಾಮದವರಾದ ಇವರು ಹಾಸನ ನಗರದಲ್ಲಿ ರಜೀವ್‌ ನರ್ಸಿಂಗ್‌ ಹೋಮ್‌ ಸ್ಥಾಪಿಸಿದ್ದರು. 

ಹಲವು ವರ್ಷಗಳಿಂದ ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದ ರಾಜೀವ್‌ ಅವರು ಇತ್ತೀಚೆಗೆ ಕೊರೋನಾ ಸೋಂಕಿಗೆ ಒಳಗಾಗಿ ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

ಕೆಲ ದಿನಗಳ ಹಿಂದೆ ಕೊಂಚ ಚೇತರಿಕೆ ಕಂಡುಬಂದಿತ್ತಾದರೂ ಬುಧವಾರ ಮೆದುಳಿನಲ್ಲಿ ರಕ್ತಸ್ರಾವ ಕಂಡುಬಂದ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಚೆನ್ನೈಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಯಿತು.

ಕರ್ನಾಟಕದಲ್ಲಿ ಬುಧವಾರ ಕೊರೋನಾ ಮಹಾಸ್ಪೋಟ: ಸಾವಿನ ಸಂಖ್ಯೆಯಲ್ಲಿ ಕೊಂಚ ಇಳಿಕೆ ...

 ಆದರೆ, ರಾಜೀವ್‌ ಅವರು ಬದುಕುಳಿಯುವ ಸಾಧ್ಯತೆಗಳಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದರಿಂದಾಗಿ ಬಿಜಿಎಸ್‌ನಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬುಧವಾರ ಸಂಜೆ ನಿಧನರಾಗಿದ್ದಾರೆ.

ಈಗಾಗಲೇ ದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಕೊರೋನಾ ಮಹಾಮಾರಿಗೆ ಒಳಗಾಗಿದ್ದು, ಸಾವು ನೋವುಗಳು ಲಕ್ಷ ದಾಟಿವೆ. ಇತ್ತ ಕರ್ನಾಟವೂ ಕೂಡ ಮಹಾಮಾರಿಯಿಮದ ತತ್ತರಿಸಿದೆ.