ವಿದ್ಯುತ್‌ ದರ ಹೆಚ್ಚಳ ಖಂಡಿಸಿ ನಗರದ 17ನೇ ವಾರ್ಡ್‌ನ 100ಕ್ಕೂ ಅಧಿಕ ಮಹಿಳೆಯರು ಶುಕ್ರವಾರ ಇಲ್ಲಿಯ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 

ಗಂಗಾವತಿ (ಜೂ.10): ವಿದ್ಯುತ್‌ ದರ ಹೆಚ್ಚಳ ಖಂಡಿಸಿ ನಗರದ 17ನೇ ವಾರ್ಡ್‌ನ 100ಕ್ಕೂ ಅಧಿಕ ಮಹಿಳೆಯರು ಶುಕ್ರವಾರ ಇಲ್ಲಿಯ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮಾತನಾಡಿದ ಗ್ರಾಹಕಿ ಜ್ಯೋತಿ, ನಮ್ಮ ಮನೆಗೆ ಪ್ರತಿ ತಿಂಗಳು 300ರಿಂದ 400 ವಿದ್ಯುತ್‌ ಬಿಲ್‌ ಬರುತ್ತಿತ್ತು. ಈ ತಿಂಗಳು 1800 ಬಂದಿದೆ. ಇಷ್ಟೊಂದು ಬಿಲ್‌ ಬಂದರೆ ಕಟ್ಟುವುದು ಹೇಗೆ?. ಸರ್ಕಾರ ಒಂದೆಡೆ ಉಚಿತ ವಿದ್ಯುತ್‌ ಎಂದು ಘೋಷಣೆ ಮಾಡುತ್ತದೆ, ಇನ್ನೊಂದೆಡೆ ದರ ಹೆಚ್ಚಿಸುತ್ತದೆ. ಇದನ್ನು ಗಮನಿಸಿದರೆ ಸರ್ಕಾರಕ್ಕೆ ಗ್ರಾಹಕರ ಸಮಸ್ಯೆ ತಿಳಿಯುತ್ತಿಲ್ಲ ಎನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇದ್ದ ಸರ್ಕಾರ ಪೆಟ್ರೋಲ್‌, ಗ್ಯಾಸ್‌ ಸಿಲಿಂಡರ್‌ ದರ ಹೆಚ್ಚಿಸಿದ್ದಕ್ಕೆ ಕಾಂಗ್ರೆಸ್‌ ಟೀಕಾಪ್ರಹಾರ ನಡೆಸಿತ್ತು. ಈಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ದಿನಸಿಗಳ ಬೆಲೆ ಹಾಗೂ ವಿದ್ಯುತ್‌ ದರ ಕಡಿಮೆ ಮಾಡಲಿ ಎಂದು ಆಗ್ರಹಿಸಿದರು. ಗಂಗಾವತಿಯಲ್ಲಿ ಸಾಕಷ್ಟುರೈಸ್‌ಮಿಲ್‌, ಕಾರ್ಖಾನೆಗಳಿವೆ. ಶ್ರೀಮಂತರು ಅದರ ಬಿಲ್‌ ಬಾಕಿ ಇಟ್ಟಿರುತ್ತಾರೆ. ಅಧಿಕಾರಿಗಳು ಅಂತವರ ವಿದ್ಯುತ್‌ ಬಿಲ್‌ ವಸೂಲಿ ಮಾಡುವುದನ್ನು ಬಿಟ್ಟು ನಮ್ಮಂತ ಬಡವರ ಮೇಲೆ ಹರಿಹಾಯುತ್ತಿದ್ದಾರೆ. ಇದು ಸರಿಯೇ? ಎಂದು ಪ್ರಶ್ನಿಸಿದರು. ಬೇಸಿಗೆ ಸಮಯದಲ್ಲಿ ಗ್ರಾಹಕರಿಗೆ ವಿದ್ಯುತ್‌ನ್ನು ಸಮರ್ಪಕವಾಗಿ ಪೂರೈಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮನೆ ಬಾಗಿಲಿಗೆ ಬಂದು ಗೃಹಲಕ್ಷ್ಮೀ ಅರ್ಜಿ ಸ್ವೀಕಾರ: ಸಚಿವ ಕೃಷ್ಣ ಬೈರೇಗೌಡ

ನಾವು ಯಾವುದೇ ಕಾರಣಕ್ಕೂ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ, ಸರ್ಕಾರ ಏನು ಮಾಡುತ್ತದೆಯೋ ಮಾಡಲಿ, ಅಧಿಕಾರಿಗಳು ಆಶ್ವಾಸನೆ ನೀಡುವವರೆಗೂ ಮುತ್ತಿಗೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಜೆಸ್ಕಾಂ ಕಚೇರಿಯ ಸಹಾಯಕ ಲೆಕ್ಕಾಧಿಕಾರಿ ಕುಮಾರ ಚೆನ್ನಬಸವ ಮಾತನಾಡಿ, ಪ್ರತಿ ವರ್ಷ ವಿದ್ಯುತ್‌ ದರವನ್ನು ಸರ್ಕಾರ ಹೆಚ್ಚಿಸುತ್ತದೆ. ಅದೇ ರೀತಿಯಾಗಿ ಏಪ್ರಿಲ್‌ ತಿಂಗಳಲ್ಲಿ ರಾಜ್ಯಾದ್ಯಂತ ವಿದ್ಯುತ್‌ ದರ ಹೆಚ್ಚಿಸಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಭರವಸೆ ನೀಡಿದರು. ಬಳಿಕ, ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ವಿದ್ಯುತ್‌ ದರ ಏರಿಕೆಗೆ ನೇಕಾರರ ಆಕ್ರೋಶ: ವಿದ್ಯುತ್‌ ದರ ಹೆಚ್ಚಳದಿಂದ ನೇಕಾರ ಸಮುದಾಯದವರಿಗೆ ಸಮಸ್ಯೆಯಾಗುವುದರ ಜತೆಗೆ ತೊಂದರೆಗೆ ಸಿಲುಕಿಕೊಂಡಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ವಿದ್ಯುತ್‌ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ನೇತೃತ್ವದಲ್ಲಿ ನೇಕಾರರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದ ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರಾರ‍ಯಲಿ ನಡೆಸಿದ ಪ್ರತಿಭಟನಾಕಾರರು, ರಾರ‍ಯಲಿ ಉದ್ದಕ್ಕೂ ಬೆಲೆ ಏರಿಕೆ ವಿರೋಧಿಸಿ ಘೋಷಣೆ ಕೂಗಿದರು. ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ವಿದ್ಯುತ್‌ ಉಚಿತ ಎಂದು ಹೇಳುತ್ತಿದೆ. ಮತ್ತೊಂದೆಡೆ ಸದ್ದಿಲ್ಲದೆ ವಿದ್ಯುತ್‌ ದರವನ್ನು ಹೆಚ್ಚಳ ಮಾಡಿರುವುದು ಸರಿಯಲ್ಲ. ಆದ್ದರಿಂದ ವೃತ್ತಿಪರ ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಕಾರ್ಮಿಕ ಸೌಲಭ್ಯಗಳನ್ನು ಜಾರಿ ಮಾಡಬೇಕು. ಜತೆಗೆ ಉಚಿತ ವಿದ್ಯುತ್‌ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಒಂಟಿ ಪೋಷಕ ಸರ್ಕಾರಿ ಪುರುಷ ನೌಕರರಿಗೂ ಶಿಶುಪಾಲನಾ ರಜೆ: ಸರ್ಕಾರದಿಂದ ಹೊಸ ಆದೇಶ

ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಸಹಕಾರಿ ಸಂಘಗಳಲ್ಲಿನ ನೇಕಾರರ ನಾಲ ಮನ್ನಾ ಮಾಡುವುದು, ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಂಡ 42 ನೇಕಾರರ ಕುಟುಂಬಸ್ಥರಿಗೆ ತಲಾ .10 ಲಕ್ಷ ಪರಿಹಾರ ನೀಡುವುದು, ನೇಕಾರರ ಉತ್ಪಾದನೆಗಳಿಗೆ ಸರ್ಕಾರ ನೇರ ಮಾರುಕಟ್ಟೆಮಾರಾಟ ಮಳಿಗೆಗಳನ್ನು ಕಲ್ಪಿಸುವುದು ಸೇರಿದಂತೆ ಇನ್ನಿತರೆ ಹತ್ತು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.