Asianet Suvarna News Asianet Suvarna News

Mandya: ತಿಂಗಳ ಬಳಿಕ 100 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ!

ಒಂದೂವರೆ ತಿಂಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ತೀವ್ರಗತಿಯಲ್ಲಿ ಕುಸಿದಿದ್ದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಇದೀಗ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ. 

3 Feet Water Rise In Krs Reservoir In A Week 100 Feet Water Storage After Month gvd
Author
First Published Oct 5, 2023, 7:02 AM IST

ಮಂಡ್ಯ (ಅ.05): ಒಂದೂವರೆ ತಿಂಗಳಿಂದ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಪರಿಣಾಮ ತೀವ್ರಗತಿಯಲ್ಲಿ ಕುಸಿದಿದ್ದ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಇದೀಗ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ. ಇದರ ನಡುವೆಯೂ ತಮಿಳುನಾಡಿಗೆ ಹರಿಯುತ್ತಿರುವ ನೀರು ನಿಲುಗಡೆಯಾಗದಿರುವುದು ಆತಂಕಕ್ಕೂ ಕಾರಣವಾಗಿದೆ. ಕೇರಳ ಮತ್ತು ಕೊಡಗಿನಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿರುವುದರಿಂದ ಕಳೆದೆರಡು ದಿನಗಳಿಂದ ಕೆಆರ್‌ಎಸ್ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಏರಿಕೆ ಕಂಡು ಬಂದಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ ಮತ್ತೆ ನೂರು ಅಡಿ ತಲುಪಿದೆ.

ಬುಧವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ 100.36 ಅಡಿ ತಲುಪಿದೆ. ಒಳಹರಿವಿನ ಪ್ರಮಾಣ 9052 ಕ್ಯುಸೆಕ್‌ ನಷ್ಟಿದೆ. ನಾಲೆಗಳಿಗೂ ಸೇರಿದಂತೆ ಒಟ್ಟು 1482 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಾಲ್ಕು ದಿನಗಳ ಹಿಂದೆ ಉತ್ತಮ ಮಳೆಯಾಗಿದೆ. ಇದರಿಂದ ಕೆಆರ್‌ಎಸ್ ಒಳಹರಿವಿನಲ್ಲಿ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ ಹಾರಂಗಿ, ಹೇಮಾವತಿ ಜಲಾಶಯದಿಂದಲೂ ಸ್ವಲ್ಪ ಪ್ರಮಾಣದ ನೀರನ್ನು ಕೆಆರ್‌ಎಸ್ ಜಲಾಶಯಕ್ಕೆ ಹರಿಸಿಕೊಳ್ಳಲಾಗುತ್ತಿರುವುದರಿಂದ ಎಲ್ಲ ನೀರು ಸೇರಿ ಒಳಹರಿವಿನ ಪ್ರಮಾಣ ಏರಿಕೆಯಾಗಿದೆ. ಹಾರಂಗಿಯಿಂದ 1000 ಕ್ಯುಸೆಕ್ ಹೇಮಾವತಿ ಜಲಾಶಯದಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಪ್ರಮಾಣದ ನೀರನ್ನು ಹರಿಸಿಕೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಫೆಬ್ರವರಿಗೆ ಮೆಟ್ರೋ ಹಳದಿ ಮಾರ್ಗ ಸೇವೆಗೆ ನೀಡಲು ಕ್ರಮವಹಿಸಿ: ಸಂಸದ ತೇಜಸ್ವಿ ಸೂರ್ಯ

ಎರಡು ದಿನ ಕೊಡಗಿನಲ್ಲಿ ಮಳೆ: ಭಾನುವಾರ ಮತ್ತು ಸೋಮವಾರ ಕೊಡಗು ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರಿಂದ ಸೋಮವಾರ ಮತ್ತು ಮಂಗಳವಾರ ಜಲಾಶಯದ ಒಳಹರಿವಿನಲ್ಲಿ 11800 ಕ್ಯುಸೆಕ್ ನೀರು ಹರಿದು ಬಂದಿತ್ತು. ಇದರಿಂದ ಎರಡೇ ದಿನದಲ್ಲಿ ಅಣೆಕಟ್ಟೆಯ ನೀರಿನ ಮಟ್ಟ ಮೂರು ಅಡಿಯಷ್ಟು ಏರಿಕೆಯಾಯಿತು. ಇದೀಗ ಮಳೆ ಇಳಿಮುಖವಾಗಿರುವುದರಿಂದ ಒಳಹರಿವಿನ ಪ್ರಮಾಣ ಬುಧವಾರ ಬೆಳಗಿನ ವೇಳೆಗೆ 9052 ಕ್ಯುಸೆಕ್‌ಗೆ ಕುಸಿದಿದೆ. ಹೇಮಾವತಿ ನದಿಯಲ್ಲಿ ಸಾಮಾನ್ಯ ಹರಿವಿಗಿಂತಲೂ ಹೆಚ್ಚು ನೀರು ಹರಿಯುತ್ತಿರುವುದರಿಂದ ತಮಿಳುನಾಡಿಗೆ ನೀರು ಹರಿಸುವ ಸಲುವಾಗಿ ಅಲ್ಲಿಂದಲೂ ಕೆಆರ್‌ಎಸ್‌ಗೆ ನೀರನ್ನು ಹರಿಸಿಕೊಳ್ಳಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

ಮರೆಮಾಚುತ್ತಿರುವ ಅಧಿಕಾರಿಗಳು: ಕೆಆರ್‌ಎಸ್ ಅಣೆಕಟ್ಟೆಯಿಂದ ಹೊರ ಬಿಡಲಾಗುತ್ತಿರುವ ನೀರಿನ ಪ್ರಮಾಣವನ್ನು ನೀರಾವರಿ ಇಲಾಖೆ ಅಧಿಕಾರಿಗಳು ಮರೆ ಮಾಚುತ್ತಿದ್ದಾರೆ ಎಂಬ ಬಗ್ಗೆ ಅನುಮಾನಗಳು ಸೃಷ್ಟಿಯಾಗಿವೆ. ಏಕೆಂದರೆ, ನಾಲೆಗಳು ಸೇರಿದಂತೆ ನದಿಗೂ 1482 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ ಕಡಿಮೆ ಪ್ರಮಾಣವನ್ನು ತೋರಿಸಲಾಗುತ್ತಿದೆ. ತಮಿಳುನಾಡಿಗೆ ನೀರು ಹರಿಸುವುದರ ಜೊತೆಗೆ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶಕ್ಕೆ ಇನ್ನೂ ಎರಡು ಕಟ್ಟು ನೀರು ಹರಿಸಬೇಕಾದ ಸವಾಲು ನೀರಾವರಿ ಅಧಿಕಾರಿಗಳ ಮುಂದಿದೆ. ಅದಕ್ಕಾಗಿ ಹಾರಂಗಿ, ಹೇಮಾವತಿ ಜಲಾಶಯದಿಂದಲೂ ನೀರನ್ನು ಹರಿಸಿಕೊಂಡು ಸಮತೋಲನ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕಬಿನಿಗೂ ನೀರು: ಕೇರಳದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೂ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ ಬುಧವಾರ ಬೆಳಗ್ಗೆ ಹೊತ್ತಿಗೆ 2276.06 ಅಡಿ ತಲುಪಿತ್ತು. ಜಲಾಶಯದ ಒಳಹರಿವಿನ ಪ್ರಮಾಣ 3349 ಕ್ಯೂಸೆಕ್ ಇದೆ. ಅದರಲ್ಲೂ ಮೂರ್ನಾಲ್ಕು ದಿನದಿಂದ ಮಳೆಯಾಗಿ ಒಳಹರಿವು ಹೆಚ್ಚಿ ಸುಮಾರು ನಾಲ್ಕು ಅಡಿಯಷ್ಟು ನೀರು ಜಲಾಶಯಕ್ಕೆ ಹರಿದುಬಂದಿದೆ. ಕಬಿನಿ ಜಲಾಶಯದ ಗರಿಷ್ಠ ಮಟ್ಟ 2248 ಅಡಿ. ಸದ್ಯ ಜಲಾಶಯದಲ್ಲಿ 14.85 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

ಬೆಂಗಳೂರಿನಲ್ಲಿ 31 ಸಾವಿರ ಬೀದಿ ನಾಯಿಗಳು ಇಳಿಕೆ: ಬಿಬಿಎಂಪಿ ಸಮೀಕ್ಷೆ

ಜುಲೈ 25ರಂದು ನೂರು ಅಡಿ ತಲುಪಿದ್ದ ಜಲಾಶಯ: ಕಳೆದ ಜುಲೈ 25 ರಂದು ಕೆಆರ್‌ಎಸ್ ಜಲಾಶಯ 100 ಅಡಿ ತಲುಪಿತ್ತು. ಅಂದು ಜಲಾಶಯಕ್ಕೆ 48,025 ಕ್ಯುಸೆಕ್ ಒಳಹರಿವು ಮತ್ತು 5499 ಕ್ಯುಸೆಕ್ ಹೊರ ಹರಿವು ದಾಖಲಾಗಿತ್ತು. ಈ ಸಾಲಿನಲ್ಲಿ ಆಗಸ್ 3ರಂದು ಕೆಆರ್‌ಎಸ್ ಅಣೆಕಟ್ಟೆಯಲ್ಲಿ 113.48 ಅಡಿಯವರೆಗೆ ಮಾತ್ರ ನೀರು ಸಂಗ್ರಹವಾಗಲು ಸಾಧ್ಯವಾಗಿತ್ತು. ಅಂದು ಜಲಾಶಯದಲ್ಲಿ 35.347 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಆ ನಂತರದಲ್ಲಿ ಕಾವೇರಿ ಕಣಿವೆ ಪ್ರದೇಶದಲ್ಲಿ ಮಳೆ ಕೊರತೆ ಎದುರಾಯಿತು. ಎರಡು ತಿಂಗಳ ಅವಧಿಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯಿಂದ ೧೫ ಅಡಿಗೂ ಹೆಚ್ಚು ನೀರು ಹರಿದುಹೋಯಿತು. ಹಾಲಿ ಜಲಾಶಯದಲ್ಲಿ 23.095 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ.

Follow Us:
Download App:
  • android
  • ios