ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿ ಮೂರು ದಿನಗಳ ಅಕ್ಷರಜಾತ್ರೆಗೆ ಶುಕ್ರವಾರ ವಿಧ್ಯುಕ್ತ ಚಾಲನೆ ಸಿಗಲಿದ್ದು, ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ.

ಹಾವೇರಿ (ಜ.05): ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿಯಲ್ಲಿ ಮೂರು ದಿನಗಳ ಅಕ್ಷರಜಾತ್ರೆಗೆ ಶುಕ್ರವಾರ ವಿಧ್ಯುಕ್ತ ಚಾಲನೆ ಸಿಗಲಿದ್ದು, ಈಗಾಗಲೇ ಎಲ್ಲಾ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಸಮ್ಮೇಳನದ ಭಾಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಸಮ್ಮೇಳನದ ವೇದಿಕೆ ಮುಂಭಾಗದಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು. ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಕಸಾಪ ರಾಜ್ಯಾಧ್ಯಕ್ಷ ಮಹೇಶ್‌ ಜೋಶಿ, ಜಿಪಂ ಸಿಇಒ ಮಹಮ್ಮದ್‌ ರೋಷನ್‌ ಸಾಂಸ್ಕೃತಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಹೇಶ ಜೋಶಿ ಮಾತನಾಡಿ, 86ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಭಾಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. 

ಜತೆಗೆ ಬೇರೆ ಜಿಲ್ಲೆಗಳ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ. ಒಟ್ಟಾರೆ ಕಾರ್ಯಕ್ರಮದಲ್ಲಿ ಸಮತೋಲನ ಕಾಪಾಡಿಕೊಳ್ಳಲಾಗಿದೆ. ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಕನಕ, ಶರೀಫ, ಸರ್ವಜ್ಞರ ಆಯ್ದ ರಚನೆಗಳ ಗಾಯನ ಮತ್ತು ನೃತ್ಯ ಕಾರ್ಯಕ್ರಮ, ನಾವಾಡುವ ನುಡಿಯೇ ಕನ್ನಡ ನುಡಿ, ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗಂಗಾವತಿ ಪ್ರಾಣೇಶ ತಂಡದಿಂದ ಹಾಸ್ಯ ಕಾರ್ಯಕ್ರಮ, ಹನುಮಂತ ಲಮಾಣಿ, ಖಾಸೀಂ ಅಲಿ, ರುಬಿನಾ ಸೈಯದ್‌ ತಂಡದಿಂದ ಗಾಯನ ನಡೆಯಲಿದೆ. ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆ ವರೆಗೆ ಸಂಗೀತ, ನಾಟ್ಯ, ಶಾಸ್ತ್ರೀಯ ಗಾಯನ, ಜಾನಪದ ಗಾಯನ ಕಾರ್ಯಕ್ರಮ ನಡೆಯಲಿದೆ.

ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ ಭಕ್ಷ್ಯ ಭೋಜನ: ಈಗಾಗಲೇ ಸಿಹಿ ತಿಂಡಿ ತಯಾರಿ

ಹೊಸ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ. ನಾಡು ನುಡಿ ಅಸ್ಮಿತೆ ಬಿಂಬಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ತಮ್ಮ ಮನೆ ಹಬ್ಬ ಎಂಬ ರೀತಿಯಲ್ಲಿ ನಾಡಿನ ಜನತೆ ಪಾಲ್ಗೊಂಡು ಸಹಕರಿಸಬೇಕು. ಜಿಲ್ಲಾಡಳಿತವು ಎಲ್ಲ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ಇಲ್ಲಿಗೆ ಬರುವ ಲಕ್ಷಾಂತರ ಜನರಿಗೆ ಊಟೋಪಹಾರ, ವಸತಿ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮಾತನಾಡಿ, 128 ಎಕರೆ ವಿಸ್ತಾರದ ಜಾಗದಲ್ಲಿ ಸಮ್ಮೇಳನದ ವೇದಿಕೆ, ಮಳಿಗೆ, ಊಟದ ಕೌಂಟರ್‌, ಮಾಧ್ಯಮ ಕೇಂದ್ರ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ಒಂದರಂತೆ ಪ್ರತಿನಿಧಿಗಳ ನೋಂದಣಿ ಕೌಂಟರ್‌ ತೆರೆಯಲಾಗಿದೆ. ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. 600 ಮಳಿಗೆಗಳಿಗೆ ಅವಕಾಶ ಮಾಡಲಾಗಿದೆ. ಅದ್ಧೂರಿ ಹಾಗೂ ಮಾದರಿ ಸಮ್ಮೇಳನವಾಗುವ ರೀತಿಯಲ್ಲಿ ಎಲ್ಲ ತಯಾರಿ ನಡೆಸಲಾಗಿದೆ. 2 ಲಕ್ಷ ಮಾಸ್ಕ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಸ್ಯಾನಿಟೈಸರ್‌ ಹಾಕಿ ಒಳಬಿಡಲಾಗುವುದು ಎಂದು ಹೇಳಿದರು.

ಸಮ್ಮೇಳನದಲ್ಲಿ ಅವಧಿ ಮೀರಿ ಮಾತಾಡಿದ್ರೆ ಮೈಕ್‌ ಆಫ್‌: ಸಾಹಿತ್ಯ ಸಮ್ಮೇಳನಗಳ ಉದ್ಘಾಟನೆ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಮಯ ಪರಿಪಾಲನೆಯ ಪರಂಪರೆಗೆ ಸಾಹಿತ್ಯ ಪರಿಷತ್ತು ನಾಂದಿ ಹಾಕಿದೆ. ಸಮಯ ಮಿತಿ ಮೀರುವ ಭಾಷಣಕಾರರಿಗೆ ಕೆಂಪುದೀಪದ ಎಚ್ಚರಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕೆಂಪುದೀಪದ ಎಚ್ಚರಿಕೆ ಮರೆತು ಮಾತನಾಡಿದರೆ ಸ್ವಯಂ ಚಾಲಿತವಾಗಿ ಮೈಕ್‌ ಆಫ್‌ ಆಗಲಿದೆ. ಆಮಂತ್ರಣ ಪತ್ರಿಕೆಯಲ್ಲೇ ಗಣ್ಯರು, ಭಾಷಣಕಾರರು, ಸಾಹಿತಿಗಳಿಗೆ ಸಮಯಾವಕಾಶ ನಿಗದಿಪಡಿಸಲಾಗಿದೆ. 

ಹಾವೇರಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವ ಸಾಹಿತಿ ದೊಡ್ಡರಂಗೇಗೌಡ ಅವರಿಗೆ ಇಡೀ ಸಮ್ಮೇಳನದಲ್ಲಿ ಗರಿಷ್ಠ 45 ನಿಮಿಷ ಕಾಲಾವಕಾಶ ನೀಡಲಾಗಿದೆ ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ. ಸಮ್ಮೇಳನ ಉದ್ಘಾಟಿಸಲಿರುವ ಮುಖ್ಯಮಂತ್ರಿಗಳ ಭಾಷಣಕ್ಕೆ 30 ನಿಮಿಷ, ಇನ್ನಿತರ ಗಣ್ಯರಿಗೆ 10 ನಿಮಿಷ, ನಿಕಟಪೂರ್ವ ಸಮ್ಮೇಳನಾಧ್ಯಕ್ಷರಿಗೆ 15 ನಿಮಿಷ ಅವಕಾಶ ನೀಡಲಾಗಿದೆ. ಅಲ್ಲದೆ ನಿಗದಿತ ವೇಳೆಗೆ ಎಲ್ಲ ಕಾರ್ಯಕ್ರಮಗಳನ್ನು ಆರಂಭಿಸಿ, ಮುಕ್ತಾಯಗೊಳಿಸಲು ಪರಿಷತ್ತು ನಿರ್ಧರಿಸಿದೆ. ಸಮಯ ಪಾಲನೆಗೆ ಈ ಸಮ್ಮೇಳನ ಮುನ್ನುಡಿಯಾಗುವ ನಿರೀಕ್ಷೆಯಿದೆ.

ಸಾಹಿತ್ಯ ಸಮ್ಮೇಳನದ ವಸತಿ ವ್ಯವಸ್ಥೆ ಮಾಡಿರುವ ಶಾಲಾ-ಕಾಲೇಜುಗಳಿಗೆ ಜ.4ರಿಂದಲೇ ರಜೆ ಘೋಷಣೆ

ಕೆಂಪು ದೀಪದ ಎಚ್ಚರಿಕೆ: ವೇದಿಕೆ ಪೋಡಿಯಂ ಬಳಿ ಭಾಷಣಕಾರರಿಗೆ ಕಾಣುವಂತೆ ಕೆಂಪು ದೀಪ ಅಳವಡಿಸಲಾಗಿದೆ. ಕೊಟ್ಟಿರುವ ಸಮಯ ಮುಗಿಯುವ 2 ನಿಮಿಷ ಮೊದಲು ಕೆಂಪು ದೀಪ ಹೊತ್ತಿಕೊಳ್ಳಲಿದೆ. ಒಂದು ನಿಮಿಷ ಬಾಕಿ ಇರುತ್ತಿದ್ದಂತೆ ಮತ್ತೊಮ್ಮೆ ಕೆಂಪು ದೀಪ ಉರಿದು ಸಮಯ ಮುಗಿದಿರುವ ಸೂಚನೆ ಬರುತ್ತದೆ. ತಕ್ಷಣ ಸ್ವಯಂ ಚಾಲಿತವಾಗಿ ಮೈಕ್‌ ಆಫ್‌ ಆಗಲಿದೆ.