Asianet Suvarna News Asianet Suvarna News

ಕರ್ನಾಟಕ: 3 ವರ್ಷದಲ್ಲಿ 2836 ಚ.ಕಿ.ಮೀ. ಅರಣ್ಯ ನಾಶ, ಪರಿಸರವಾದಿಗಳ ಆತಂಕ

1.6% ತಗ್ಗಿದ ಅರಣ್ಯ ಪ್ರದೇಶ, ಬೆಂಗಳೂರು, ಕೊಡಗು, ಶಿವಮೊಗ್ಗದಲ್ಲೇ ಹೆಚ್ಚು ಕುಸಿತ

2836 sq km Forest destruction in 3 years at Karnataka grg
Author
Bengaluru, First Published Aug 13, 2022, 7:39 AM IST

ಬೆಂಗಳೂರು(ಆ.13):  ರಾಜ್ಯದಲ್ಲಿ ಕಳೆದ ಮೂರು ವರ್ಷದಲ್ಲಿ ಬರೋಬ್ಬರಿ 2,836 ಚದರ ಕಿಲೋ ಮೀಟರ್‌ (ಶೇ.1.6 ರಷ್ಟು) ಅರಣ್ಯ ಪ್ರದೇಶ ಕುಗ್ಗಿದೆ! ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಸೇರಿ 600 ಚ.ಕಿ.ಮೀ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಕಡಿಮೆ ಒಂದು ಸಾವಿರ ಚ.ಕಿ.ಮೀ ಆಸುಪಾಸಿನಷ್ಟು ಅರಣ್ಯ ಪ್ರದೇಶ ಕಡಿಮೆಯಾಗಿರುವುದು ಅಚ್ಚರಿ ಮೂಡಿಸಿದೆ.

ಅರಣ್ಯ ಇಲಾಖೆಯ 2018-2019ರಲ್ಲಿ ಬಿಡುಗಡೆಯಾದ ವಾರ್ಷಿಕ ವರದಿಯ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆ ಭೂ ವಿಸ್ತೀರ್ಣ 1,91,791 ಚ.ಕಿ.ಮೀ ಇದ್ದು, ಈ ಪೈಕಿ 43,427 ಚ.ಕಿ.ಮೀ ಅರಣ್ಯ ಪ್ರದೇಶವಿತ್ತು. ಅಂದರೆ, ಒಟ್ಟಾರೆ ಭೂ ಪ್ರದೇಶದಲ್ಲಿ ಶೇ.22.64 ರಷ್ಟುಅರಣ್ಯ ಪ್ರದೇಶವಿತ್ತು. 2020-21ನೇ ವಾರ್ಷಿಕ ವರದಿಯಲ್ಲಿ ಅರಣ್ಯ ಪ್ರದೇಶ 41,590 (ಶೇ.21.64) ಚ.ಕಿ.ಮೀಗೆ ಇಳಿಕೆಯಾಗಿತ್ತು. ಇನ್ನು ಇತ್ತೀಚೆಗೆ ಬಿಡುಗಡೆಯಾದ 2021-22 ವಾರ್ಷಿಕ ವರದಿಯಲ್ಲಿ ಅರಣ್ಯ ಪ್ರದೇಶ 40,591 ಚ.ಕಿ.ಮೀಗೆ ಇದ್ದು, ಭೂ ಪ್ರದೇಶದಲ್ಲಿ ಅರಣ್ಯ ಪ್ರಮಾಣ ಶೇ.21.16ರಷ್ಟಿದೆ. ಈ ಮೂಲಕ ಕೇವಲ ಮೂರು ವರ್ಷದಲ್ಲಿಯೇ 2,836 ಚ.ಕಿ.ಮೀ (ಶೇ.1.6ರಷ್ಟು) ಅರಣ್ಯ ಪ್ರದೇಶ ಕಡಿಮೆಯಾಗಿದೆ.
ಒಂದೆಡೆ ಅರಣ್ಯ ಸಚಿವರು ರಾಜ್ಯದ ಅರಣ್ಯ ಪ್ರದೇಶವನ್ನು ಶೇ.30ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ವಿವಿಧ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಪ್ರಮಾಣ ತಗ್ಗುತ್ತಿರುವುದು ಪರಿಸರ ವಾದಿಗಳು, ವನ್ಯ ತಜ್ಞರ ಬೇಸರ ಮೂಡಿಸಿದೆ.

ಕಸ್ತೂರಿರಂಗನ್‌ ವರದಿ ಅವೈಜ್ಞಾನಿಕ: ರವೀಂದ್ರ ನಾಯ್ಕ

ಒತ್ತುವರಿಯಿಂದ ನಾಶ:

ಜೀವವೈವಿಧ್ಯತೆ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಒಂದು ಭೂಪ್ರದೇಶದ ಮೂರನೇ ಒಂದು ಭಾಗ (ಶೇ.33.3ರಷ್ಟು) ಅರಣ್ಯ ಪ್ರದೇಶವಿರಬೇಕು. ಕರ್ನಾಟಕದಲ್ಲಿ ಕೆಲ ವರ್ಷಗಳ ಹಿಂದೆ ಶೇ.23 ರಷ್ಟುಅರಣ್ಯ ಪ್ರದೇಶವಿತ್ತು. ಆದರೆ, ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರಮಾಣ ಕಡಿಮೆಯಾಗುತ್ತಿದೆ. ಮುಖ್ಯವಾಗಿ ಒತ್ತುವರಿ, ಡಿನೋಟಿಫಿಕೇಶನ್‌, ಸರ್ಕಾರದ ಇತರೆ ಅಭಿವೃದ್ಧಿ ಯೋಜನೆಗಳಿಗೆ ಸಾಕಷ್ಟುಅರಣ್ಯ ಪ್ರದೇಶ ಹಾಳಾಗುತ್ತಿದೆ. ಹೀಗಾಗಿಯೇ, ವಾರ್ಷಿಕ ವರದಿಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ ಎನ್ನುತ್ತಾರೆ ಪರಿಸರವಾದಿಗಳು.

ಕೇಂದ್ರದ ವರದಿಯಲ್ಲಿ ಉದ್ಯಾನ ಪರಿಗಣನೆ:

‘ಭಾರತೀಯ ಅರಣ್ಯ ಸಮೀಕ್ಷೆ 2021 ವರದಿ ಪ್ರಕಾರ, ರಾಜ್ಯದಲ್ಲಿ ಹಸಿರು ಹೊದಿಕೆ 154 ಚದರ ಕಿ.ಮೀ ಹೆಚ್ಚಳವಾಗಿದೆ. ಆದರೆ, ಈ ಸಮೀಕ್ಷೆಯಲ್ಲಿ ಅರಣ್ಯ ಮಾತ್ರವಲ್ಲದೇ ಉದ್ಯಾನಗಳು, ನಗರ ಗ್ರಾಮೀಣ ಭಾಗದ ಭಾಗದ ಗಿಡ, ಮರಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ಹಸಿರುವ ಹೊದಿಕೆ ಹೆಚ್ಚಳವಾಗಿದೆ. ಇನ್ನು ಈ ವರದಿಯಲ್ಲಿ ಹಸಿರು ಹೊದಿಕೆ ಪ್ರಮಾಣ 38,730 ಚದರ ಕಿಮೀ ಎಂದು ಉಲ್ಲೇಖಿಸಲಾಗಿದೆ’ ಎನ್ನುತ್ತಾರೆ ಪರಿಸರವಾದಿಗಳು.

ಮಿಯಾವಾಕಿ ಅರಣ್ಯಕ್ಕಾಗಿ ಜಾಗ ಹುಡುಕುತ್ತಿರುವ ಮೆಟ್ರೋ ನಿಗಮ

ಅರಣ್ಯ ಇಲಾಖೆಗೆ ಕಾರಣ ಗೊತ್ತಿಲ್ಲ:

3 ವರ್ಷಗಳಲ್ಲಿ ಸಾವಿರಾರು ಚ.ಕಿ.ಮೀ ಅರಣ್ಯ ಪ್ರದೇಶ ಕಡಿಮೆಯಾಗುವುದಕ್ಕೆ ಸೂಕ್ತ ಕಾರಣ ಅರಣ್ಯ ಇಲಾಖೆ ಬಳಿ ಇಲ್ಲ. ಸ್ಥಳೀಯವಾಗಿ ಸಮೀಕ್ಷೆಯಲ್ಲಿ ವ್ಯಾತ್ಯಾಸ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಡೀಮ್‌್ಡ ಅರಣ್ಯ ಪ್ರದೇಶವನ್ನು ಈ ಹಿಂದೆ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಸದ್ಯ ಕೈಬಿಟ್ಟು ಸಮೀಕ್ಷೆ ನಡೆಸಲಾಗಿದೆ ಎನ್ನುತ್ತಾರೆ. ಒಟ್ಟಾರೆ ಅಧಿಕಾರಿಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲ.

ಯಾವ ಜಿಲ್ಲೆಯಲ್ಲಿ ಎಷ್ಟು ಅರಣ್ಯ ಪ್ರದೇಶ ಕುಸಿತ? (ಚದರ ಕಿ.ಮೀ ಗಳಲ್ಲಿ)

ಜಿಲ್ಲೆಗಳು 2018 (ಶೇ.) 2022 (ಶೇ.) ಕುಸಿದ ಅರಣ್ಯ ಪ್ರದೇಶ
ಚಿತ್ರದುರ್ಗ 1287 (ಶೇ.15) 972 (ಶೇ.11.5) 315
ಉಡುಪಿ 1720 (ಶೇ.44) 1,005 (ಶೇ.28) 715
ದಕ್ಷಿಣ ಕನ್ನಡ 2012 (ಶೇ.44) 1282 (ಶೇ.26) 730
ಕೊಡಗು 2871 (ಶೇ.70) 1963 (ಶೇ.47) 908
ಶಿವಮೊಗ್ಗ 6647 (ಶೇ.78) 5689 (ಶೇ.67) 958
ಬೆಂಗಳೂರು ಗ್ರಾಮಾಂತರ/ರಾಮನಗರ 1164 (ಶೇ.20) 74 (ಶೇ.9) 590
ದಾವಣಗೆರೆ 545 (ಶೇ.9) 471(ಶೇ.8) 74
ಹಾಸನ 880 (ಶೇ.13) 840 (ಶೇ.12) 40

ಯಾವ ಜಿಲ್ಲೆಗಳಲ್ಲಿ ಹೆಚ್ಚಳವಾಗಿದೆ?

ಬೆಂಗಳೂರು ನಗರ, ಚಿಕ್ಕಮಗಳೂರು, ಹಾವೇರಿ, ಮಂಡ್ಯ, ತುಮಕೂರು ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಒಂದಿಷ್ಟು ಹೆಚ್ಚಳವಾಗಿದೆ.
 

Follow Us:
Download App:
  • android
  • ios