ಬೆಂಗಳೂರು :  ರಾಜ್ಯದ ಪೊಲೀಸ್‌ ನೇರ ನೇಮಕಾತಿಯಲ್ಲಿ ಒಂಬತ್ತು ಹುದ್ದೆಗಳಿಗೆ ಶೇ.25ರಷ್ಟುಕಡ್ಡಾಯ ಮಹಿಳಾ ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿದೆ.

ಈ ಹಿಂದೆ ಎರಡು ಹುದ್ದೆಗಳಿಗೆ ಮಾತ್ರ ಶೇ.20 ರಷ್ಟುಮೀಸಲಾತಿ ಕಲ್ಪಿಸಲಾಗಿತ್ತು. ಆ ಎರಡೂ ಹುದ್ದೆ ಸೇರಿದಂತೆ ನೇರ ನೇಮಕಾತಿಯಲ್ಲಿ ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌ ಆಫ್‌ ಪೊಲೀಸ್‌, ಪೊಲೀಸ್‌ ಕಾನ್‌ಸ್ಟೇಬಲ್‌- ಸಿವಿಲ್‌, ಸಬ್‌ಇನ್‌ಸ್ಪೆಕ್ಟರ್‌ - ಎಸ್‌ಟಿಡಿ, ಪೊಲೀಸ್‌ ಕಾನ್‌ಸ್ಟೇಬಲ್‌-ಐಎಸ್‌ಡಿ, ಸಬ್‌ಇನ್ಸ್‌ಪೆಕ್ಟರ್‌ ವೈರ್‌ಲೆಸ್‌, ಪೊಲೀಸ್‌ ಕಾನ್‌ಸ್ಟೇಬಲ್‌ -ವೈರ್‌ಲೈಸ್‌, ಸಬ್‌ಇನ್ಸ್‌ಪೆಕ್ಟರ್‌- ರಾಜ್ಯ ಗುಪ್ತಚರ, ಡಿಟೆಕ್ಟಿವ್‌ ಸಬ್‌ ಇನ್ಸ್‌ಪೆಕ್ಟರ್‌ - ಸಿಐಡಿ ಸೇರಿದಂತೆ ಒಟ್ಟು ಒಂಬತ್ತು ಹುದ್ದೆಗಳಿಗೆ ಶೇ.25 ರಷ್ಟುಮೀಸಲಾತಿ ಕಲ್ಪಿಸಲಾಗಿದೆ.

ಇದಕ್ಕಾಗಿ ಕರ್ನಾಟಕ ರಾಜ್ಯ ಪೊಲೀಸ್‌ ಲಿಪಿಕ ಸೇವೆ ನೇಮಕಾತಿ ತಿದ್ದುಪಡಿ - 2018 ಹಾಗೂ ರಾಜ್ಯ ಪೊಲೀಸ್‌ ಸೇವೆಗಳು ಅಪರಾಧ ತನಿಖಾ ಇಲಾಖೆ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಶೇ.25 ರಷ್ಟುಮೀಸಲಾತಿಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದಾಗಿ ಸರ್ಕಾರ ಹೇಳಿದೆ.

ಅಂಗವಿಕಲ ನ್ಯೂನತೆ ಪ್ರಕಾರ 21ಕ್ಕೆ ಹೆಚ್ಚಳ, ಮೀಸಲು ಏರಿಕೆ

ಈ ಹಿಂದೆ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಾವಳಿ ಪ್ರಕಾರ ಗುರುತಿಸಿದ್ದ 7 ದೈಹಿಕ ನ್ಯೂನತೆ ಪ್ರಕಾರಗಳನ್ನು 21ಕ್ಕೆ ಹಾಗೂ ಉದ್ಯೋಗ ನೇಮಕಾತಿಯಲ್ಲಿ ಶೇ.1 ರಷ್ಟುಹೆಚ್ಚಳ ಮಾಡಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಅಲ್ಲದೆ, ಸರ್ಕಾರದಿಂದ ನೀಡುವ ಸೌಲಭ್ಯಗಳಿಗೆ ಅಂಗವಿಕಲರಿಗೆ ಶೇ.5 ರಷ್ಟುಮೀಸಲಾತಿ, ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿ ಶೇ.5 ರಷ್ಟುಮೀಸಲಾತಿ ನೀಡಬೇಕು. ಜತೆಗೆ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಸಂಸ್ಥೆಗಳಲ್ಲಿ ಕನಿಷ್ಠ ಶೇ.4 ರಷ್ಟುಉದ್ಯೋಗ ಕಲ್ಪಿಸಬೇಕೆಂದು ನಿರ್ಧರಿಸಲಾಗಿದೆ. ಈ ಮೂಲಕ ಕರ್ನಾಟಕ ರಾಜ್ಯದಲ್ಲಿ ಗ್ರೂಪ್‌ ಎ ಹಾಗೂ ಬಿ ಹುದ್ದೆಗಳಿಗೆ ಹಾಲಿ ಶೇ.3 ಇರುವುದನ್ನು ಶೇ.4 ರಷ್ಟಕ್ಕೆ ಹೆಚ್ಚಿಸಲಾಗಿದೆ. ಸಿ ಹಾಗೂ ಡಿ ಗ್ರೂಪ್‌ ಹುದ್ದೆಗಳಿಗೆ ಶೇ. 5 ರಷ್ಟುಮೀಸಲಾತಿ ಕಲ್ಪಿಸಲು ಅವಕಾಶ ಕಲ್ಪಿಸಲಾಗಿದೆ.