Asianet Suvarna News Asianet Suvarna News

2175 ಹೆಕ್ಟೇರ್‌ ಬೆಳೆ ಹಾನಿ: 15 ದಿನಗಳ ಬಿರುಮಳೆಯಿಂದ ಭಾರೀ ಅನಾಹುತ

ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ 15 ದಿನದಲ್ಲೇ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದ ಕೃಷಿ ಬೆಳೆ ಹಾನಿಗೊಳಗಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಹಾನಿ ಇನ್ನಷ್ಟುಹೆಚ್ಚಾಗುವ ಆತಂಕ ಉಂಟಾಗಿದೆ.

2175 acres of crop loss due to heavy rain in karnataka gvd
Author
Bangalore, First Published Jul 19, 2022, 5:00 AM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜು.19): ರಾಜ್ಯದ ಹಲವೆಡೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಕಳೆದ 15 ದಿನದಲ್ಲೇ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದ ಕೃಷಿ ಬೆಳೆ ಹಾನಿಗೊಳಗಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಹಾನಿ ಇನ್ನಷ್ಟುಹೆಚ್ಚಾಗುವ ಆತಂಕ ಉಂಟಾಗಿದೆ.

ಪ್ರಾಥಮಿಕ ವರದಿಯ ಪ್ರಕಾರ ಮಳೆಯಿಂದಾಗಿ ಜುಲೈ ತಿಂಗಳಿನಲ್ಲಿ 7 ಜಿಲ್ಲೆಯ 2,175 ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಹಾನಿಗೊಳಗಾಗಿದೆ. ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಅಲಸಂದೆ, ಶೇಂಗಾ ಮತ್ತಿತರ ಬೆಳೆಗಳು ನೀರು ನಿಂತು ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮೋಡ ಕವಿದ ವಾತಾವರಣದಿಂದ ಭೂಮಿ ತೇವಾಂಶದಿಂದ ಕೂಡಿರುವುದೂ ಹಾನಿ ಪ್ರಮಾಣ ಹೆಚ್ಚು ಮಾಡಿದೆ.

Belagavi: ಗೋಡೆ ಬಿದ್ದ ಮನೆಯಲ್ಲೇ ವಾಸಿಸುತ್ತಿದ್ದ ವೃದ್ಧೆಯರ ನೆರವಿಗೆ ಬಂದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್

ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 640 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಭತ್ತ ಬಹುತೇಕ ಜಲಾವೃತವಾಗಿದೆ. ಮಳೆ ಹೀಗೆಯೇ ಮುಂದುವರೆದರೆ ಭತ್ತ ಕೊಳೆತು ಫಸಲು ನೆಲಕಚ್ಚಿ ರೈತರು ಸಂಕಷ್ಟಅನುಭವಿಸಬೇಕಾಗುತ್ತದೆ. ಇದರಿಂದ ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಲಿದೆ. ದಕ್ಷಿಣ ಕನ್ನಡದಲ್ಲಿ 223 ಮತ್ತು ಉಡುಪಿ ಜಿಲ್ಲೆಯಲ್ಲಿ 129 ಹೆಕ್ಟೇರ್‌, ಉ.ಕನ್ನಡದಲ್ಲಿ 46 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ.

ಕೃಷಿ, ಕಂದಾಯ ಸರ್ವೇ: ಹಾವೇರಿ ಜಿಲ್ಲೆಯಲ್ಲಿ 270 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳ ವರುಣಾಕ್ರೋಶಕ್ಕೆ ತುತ್ತಾಗಿದೆ. ಅಷ್ಟೇ ಅಲ್ಲ, ಹಾಸನ, ಮೈಸೂರು, ಶಿವಮೊಗ್ಗ ಜಿಲ್ಲೆಯಲ್ಲೂ ಮೆಕ್ಕೆಜೋಳಕ್ಕೆ ಹಾನಿ ಉಂಟಾಗಿದೆ. ಹಾಸನ ಜಿಲ್ಲೆಯಲ್ಲಿ 173 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಅಲಸಂದೆ, ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದ ಶೇಂಗಾ ಮಳೆಯ ಹೊಡೆತಕ್ಕೆ ನಲುಗಿದೆ.

ಬೆಳೆ ಹಾನಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಈಗಾಗಲೇ ಪ್ರಾಥಮಿಕ ವರದಿ ಪಡೆದಿದೆ. ಇದೀಗ ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಯುತ್ತಿದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಕಳೆದ ವರ್ಷ ನೀಡಿದಂತೆ ವಿಳಂಬ ಮಾಡದೇ ಸಮರೋಪಾದಿಯಲ್ಲಿ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುವುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಮಳೆ ಇಳಿಕೆಯಾದರೂ ಪ್ರವಾಹ ಯಥಾಸ್ಥಿತಿ: ರಾಜ್ಯದ ಬಹುತೇಕ ಕಡೆ ಮಳೆ ಅಬ್ಬರ ಸೋಮವಾರ ಇಳಿಮುಖವಾಗಿದೆ. ಆದರೂ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಗೆ ಬಿಡುತ್ತಿರುವುದರಿಂದ ಕೆಲವೆಡೆ ಪ್ರವಾಹಾತಂಕ ಮುಂದುವರೆದಿದೆ. ತುಂಗಭದ್ರಾ ಜಲಾಶಯದಿಂದ 1.38 ಲಕ್ಷ ಕ್ಯುಸೆಕ್ಸ್‌ ನೀರು ಬಿಡಲಾಗುತ್ತಿದೆ. ಇದರಿಂದ ಹಂಪಿಯ ಸ್ಮಾರಕಗಳು ಮುಳುಗಡೆಯಾಗಿವೆ. ಬೆಳಗಾವಿಯ ಚಿಕ್ಕೋಡಿ ತಾಲೂಕಿನಲ್ಲಿ 9 ಸೇತುವೆಗಳು ಇನ್ನೂ ಮುಳುಗಿಯೇ ಇವೆ. ಆಲಮಟ್ಟಿಅಣೆಕಟ್ಟೆಯಿಂದ 1.25 ಲಕ್ಷ ಕ್ಯುಸೆಕ್ಸ್‌ ನೀರು ಹೊರಬಿಡಲಾಗುತ್ತಿದೆ. 

ಶಿರಾಡಿ ನಂತರ ಈಗ ಚಾರ್ಮಾಡಿ ಬಿರುಕು: ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು ಬಳಸುವ ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ಬಂದ್‌ ಆಗಿರುವ ಬೆನ್ನಲ್ಲೇ ಈಗ ಚಾರ್ಮಾಡಿ ಘಾಟ್‌ ರಸ್ತೆಯಲ್ಲೂ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ರಸ್ತೆ ಕುಸಿಯುವ ಹಾಗೂ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಘಾಟ್‌ನ ಎರಡನೇ ತಿರುವಿನ ರಸ್ತೆಯಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಬ್ಯಾರಿಕೇಡ್‌ ಇಟ್ಟು ಕುಸಿದ ಜಾಗದಲ್ಲಿ ವಾಹನ ಸಂಚರಿಸದಂತೆ ತಡೆ ಒಡ್ಡಲಾಗಿದೆ.

Chikkamagaluru: ಮಲೆನಾಡಿನಲ್ಲಿ ಮಹಾಮಳೆಯಿಂದ ತತ್ತರಿಸಿದ ಜನರು: ಕುಸಿದ ಶಾಲಾ ಕೊಠಡಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಭತ್ತದ ಗದ್ದೆಗಳಲ್ಲಿ ನೀರು ನಿಂತು ಹೆಚ್ಚು ಬೆಳೆ ಹಾನಿಯಾಗಿದೆ. ಈ ಭಾಗದಲ್ಲಿ ಸಾಂಪ್ರದಾಯಿಕ ಭತ್ತವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಮಳೆ ಹೀಗೆಯೇ ಮುಂದುವರೆದರೆ ಭತ್ತವೆಲ್ಲಾ ಕೊಳೆಯುವ ಸಾಧ್ಯತೆ ಹೆಚ್ಚಿದೆ.
-ಪೂರ್ಣಿಮಾ, ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ

ಜಿಲ್ಲೆ ಹಾನಿ ಪ್ರಮಾಣ (ಹೆಕ್ಟೇರ್‌ಗಳಲ್ಲಿ)
ಶಿವಮೊಗ್ಗ 764
ಮೈಸೂರು 411
ಹಾಸನ 317
ಹಾವೇರಿ 285
ದ.ಕನ್ನಡ 223
ಉಡುಪಿ 129
ಉ.ಕನ್ನಡ 46

Follow Us:
Download App:
  • android
  • ios