*ಏಕಾಏಕಿ 2 ಸಾವಿರ ಕೇಸ್ ದಾಖಲು*ಸಕ್ರಿಯ ಕೇಸ್ 11 ಸಾವಿರಕ್ಕೆ ಏರಿಕೆ*ಮೂವರು ಸೋಂಕಿಗೆ ಬಲಿ*ಕರ್ಫ್ಯೂ ವೇಳೆ 349 ವಾಹನ ಜಪ್ತಿ
ಬೆಂಗಳೂರು (ಜ.5): ರಾಜಧಾನಿಯಲ್ಲಿ ಕೊರೋನಾ ಆರ್ಭಟ (Covid 19) ಜೋರಾಗಿದ್ದು, ಬರೋಬ್ಬರಿ 201 ದಿನಗಳ ಬಳಿಕ ಕೊರೋನಾ ಸೋಂಕಿನ ಪ್ರಕರಣ ಎರಡು ಸಾವಿರದ ಗಡಿ ದಾಟಿದೆ. ಮಂಗಳವಾರ 2053 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ (Bengaluru) ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಜೂ.12ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಗರಿಷ್ಠ ಸಂಖ್ಯೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕು ಇಳಿಕೆಯಾಗಿದ್ದು, 201 ದಿನಗಳಲ್ಲಿ ಯಾವತ್ತೂ ಎರಡು ಸಾವಿರದ ಗಡಿ ದಾಟಿರಲಿಲ್ಲ.
ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,68,445ಕ್ಕೆ ಏರಿಕೆಯಾಗಿದೆ. 202 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,610ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 16,412ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.
ಇದನ್ನೂ ಓದಿ:Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!
ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 8ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್ ಒಂದರಲ್ಲಿಯೇ 40 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ದೊಡ್ಡನೆಕ್ಕುಂದಿ 17, ಹಗದೂರು 15, ಎಚ್‌ಎಸ್‌ಆರ್ ಲೇಔಟ್ 14, ಅರಕೆರೆ 13, ವರ್ತೂರು 13, ಹೊರಮಾವು 12, ನ್ಯೂತಿಪ್ಪಸಂದ್ರ 11, ಕೋರಮಂಗಲ 10, ಹೊಯ್ಸಳ ನಗರ ವಾರ್ಡ್‌ನಲ್ಲಿ 9 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.
154ಕ್ಕೆ ಏರಿದ ಕಂಟೈನ್ಮೆಂಟ್
ಪಾಲಿಕೆಯ ಎಂಟು ವಲಯಗಳಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದು, ಮೈಕ್ರೋ ಕಂಟೈನ್ಮೆಂಟ್‌ಗಳ (Micro Containment) ಸಂಖ್ಯೆಯೂ 154ಕ್ಕೆ ಏರಿಕೆಯಾಗಿದೆ. ಬೊಮ್ಮನಹಳ್ಳಿ 49, ಮಹದೇವಪುರ 48, ದಕ್ಷಿಣ 15, ಪಶ್ಚಿಮ 16, ಪೂರ್ವ 12, ಯಲಹಂಕ 10, ದಾಸರಹಳ್ಳಿ 3, ಆರ್‌ಆರ್ ನಗರ 1 ಮೈಕ್ರೋ ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೈಟ್ ಕರ್ಫ್ಯೂ ವೇಳೆ ಅನಗತ್ಯ ಓಡಾಟ: 349 ವಾಹನ ಜಪ್ತಿ
ಕೊರೋನಾ ರೂಪಾಂತರಿ ತಳಿ ಒಮಿಕ್ರೋನ್ ನಿಯಂತ್ರಣ (Omicron Variant) ಸಂಬಂಧ ನಗರದಲ್ಲಿ ಜಾರಿ ಮಾಡಿರುವ ನೈಟ್ ನೈಟ್ ಕರ್ಫ್ಯೂ (Night Curfew) ವೇಳೆ ಅನಗತ್ಯವಾಗಿ ಓಡಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಕಳೆದ 8 ದಿನಗಳಿಂದ 349 ವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:Corona Update ಕರ್ನಾಟಕದಲ್ಲಿ ಕೊರೋನಾ ಸ್ಫೋಟ, 24ಗಂಟೆಗಳಲ್ಲಿ ದ್ವಿಗುಣ
ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿ (Covid 19 Guidelines) ಅನ್ವಯ ನಗರದಲ್ಲಿ ರಾತ್ರಿ 10ರಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಜನ ಹಾಗೂ ವಾಹನಗಳ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಪೊಲೀಸರು ರಾತ್ರಿ ವೇಳೆ ವಾಹನಗಳ ತಪಾಸಣೆ (Police Checking) ಚುರುಕುಗೊಳಿಸಿದ್ದು, ಸೋಮವಾರ ರಾತ್ರಿ 10 ವಾಹನ ಸೇರಿದಂತೆ 8 ದಿನಗಳಲ್ಲಿ 349 ವಾಹನ ಜಪ್ತಿ ಮಾಡಿದ್ದಾರೆ. ಈ ಪೈಕಿ 305 ದ್ವಿಚಕ್ರ ವಾಹನ, 11 ತ್ರಿಚಕ್ರ ವಾಹನ, 33 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಿದ್ದಾರೆ. ಉತ್ತರ, ಪಶ್ಚಿಮ ಹಾಗೂ ಕೇಂದ್ರ ವಿಭಾಗದಲ್ಲಿ ಹೆಚ್ಚಿನ ವಾಹನಗಳನ್ನು ಜಪ್ತಿ ಮಾಡಿದ್ದಾರೆ.
