ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.

ಚನ್ನಪಟ್ಟಣ (ಜು.19): ಸರ್ಕಾರ ರಾಜ್ಯದಲ್ಲಿ ಸಿಎಸ್‌ಆರ್ ನಿಧಿಯಿಂದ 2000 ಪಬ್ಲಿಕ್‌ ಶಾಲೆ ನಿರ್ಮಿಸುವ ಸಂಕಲ್ಪ ಮಾಡಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘವನ್ನು ಕಡ್ಡಾಯವಾಗಿ ರಚನೆ ಮಾಡಲು ಆದೇಶ ಹೊರಡಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ। ಎಚ್.ಎಂ.ವೆಂಕಟಪ್ಪ ಅವರು ₹14 ಕೋಟಿ ವೆಚ್ಚದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಓದಿ ಬೆಳೆದವರು ನೆರವು ನೀಡುತ್ತಾರೆ. ಹಳೇ ವಿದ್ಯಾರ್ಥಿಗಳ ಸಂಘಗಳಿಂದ ಸರ್ಕಾರಿ ಶಾಲೆಗಳಿಗೆ ಶಕ್ತಿ ತುಂಬುವ ಕೆಲಸ ಆಗಲಿದ್ದು, ಇದಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತೇನೆ ಎಂದರು. ವಿದ್ಯಾರ್ಥಿಗಳು ಉದ್ಯೋಗದ ಬಗ್ಗೆ ಚಿಂತಿಸಬೇಡಿ. ನೀವೇ ಉದ್ಯಮಿಯಾಗಿ ನೂರಾರು ಜನರಿಗೆ ಉದ್ಯೋಗ ನೀಡುವ ಬಗ್ಗೆ ಚಿಂತನೆ ಮಾಡಬೇಕು ಎಂದರು.

ಭಾಗವತ್ ಹೇಳಿಕೆ ಬಿಜೆಪಿಯ ಆಂತರಿಕ: 75 ವರ್ಷಗಳ ನಂತರ ನಿವೃತ್ತಿ ಆಗಬೇಕು ಎಂಬುದು ಬಿಜೆಪಿ ಪಕ್ಷದ ಆಂತರಿಕ ವಿಷಯ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಅವರವರ ಪಕ್ಷದ ವಿಚಾರ ಅವರಿಗೆ ಬಿಟ್ಟದ್ದು, ಅದರ ವಿಶ್ಲೇಷಣೆಗೆ ನಾನು ಹೋಗಲ್ಲ. ದೇಶಕ್ಕೆ ಒಳ್ಳೆಯದಾಗಬೇಕು ಅಷ್ಟೇ ಎಂದರು. ಸಿಗಂದೂರು ಸೇತುವೆ ಉದ್ಘಾಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದುರಂಕಾರದಿಂದ ಉದ್ಘಾಟನೆ ಮಾಡಬೇಕು ಎಂದಿದ್ದರೆ ನಾವೇನು ಮಾಡಲು ಆಗಲ್ಲ.

ಸಿಗಂದೂರು ಅನ್ನೇ ಮುಳುಗಿಸಲು ಹೋದವರು ಸೇತುವೆ ಕಟ್ಟಿ ಉಳಿಸಿದ್ದೇನೆ ಎನ್ನುತ್ತಿದ್ದಾರೆ. ಜನರು ಅಷ್ಟು ದಡ್ಡರಲ್ಲ. ಡಿಜಿಟಲ್ ಬೊರ್ಡೇ ಹಣೆಬರಹ ಎಂದರೆ ನಾನೇನು ಮಾಡಲು ಆಗಲ್ಲ ಎಂದು ಟೀಕಿಸಿದರು. ಸಿಗಂದೂರು ಸೇತುವೆ ಉದ್ಘಾಟನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಕೇಂದ್ರ ಸಚಿವ ಗಡ್ಕರಿ ಮಾತನಾಡಿದ್ದಾರೆ. ಯಾರಿಗೆ ಆಗಲಿ ಅಗೌರವ ತೋರುವುದು ಬಹಳ ತಪ್ಪು. ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರವಾಗಿರಬೇಕು. ವ್ಯಕ್ತಿಗತವಾಗಿ ತೆಗೆದುಕೊಂಡು ಹೋಗುವುದನ್ನು ನಾನು ಖಂಡನೆ ಮಾಡುತ್ತೇನೆ. ಸೇತುವೆ ಉದ್ಘಾಟನೆಯಿಂದ ಎರಡು ಕೋಡು ಬರುವುದಾದರೆ ಅವರು ಮಾಡಿಕೊಳ್ಳಲಿ ಎಂದು ಕುಟುಕಿದರು.

ಕಾಗೋಡು ತಿಮ್ಮಪ್ಪ, ಬೇಳೂರು ಗೋಪಾಲಕೃಷ್ಣ ಕೂಡ ಸೇತುವೆಗಾಗಿ ಪ್ರಯತ್ನಪಟ್ಟಿದ್ದರು. ಯಾವುದೇ ಪ್ರಗತಿಯನ್ನು ವಿರೋಧ ಮಾಡುವ ಹಾಗಿಲ್ಲ, ಅದನ್ನು ಒಪ್ಪಿಕೊಳ್ಳ ಬೇಕಾಗುತ್ತದೆ. ಇಷ್ಟು ವರ್ಷ ಲಾಂಚ್ ನವರು ಸೇವೆ ಮಾಡಿದ್ದಾರೆ. ಹೀಗಾಗಿ ಲಾಂಚನ್ನು ಟೂರಿಸಂಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ. ಲಾಂಚನ್ನು ದ್ವೀಪದ ಸುತ್ತ ತಿರುಗಿಸಿ ಪ್ರವಾಸೋದ್ಯಮದ ದೃಷ್ಟಿಯಲ್ಲಿ ಹೋಟೆಲ್ ಮಾದರಿ ಮಾಡಲು ಚಿಂತನೆ ನಡೆದಿದೆ ಎಂದು ಪ್ರತಿಕ್ರಿಯಿಸಿದರು.