ಜಿಲ್ಲೆಯ ಮನೆ ಮಕ್ಕಳಿಗೆ ನೀವು ಅಧಿಕಾರ ಕೊಟ್ಟಿದ್ದಕ್ಕೆ ನಿಮ್ಮನ್ನು ಬೆಂಗಳೂರು ದಕ್ಷಿಣ ಜಿಲ್ಲೆಯವರನ್ನಾಗಿ ಮಾಡಿ ಋಣ ತೀರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ರಾಮನಗರ (ಜು.16): ಜಿಲ್ಲೆಯ ಮನೆ ಮಕ್ಕಳಿಗೆ ನೀವು ಅಧಿಕಾರ ಕೊಟ್ಟಿದ್ದಕ್ಕೆ ನಿಮ್ಮನ್ನು ಬೆಂಗಳೂರು ದಕ್ಷಿಣ ಜಿಲ್ಲೆಯವರನ್ನಾಗಿ ಮಾಡಿ ಋಣ ತೀರಿಸುವ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಮಹೋತ್ಸವದ ಪ್ರಯುಕ್ತ ರಾತ್ರಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಉದ್ದೇಶದಿಂದ ರಾಮನಗರ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರು ನಾಮಕರಣ ಮಾಡಿ ಜಿಲ್ಲೆಯ ಜನರಿಗೆ ಈ ವರ್ಷದ ಕೊಡುಗೆಯಾಗಿ ನೀಡಿದ್ದೇವೆ. ಈಗ ಇಡೀ ವಿಶ್ವ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಎದುರು ನೋಡುತ್ತಿದೆ ಎಂದರು.

ನಿಮ್ಮೆಲ್ಲರ ದುಖವನ್ನು ದುರ್ಗಾದೇವಿ ದೂರ ಮಾಡುತ್ತಾಳೆ. ಇವತ್ತು ನಾವೆಲ್ಲರು ಆ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಬೇಕಿದೆ. ನಿಮ್ಮೆಲ್ಲರ ಆಶೀರ್ವಾದದಿಂದ ನಾವುಗಳು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಈಗಾಗಲೇ ರಾಮನಗರ ಕ್ಷೇತ್ರಕ್ಕೆ 1 ಸಾವಿರ ಕೋಟಿ, ಮಾಗಡಿ ಕ್ಷೇತ್ರಕ್ಕೆ 1300 ಕೋಟಿ, ಚನ್ನಪಟ್ಟಣ ಕ್ಷೇತ್ರಕ್ಕೆ 1 ಸಾವಿರ ಕೋಟಿ ನೀಡಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ಮೇಲಿರಲಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಜಿಲ್ಲೆಯ ಮನೆ ಮಗ ಡಿ.ಕೆ.ಶಿವಕುಮಾರ್ ಅವರಿಗೆ ತಾಯಿ ಚಾಮುಂಡೇಶ್ವರಿ ಸೂಕ್ತ ಸ್ಥಾನ ಸಿಗುವಂತೆ ಆಶೀರ್ವಾದ ಮಾಡಬೇಕು. ಮಕ್ಕಳಿಗೆ ನೀವೆಲ್ಲರು ಶಕ್ತಿ ನೀಡಿದ್ದೀರಿ. ನಿಮ್ಮ ಮನೆ ಮಕ್ಕಳಾಗಿ, ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದೇವೆ. ನೀವು ಅನೇಕ ಜವಾಬ್ದಾರಿ ನೀಡಿದ್ದು, ಅದನ್ನು ಅಭಿವೃದ್ಧಿ ಕೆಲಸಗಳ ಮೂಲಕ ಮಾಡುತ್ತಿದ್ದೇವೆ. ರಾಮನಗರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

ಶಾಸಕ ಬಾಲಕೃಷ್ಣ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಲಿ. ಸಕಾಲಕ್ಕೆ ಮಳೆ ಬೆಳೆ, ಸಂತೃಪ್ತಿ ವಾತಾವರಣ ನೆಲೆಸುವಂತೆ ಮಾಡಲಿ ಎಂದು ಸಮಸ್ತ ನಾಡಿನ ಜನರ ಪರವಾಗಿ ತಾಯಿ ಚಾಮುಂಡೇಶ್ವರಿ ಪರವಾಗಿ ಪ್ರಾರ್ಥನೆ ಮಾಡುತ್ತೇನೆ ಎಂದರು. ಮಾಜಿ ಸಂಸದ ಡಿ.ಕೆ.ಸುರೇಶ್ , ಶಾಸಕರಾದ ಇಕ್ಬಾಲ್ ಹುಸೇನ್ , ಎಚ್.ಸಿ.ಬಾಲಕೃಷ್ಣ, ಮಂತರ್ ಗೌಡ, ಮಾಜಿ ಶಾಸಕ ಕೆ.ರಾಜು, ಸಿ.ಎಂ.ಲಿಂಗಪ್ಪ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಮಾಜಿ ಅಧ್ಯಕ್ಷ ಸಿಎನ್ ಆರ್ ವೆಂಕಟೇಶ್ , ಬಿಎಂಐಸಿಪಿ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಮುಖಂಡ ದುಂತೂರು ವಿಶ್ವನಾಥ್ ಇತರರಿದ್ದರು.