Asianet Suvarna News Asianet Suvarna News

2000 ಎಕರೆ ನಾಲೆಡ್ಜ್‌ ಸಿಟಿ ನನ್ನ ಕನಸು: ಸಿಎಂ ಬೊಮ್ಮಾಯಿ

ನಗರದ ಸಮೀಪ ಸುಮಾರು 2000 ಎಕರೆಯಷ್ಟು ಬೃಹತ್‌ ಕ್ಯಾಂಪಸ್‌ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲ ಟಾಪ್‌ ವಿಶ್ವವಿದ್ಯಾಲಯಗಳೂ ಇರುವಂತಹ ‘ನಾಲೆಡ್ಜ್‌ ಸಿಟಿ’ ನಿರ್ಮಾಣ ಮಾಡುವ ಬಹುದೊಡ್ಡ ಕನಸು ನನ್ನದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

2000 acre Knowledge City is My Dream Says CM Basavaraj Bommai gvd
Author
First Published Mar 24, 2023, 7:22 AM IST

ಬೆಂಗಳೂರು (ಮಾ.24): ನಗರದ ಸಮೀಪ ಸುಮಾರು 2000 ಎಕರೆಯಷ್ಟು ಬೃಹತ್‌ ಕ್ಯಾಂಪಸ್‌ನಲ್ಲಿ ರಾಜ್ಯ, ದೇಶ ಹಾಗೂ ಜಾಗತಿಕ ಮಟ್ಟದ ಎಲ್ಲ ಟಾಪ್‌ ವಿಶ್ವವಿದ್ಯಾಲಯಗಳೂ ಇರುವಂತಹ ‘ನಾಲೆಡ್ಜ್‌ ಸಿಟಿ’ ನಿರ್ಮಾಣ ಮಾಡುವ ಬಹುದೊಡ್ಡ ಕನಸು ನನ್ನದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ನಗರದ ಸೆಂಟ್ರಲ್‌ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಬೆಂಗಳೂರು ನಗರ ವಿಶ್ವವಿದ್ಯಾಲಯದ ನವೀಕೃತ ಕ್ಯಾಂಪಸ್‌’ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ವೇಳೆ, ತಮ್ಮ ಕನಸಿನ ಯೋಜನೆ ಬಹಿರಂಗಪಡಿಸಿದ ಮುಖ್ಯಮಂತ್ರಿ ಅವರು. ಬೆಂಗಳೂರು ನಗರದ ಸಮೀಪದಲ್ಲೇ ಸುಮಾರು 2000 ಎಕರೆ ಪ್ರದೇಶದ ಕ್ಯಾಂಪಸ್‌ನಲ್ಲಿ ‘ನಾಲೆಡ್ಜ್‌ ಸಿಟಿ’ ನಿರ್ಮಾಣ ಮಾಡುವುದು ನನ್ನ ಕನಸಾಗಿದೆ. ಹಾರ್ವರ್ಡ್‌, ಐಐಟಿ, ಎಂಐಟಿ ಸೇರಿದಂತೆ ರಾಜ್ಯ, ದೇಶ ಮಾತ್ರವಲ್ಲ ಇಡೀ ಪ್ರಪಂಚದ ಎಲ್ಲ ಟಾಪ್‌ ವಿಶ್ವವಿದ್ಯಾಲಯಗಳನ್ನು ಈ ನಾಲೆಡ್ಜ್‌ ಸಿಟಿಯೊಳಗೆ ತರುವ ಮೂಲಕ ಬೇರೆ ರಾಜ್ಯ, ವಿದೇಶಗಳಿಗೆ ಹೋಗಿ ವ್ಯಾಸಂಗ ಮಾಡಲಾಗದ ವಿದ್ಯಾರ್ಥಿಗಳಿಗೆ ರಾಜ್ಯದಲ್ಲೇ ಅವಕಾಶ ಮಾಡಿಕೊಡುವ ಮಹತ್ವಾಕಾಂಕ್ಷೆಯ ಆಲೋಚನೆ ಈ ಯೋಜನೆಯ ಹಿಂದಿದೆ ಎಂದು ವಿವರಿಸಿದರು.

ಮೈಸೂರಲ್ಲಿ ಚಿತ್ರನಗರಿ ನಿರ್ಮಾಣ ಸದ್ಯದಲ್ಲೇ ಆರಂಭ: ಸಿಎಂ ಬೊಮ್ಮಾಯಿ

ಎನ್‌ಇಪಿ ವಿಶ್ವದಲ್ಲೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯು ವಿಶ್ವದಲ್ಲೇ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯಾಗಿದೆ. ಇದನ್ನು ಮೊದಲು ಅನುಷ್ಠಾನ ಗೊಳಿಸಿದ ರಾಜ್ಯ ಕರ್ನಾಟಕ. ಇವತ್ತಿನ ಬದಲಾದ ಜಗತ್ತು, ಮಾರುಕಟ್ಟೆ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಅನುಗುಣವಾಗಿ ಈ ನೀತಿ ಜಾರಿಗೆ ತರಲಾಗಿದೆ. ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣ ವಾಗಿ ಏಕಕಾಲಕ್ಕೆ ಎರಡು ಪದವಿ ಅಧ್ಯಯನ ಮಾಡಬಹುದು. ಕಲಾ, ವಾಣಿಜ್ಯ, ವಿಜ್ಞಾನ ಸೇರಿ ಯಾವುದೇ ವಿಭಾಗದಲ್ಲಿದ್ದರೂ ತಮ್ಮ ಆಸಕ್ತಿಯ ಬೇರೆ ವಿಭಾಗದ ಕೋರ್ಸುಗಳನ್ನೂ ಅಧ್ಯಯನಕ್ಕೆ ಬಹುಶಿಸ್ತೀಯ ವ್ಯವಸ್ಥೆ ಇದರಲ್ಲಿದೆ. 

ಒಟ್ಟಿನಲ್ಲಿ ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಬೇಕಾದ ಎಲ್ಲ ಅವಕಾಶಗಳು ಇರುವ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್‌, ವಿವಿಯ ಕುಲಪತಿ ಡಾ.ಲಿಂಗರಾಜ್‌ ಗಾಂಧಿ, ಕುಲಸಚಿವ ಶ್ರೀಧರ್‌, ಮೌಲ್ಯಮಾಪನ ಕುಲಸಚಿವ ಲೋಕೇಶ್‌, ವಿಶ್ರಾಂತ ಕುಲಪತಿ ಪ್ರೊ.ಜಾಫೆಟ್‌, ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ.ನರಸಿಂಹಮೂರ್ತಿ ಮತ್ತಿತರರು ಇದ್ದರು.

ಶೈಕ್ಷಣಿಕ ಜಿಲ್ಲೆ ಅಭಿವೃದ್ಧಿಗೆ ಅನುದಾನ: ‘ಬೆಂಗಳೂರು ನಗರ ವಿಶ್ವವಿದ್ಯಾಲಯ’ ಲಂಡನ್ನಿನ ಪಿಕಾಡಿಲಿ ವಿಶ್ವವಿದ್ಯಾಲಯಕ್ಕಿಂತ ವಿಶೇಷವಾದದ್ದು. ಏಕೆಂದರೆ ಇದು ಬೆಂಗಳೂರಿನಂತಹ ಅಂತಾರಾಷ್ಟ್ರೀಯ ನಗರದ ಕೇಂದ್ರ ಭಾಗದಲ್ಲಿದೆ. ಇದರ ವ್ಯಾಪ್ತಿಯಲ್ಲಿ ಕೆಲ ಡೀಮ್ಡ್‌ ವಿವಿಗಳು, ಆರು ಪ್ರಮುಖ ಶಿಕ್ಷಣ ಸಂಸ್ಥೆಗಳು ಸೇರಿದಂತೆ ನೂರಾರು ಕಾಲೇಜುಗಳು ಬರುತ್ತವೆ. ಒಂದೇ ಕಡೆ ಇಷ್ಟೊಂದು ಶಿಕ್ಷಣ ಸಂಸ್ಥೆಗಳು ಇರುವುದು ವಿಶ್ವದಲ್ಲೇ ಅಪರೂಪ. 

100 ಅಡಿ ಏಕಶಿಲಾ ಕೆಂಪೇಗೌಡರ ಕಲ್ಲಿನ ಪ್ರತಿಮೆ: ಸಚಿವ ಮುನಿರತ್ನ

ಹಾಗಾಗಿ ಬೆಂಗಳೂರು ನಗರ ವಿವಿಯ ಭೌಗೋಳಿಕ ವ್ಯಾಪ್ತಿಯನ್ನು ಒಂದು ಶೈಕ್ಷಣಿಕ ಜಿಲ್ಲೆಯಾಗಿ (ಎಜುಕೇಷನ್‌ ಡಿಸ್ಟ್ರಿಕ್ಟ್) ಅಭಿವೃದ್ಧಿಪಡಿಸುತ್ತೇವೆ. ಇದಕ್ಕೆ ಅಗತ್ಯ ಅನುದಾನವನ್ನು ಸರ್ಕಾರವೇ ನೀಡಲಿದೆ. ಎಲ್ಲರಿಗೂ ಅನುಕೂಲವಾಗುವಂತಹ ಬೇರೆ ಬೇರೆ ಅಧ್ಯಯನ ವಿಭಾಗಗಳಲ್ಲಿ ಹೆಚ್ಚಿನ ಕೋರ್ಸುಗಳು, ಸಾಮಾನ್ಯ ಶೈಕ್ಷಣಿಕ ಸೌಲಭ್ಯಗಳನ್ನು (ಕಾಮನ್‌ ಎಜುಕೇಷನ್‌ ಫೆಸಿಲಿಟೀಸ್‌) ಇಲ್ಲಿ ಸ್ಥಾಪಿಸಿ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಈ ಹೊಸ ಪ್ರಯೋಗ ಯಶಸ್ವಿಯಾದರೆ ರಾಜ್ಯದಲ್ಲಿ ಇನ್ನೂ ಹತ್ತು ಹಲವು ಶೈಕ್ಷಣಿಕ ಜಿಲ್ಲೆಗಳನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

Follow Us:
Download App:
  • android
  • ios