ಕರ್ನಾಟಕದಲ್ಲಿ ಮಳೆಗೆ 1,000 ಕಿಮೀ ರಸ್ತೆ ಹಾನಿ, ತುರ್ತು ದುರಸ್ತಿಗೆ 200 ಕೋಟಿ ರಿಲೀಸ್, ಸಿ.ಸಿ. ಪಾಟೀಲ್
ಕಳೆದ ವರ್ಷ ರಾಜ್ಯದಲ್ಲಿ ಜುಲೈ 11ರವರೆಗೆ 250 ಮಿ.ಮೀ. ಮಳೆಯಾಗಿದ್ದು, ಈ ವರ್ಷ ಇದೇ ಅವಧಿಯಲ್ಲಿ 350 ಮಿ.ಮೀ. ಮಳೆಯಾಗಿದೆ. 100 ಮಿ.ಮೀ. ಅಧಿಕ ಮಳೆ ಬಿದ್ದಿದೆ.
ಬೆಂಗಳೂರು(ಜು.20): ಪ್ರಸಕ್ತ ವರ್ಷ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ 141 ಕಿ.ಮೀ. ರಾಜ್ಯ ಹೆದ್ದಾರಿ, 924 ಕಿ.ಮೀ. ಜಿಲ್ಲಾ ಮುಖ್ಯರಸ್ತೆ ಸೇರಿ 1065 ಕಿ.ಮೀ. ಉದ್ದದ ರಸ್ತೆಗೆ ಹಾನಿಯಾಗಿದೆ. ಜೊತೆಗೆ 357 ಅಡ್ಡ ಮೋರಿ ಹಾಗೂ ಸಣ್ಣ ಸೇತುವೆಗಳು ಹಾನಿಗೊಳಗಾಗಿದ್ದು, ಅಂದಾಜು 754 ಕೋಟಿ ರು. ಹಾನಿಯಾಗಿದೆ. ಇವುಗಳ ದುರಸ್ತಿಗೆ ಮುಖ್ಯಮಂತ್ರಿಗಳು 200 ಕೋಟಿ ರು. ಅನುದಾನವನ್ನು ಇಲಾಖೆಗೆ ಬಿಡುಗಡೆ ಮಾಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.
ಮಂಗಳವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ರಾಜ್ಯದಲ್ಲಿ ಜುಲೈ 11ರವರೆಗೆ 250 ಮಿ.ಮೀ. ಮಳೆಯಾಗಿದ್ದು, ಈ ವರ್ಷ ಇದೇ ಅವಧಿಯಲ್ಲಿ 350 ಮಿ.ಮೀ. ಮಳೆಯಾಗಿದೆ. 100 ಮಿ.ಮೀ. ಅಧಿಕ ಮಳೆ ಬಿದ್ದಿದೆ. ಪ್ರಮುಖವಾಗಿ ಭಾರೀ ಮಳೆಯಿಂದಾಗಿ ಸಂಪಾಜೆ ಘಾಟ್, ಅರೆಬೈಲ್ ಘಾಟ್, ಆಗುಂಬೆ ಘಾಟ್, ಗೇರು ಸೊಪ್ಪೆ ಘಾಟ್ ಹಾಗೂ ಮಾಲ್‌ಘಾಟ್ ಪ್ರದೇಶಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಎರಡು ಬದಿಗಳಲ್ಲಿ ಒಟ್ಟು 63 ಸ್ಥಳಗಳಲ್ಲಿ ಭೂ ಕುಸಿತ ಇಲ್ಲವೇ ಚರಂಡಿಗಳು ಮುಚ್ಚಿ ಹೋಗಿವೆ. ಹೀಗಾಗಿ ಕೆಲವು ಘಾಟ್‌ಗಳಲ್ಲಿ ಸುರಕ್ಷತಾ ಕ್ರಮವಾಗಿ ಭಾರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ ಎಂದರು.
ಈ ಎಲ್ಲ ಘಾಟ್‌ಗಳಲ್ಲಿ ಮಳೆ ಹಾನಿಗೊಳಗಾದ ರಸ್ತೆಗಳನ್ನು ಶಾಶ್ವತವಾಗಿ ಸರಿಪಡಿಸಲು ಅಂದಾಜು 147 ಕೋಟಿ ರು.ಗಳು ಹಾಗೂ ತಾತ್ಕಾಲಿಕ ದುರಸ್ತಿಗೆ 10 ಕೋಟಿ ರು. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಪ್ರಸಕ್ತ ಸಾಲಿನ ರಸ್ತೆ ಸುರಕ್ಷತಾ ವಾರ್ಷಿಕ ಯೋಜನೆಯಡಿ ಕೇಂದ್ರ ಭೂ ಸಾರಿಗೆ ಸಚಿವಾಲಯದಿಂದ 98 ಕೋಟಿ ರು.ಗಳ ಕಾಮಗಾರಿಗೆ ಅನುಮೋದನೆ ನೀಡಿದೆ ಎಂದು ಅವರು ಹೇಳಿದರು.
ಕರ್ನಾಟಕ, ಕೇರಳ ಮಧ್ಯಪ್ರದೇಶ, ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ
ಕಳೆದ ವರ್ಷದ ನವೆಂಬರ್‌ನಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೊಳಗಾದ ಇಲಾಖೆಯ ರಸ್ತೆ, ಸೇತುವೆಗಳ ಪುನರ್ ನಿರ್ಮಾಣ. ದುರಸ್ತಿಗೆ ಸರ್ಕಾರ 669 ಕೋಟಿ ರು. ಬಿಡುಗಡೆ ಮಾಡಿದೆ. ಈ ಮೊತ್ತದಲ್ಲಿ 1248 ಕಾಮಗಾರಿ ಅನುಷ್ಠಾನಗೊಳಿಸುತ್ತಿದ್ದು, ಈಗಾಗಲೇ 617 ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿ ಇವೆ ಎಂದು ಸಚಿವ ಸಿ.ಸಿ. ಪಾಟೀಲ್ ವಿವರಿಸಿದರು.
ಶಿರಾಡಿ ಘಾಟಿಯಲ್ಲಿ ಏಕಮುಖ ಸಂಚಾರ
ರಾಜಧಾನಿ ಬೆಂಗಳೂರು ಹಾಗೂ ಮಂಗಳೂರನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಯಲ್ಲಿರುವ ಶಿರಾಡಿ ಘಾಟ್‌ನ ದೋಣಿಗಲ್ ಬಳಿ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಆಗಿರುವ ತೊಂದರೆ ಪರಿಹರಿಸಲು ತಕ್ಷಣದಿಂದ ತಾತ್ಕಾಲಿಕವಾಗಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.