ವಿಧಾನಸಭೆ (ಮಾ.13):  ರಾಜ್ಯದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಸ್ತುತ ಎರಡು ಸಾವಿರ ವೈದ್ಯರ ಕೊರತೆ ಇದ್ದು, ಮುಂದಿನ ಎರಡು ತಿಂಗಳಲ್ಲಿ ಈ ಎಲ್ಲಾ ಹುದ್ದೆ ಭರ್ತಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌ ಸದಸ್ಯ ಎ.ಟಿ.ರಾಮಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 2000 ವೈದ್ಯರ ಕೊರತೆ ಇದ್ದು, ಇನ್ನೆರಡು ತಿಂಗಳಲ್ಲಿ ಅಗತ್ಯ ವೈದ್ಯರ ಭರ್ತಿ ಮಾಡಲಾಗುವುದು. ಇದಕ್ಕಾಗಿ ಕಳೆದ ಫೆ.6ರಂದು ನೇಮಕಾತಿ ಕರಡು ಅಧಿನಿಯಮ ಪ್ರಕಟಿಸಿದ್ದು, ಶೀಘ್ರ ಅಂತಿಮ ನಿಯಮಗಳನ್ನು ಪ್ರಕಟಿಸಿ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದರು.

ವಿದೇಶದಲ್ಲಿರುವ ಕನ್ನಡಿಗರು ಸುರಕ್ಷಿತ ವಾಪಸ್‌: ರಾಮುಲು

ಈ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಯಾವುದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅರ್ಹ ವೈದ್ಯರು ಮುಂದೆ ಬಂದರೆ ಪರಿಶೀಲಿಸಿ ಗುತ್ತಿಗೆ ಆಧಾರದಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.