'ವಿಶ್ವವಿಖ್ಯಾತ ಜೋಗ ಪ್ರವಾಸಿ ಸೌಲಭ್ಯಕ್ಕೆ 185 ಕೋಟಿ ರು.'

* ಕೇರಳ, ಗೋವಾದಿಂದ ಜಲಮಾರ್ಗದಲ್ಲಿ ಬರುವ ಪ್ರವಾಸಿಗರಿಗೆ ರಸ್ತೆ ಮಾರ್ಗ ವ್ಯವಸ್ಥೆ
* ಸಾವಿರ ಪ್ರವಾಸಿಗರು ವಾಸ್ತವ್ಯ ಹೂಡಲು ಎರಡು ಹೋಟೆಲ್‌ ನಿರ್ಮಾಣ 
* ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶ 
 

185 Crore Rs to Jog Falls Tourist Facility Says Minister CP Yogeeshwara grg

ಬೆಂಗಳೂರು(ಜೂ.26):  ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ 185 ಕೋಟಿ ರು. ವೆಚ್ಚದಲ್ಲಿ ಪ್ರವಾಸಿ ಸೌಲಭ್ಯಗಳನ್ನು ಕಲ್ಪಿಸಲು ಟೆಂಡರ್‌ ಅಂತಿಮವಾಗಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಪ್ರವಾಸೋದ್ಯಮ ಸಚಿವರಾದ ಸಿ.ಪಿ. ಯೋಗೇಶ್ವರ್‌ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ ಸಂಸ್ಥೆಯಿಂದ ಈ ಬೃಹತ್‌ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇರಳ ಹಾಗೂ ಗೋವಾ ರಾಜ್ಯಗಳಿಂದ ಹೊನ್ನಾವರದವರೆಗೆ ಜಲಮಾರ್ಗದಲ್ಲಿ ಬರುವ ಪ್ರವಾಸಿಗರು, ಅಲ್ಲಿಂದ ಜೋಗ ಜಲಪಾತಕ್ಕೆ 35 ಕಿ.ಮೀ. ರಸ್ತೆ ಮಾರ್ಗದಲ್ಲಿ ಆಗಮಿಸಲು ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.

ಸರ್ಕಾರಿ ರಜಾ ದಿನಗಳಂದು ಲಿಂಗನಮಕ್ಕಿ ಜಲಾಶಯದಿಂದ ಪ್ರಥಮ ಹಂತವಾಗಿ 200 ಕ್ಯೂಸೆಕ್ಸ್‌ ನೀರನ್ನು ಹರಿಸಿ ಜೋಗದ ಸೊಬಗನ್ನು ಪ್ರವಾಸಿಗರಿಗೆ ಉಣಿಸಲಾಗುವುದು. ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣವನ್ನು 300 ಕ್ಯೂಸೆಕ್ಸ್‌ ಗೆ ಹೆಚ್ಚಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಸಾವಿರ ಪ್ರವಾಸಿಗರು ವಾಸ್ತವ್ಯ ಹೂಡಲು ಎರಡು ಹೋಟೆಲ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಪ್ರತಿಷ್ಠಿತ ಯೋಜನೆಯಾಗಿರುವ ಹೆಲಿ ಟೂರಿಸಂ ಸರ್ಕೀಟ್‌ಗೆ ಜೋಗ ಜಲಪಾತವನ್ನು ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ ವರ್ಷದ 365 ದಿನಗಳು ಜೋಗದ ಸೊಬಗನ್ನು ರಾಜ್ಯ, ಹೊರ ರಾಜ್ಯಗಳು ಹಾಗೂ ದೇಶ ವಿದೇಶಗಳ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು ಎಂದರು.

ಜೋಗ ಜಲಪಾತದ ಯೋಜನೆಯೊಂದನ್ನು ರದ್ದು ಮಾಡಿದ ಸರ್ಕಾರ

ಕೋವಿಡ್‌ ಲಾಕ್‌ಡೌನ್‌ ನಿಂದ ಮುಚ್ಚಲ್ಪಟ್ಟಿರುವ ಪ್ರವಾಸೋದ್ಯಮ ಕ್ಷೇತ್ರಗಳು ಮುಂದಿನ ವಾರದಿಂದ ಸಾರ್ವಜನಿಕರಿಗೆ ಹಾಗೂ ಜನಸಾಮಾನ್ಯರಿಗೆ ತೆರೆಯಲಾಗುವುದು. ಈ ನಿಟ್ಟಿನಲ್ಲಿ ಸಭೆ ನಡೆಸಲಾಗಿದೆ. ಕೋವಿಡ್‌ ಮಾರ್ಗಸೂಚ ಅಳವಡಿಸಿಕೊಂಡು ಪ್ರವಾಸೋದ್ಯಮಕ್ಕೆ ಅನುವು ಮಾಡಲಾಗುವುದು. ಜಂಗಲ್‌ ಲಾಡ್ಜ್‌ ಸಹ ತೆರೆಯಲಾಗುವುದು. ಪ್ರವಾಸೋದ್ಯಮ ವಲಯಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ರು. ನೀಡಿದರೆ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಿ ಮತ್ತಷ್ಟುವೃದ್ಧಿಪಡಿಸಬಹುದು ಹಾಗೂ ಉದ್ಯೋಗಗಳನ್ನು ಸೃಷ್ಟಿಮಾಡಬಹುದು. ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೆ ಆಯವ್ಯಯದಲ್ಲಿ ಕಡಿಮೆ ಅನುದಾನ ಒದಗಿಸಲಾಗಿದೆ. ಹೀಗಾಗಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಹಲವು ಯೋಜನೆ ಅನುಷ್ಠಾನಗೊಳಿಸಲು ಮಾತುಕತೆ ನಡೆಸಿದ್ದೇನೆ ಎಂದು ಯೋಗೇಶ್ವರ್‌ ಮಾಹಿತಿ ನೀಡಿದರು.

ಪ್ರವಾಸೋದ್ಯಮ ಕಾರ್ಯದರ್ಶಿ ಪಂಕಜ ಕುಮಾರ್‌ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧು ರೂಪೇಶ್‌ ಮತ್ತಿತರ ಹಿರಿಯ ಅ​ಧಿಕಾರಿಗಳು ಉಪಸ್ಥಿತರಿದ್ದರು.

ಟೂರಿಸಂಗೆ ಹೆಚ್ಚಿನ ನೆರವು ನೀಡಲು ಸಿಎಂಗೆ ಮನವಿ

ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಇಂಧನ ಸೇರಿದಂತೆ ಬೇರೆ ಬೇರೆ ಇಲಾಖೆಗಳಿಗೆ ಪ್ರತಿ ಸಚಿವ ಸಂಪುಟ ಸಭೆಯಲ್ಲಿ ಸಾವಿರಾರು ಕೋಟಿ ರುಪಾಯಿ ಮೊತ್ತದ ಟೆಂಡರ್‌ಗಳಿಗೆ ಅನುಮೋದನೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ, ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರಕ್ಕೂ ಹೆಚ್ಚಿನ ಹಣ ಒದಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದು ಇದೇ ವೇಳೆ ಸಚಿವ ಯೋಗೇಶ್ವರ್‌ ತಿಳಿಸಿದರು.

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ ಆರಂಭವಾದ ನಂತರ ದೇಶದ ಪ್ರತಿಷ್ಠಿತ ಮೂರು ವಿಮಾನ ನಿಲ್ದಾಣಗಳ ಪಟ್ಟಿಗೆ ಬೆಂಗಳೂರು ವಿಮಾನ ನಿಲ್ದಾಣ ಸೇರಲಿದೆ. ಸುಂದರ ಕಡಲ ಕಿಲಾರೆ, ಪ್ರಕೃತಿ ಸಂಪತ್ತು, ಪುರಾಣ ಪ್ರಸಿದ್ಧ ದೇವಾಲಯಗಳು, ನದಿ ಹಾಗೂ ಜಲಾಶಯಗಳನ್ನು ಹೊಂದಿರುವ ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ ಎಂದರು.
 

Latest Videos
Follow Us:
Download App:
  • android
  • ios