ಬೆಂಗಳೂರು (ಸೆ.04) : ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಜೋಗ ಜಲಪಾತವನ್ನು ‘ಸರ್ವಋುತು ಜಲಪಾತ’ವನ್ನಾಗಿ ಮಾಡುವ ಕಾಂಗ್ರೆಸ್‌ ಸರ್ಕಾರದ ಅವಧಿಯ ಯೋಜನೆಯನ್ನು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರದ್ದುಪಡಿಸಲಾಗಿದೆ.

'ಜೋಗಕ್ಕೆ 150 ಕೋಟಿ ರು. ವೆಚ್ಚ​ದ​ಲ್ಲಿ ಮೆರುಗು' ...

ದುಬೈ ಮೂಲದ ಕನ್ನಡಿಗರಾದ ಬಿ.ಆರ್‌. ಶೆಟ್ಟಿಅವರು 450 ಕೋಟಿ ರು. ತೊಡಗಿಸಿ ಜೋಗ ಜಲಪಾತವನ್ನು ಸರ್ವಋುತು ಜಲಪಾತವನ್ನಾಗಿ ಅಭಿವೃದ್ಧಿಪಡಿಸಲು ಅಂದಿನ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಬಳಿಕ ಸ್ಥಳೀಯ ಪರಿಸರವಾದಿಗಳು ಜಲಪಾತವನ್ನು ಸರ್ವಋುತು ಜಲಪಾತವನ್ನಾಗಿ ಅಭಿವೃದ್ಧಿಪಡಿಸಲು ನೀರನ್ನು ಮತ್ತೆ ಮೇಲಕ್ಕೆ ಪಂಪ್‌ ಮಾಡಬೇಕಾಗುತ್ತದೆ. ಈ ವೇಳೆ ಸುರಂಗ ಕೊರೆಯುವುದು, ಅಭಿವೃದ್ಧಿ ಚಟುವಟಿಕೆಯಿಂದ ಜಲಪಾತದ ಮೂಲ ಸ್ವರೂಪಕ್ಕೆ ದಕ್ಕೆ ಬರುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಯಾವುದೇ ಬೆಳವಣಿಗೆಗಳು ನಡೆದಿರಲಿಲ್ಲ.

ಜೋಗ ಜಲಪಾತಕ್ಕೆ ಹೋಗುವ ಪ್ರವಾಸಿಗರೇ ಇಲ್ಲೊಮ್ಮೆ ಗಮನಿಸಿ

ಇದೀಗ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಜೋಗ ಜಲಪಾತ ಸರ್ವಋುತು ಯೋಜನೆ’ ರದ್ದುಪಡಿಸಿರುವುದಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಅಭಿವೃದ್ಧಿಗೆ ಈ ಹಿಂದೆ ಬಿಆರ್‌ಎಸ್‌ ಸಂಸ್ಥೆಯು 450 ಕೋಟಿ ರು. ವೆಚ್ಚದಲ್ಲಿ ಸರ್ವಋುತು ಜಲಪಾತವನ್ನಾಗಿ ಮಾಡಲು ಗುತ್ತಿಗೆ ಪಡೆದಿತ್ತು. ಬಳಿಕ ಯಾವುದೇ ಬೆಳವಣಿಗೆ ಆಗಿಲ್ಲ. ಹೀಗಾಗಿ ಯೋಜನೆ ರದ್ದುಪಡಿಸಿ ಕರ್ನಾಟಕ ವಿದ್ಯುತ್‌ ನಿಗಮದ ಮೂಲಕ ಒಟ್ಟು 120 ಕೋಟಿ ರು.ವೆಚ್ಚದಲ್ಲಿ ರೋಪ್‌ ವೇ, ಉದ್ಯಾನವನ ನಿರ್ಮಾಣ, ಜಲಕ್ರೀಡೆ, ಅಗತ್ಯ ಸೇವೆಗಳ ಕಟ್ಟಡ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ತೀರ್ಮಾನ ಮಾಡಲಾಗಿದೆ ಎಂದು ವಿವರಿಸಿದರು.