ಶಾಮಿನಿಸಂ ಪ್ರಭಾವ, ಬೆಂಗಳೂರಿನ 17 ವರ್ಷದ ಬಾಲಕಿ 2 ತಿಂಗಳಿನಿಂದ ನಿಗೂಢವಾಗಿ ನಾಪತ್ತೆ!
* ಶಾಮಿನಿಸಮ್ ಗೆ ಸೇರಿಕೊಳ್ತೇನೆ ಅಂತಾ ಯುವತಿ ನಾಪತ್ತೆ..!
* ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ..
* ಕಳೆದ ಅಕ್ಟೋಬರ್ 31 ರಂದು ಮನೆ ಬಿಟ್ಟು ಹೊರ ಹೋಗಿರುವ ಯುವತಿ..
* ಈ ಸಂಬಂಧ ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ನೀಡಿದ್ರು..
ಬೆಂಗಳೂರು(ಡಿ.31): ಶಾಮಿನಿಸಂನೆಡೆ ಆಕರ್ಷಿತಳಾಗಿ ಆತ್ಮಗಳ ಜೊತೆ ಮಾತನಾಡುವ ಇಂಗಿತ ವ್ಯಕ್ತಪಡಿಸಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿರುವ ಪ್ರಕರಣ ಸುಬ್ರಮಣ್ಯ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಾಲಕಿ ಕಳೆದ ಎರಡು ತಿಂಗಳಿನಿಂದ ಕಣ್ಮರೆಯಾಗಿದ್ದು, ಸದ್ಯ ಈ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಹೌದು ಕಳೆದ ಅಕ್ಟೋಬರ್ 31 ರಂದು ಮನೆ ಬಿಟ್ಟು ಹೊರ ಹೋಗಿರುವ 17 ವರ್ಷದ ಯುವತಿ ಅನುಷ್ಕಾ, ಎರಡು ತಿಂಗಳಾದರೂ ಮನೆಗೆ ಬಂದಿಲ್ಲ. ಮಾನಸಿಕವಾಗಿ ಕುಗ್ಗಿದ್ದ ಈಕೆ ಎರಡು ಜತೆ ಬಟ್ಟೆ ಹಾಗೂ 2,500 ರೂಪಾಯಿ ತೆಗೆದುಕೊಂಡು ಮನೆ ಬಿಟ್ಟಿದ್ದಳೆನ್ನಲಾಗಿದೆ. ತಮ್ಮ ಮಗಳ ನಾಪತ್ತೆಯ ಹಿಂದೆ ಮಾಟ-ಮಂತ್ರ ದ ಕೈವಾಡವಿದೆ ಎಂದು ಹೆತ್ತವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಾಲಕಿ 12ನೇ ತರಗತಿಯಲ್ಲಿ ತೇರ್ಗಡೆಯಾದ ಬಳಿಕ ಶಾಮಿನಿಸಂನತ್ತ ಆಕರ್ಷಿತಳಾಗಿದ್ದಳೆನ್ನಲಾಗಿದೆ. ಆಕೆಯ ಪೋಷಕರು ಆಧ್ಯಾತ್ಮಿಕ ಜೀವನ ತರಬೇತುದಾರರಾಗಿದ್ದು, ಸೈಕೆಡೆಲಿಕ್ ಶಿಕ್ಷಣತಜ್ಞರಿಂದ ಪ್ರಭಾವಿತಳಾಗಿದ್ದರು. ಆ ಯುವತಿ ಶಾಮಿನಿಸಂ ಅನ್ನು ಅಭ್ಯಾಸ ಮಾಡುವ ಬಯಕೆಯ ಬಗ್ಗೆ ತನ್ನ ತಂದೆ-ತಾಯಿಯ ಜೊತೆ ಮಾತನಾಡಿದ್ದಳು.
ಇನ್ನು ಮಗಳ ಬಗ್ಗೆ ಮಾಹಿತಿ ನೀಡಿರುವ ಬಾಲಕಿಯ ಪೋಷಕರು ' ಕಳೆದ ಮೂರು ತಿಂಗಳ ಹಿಂದೆ ಮಗಳ ನಡವಳಿಕೆಯಲ್ಲಿ ಕೆಲ ಬದಲಾವಣೆಗಳಾಗಿತ್ತು. ಆದರೆ ಆಕೆಯ ವಯಸ್ಸಿನಲ್ಲಿ ಇದೆಲ್ಲಾ ಸಹಜ ಎಂದು ಸುಮ್ಮನಾಗಿದ್ದೆವು. ಒಂಟಿಯಾಗಿರಲು ಬಯಸುತ್ತಿದ್ದಳು. ಮನೆಗೆ ಬಂದ ಕೂಡಲೇ ರೂಮ್ ಸೇರಿಕೊಳ್ಳೋದು, ಯಾರೊಂದಿಗೂ ಬೆರೆಯುತ್ತಿರಲಿಲ್ಲ, ಶಾಮಿನಿಸಮ್ ಗೆ ಸಂಬಂಧಿಸಿದಂತೆ ಸಾಕಷ್ಟು ತಿಳಿದುಕೊಳ್ಳಲು ಯತ್ನಿಸುತ್ತಿದ್ದಳು. ಹೀಗಾಗಿ ಒಮ್ಮೆ ಮನೋವೈದ್ಯರ ಬಳಿಯೂ ಕರೆದೊಯ್ದಿದ್ದೆವು. ಇದಾದ ಬಳಿಕ ಆಕೆ ನಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿದಳು. ಸದಾ ಆನ್ಲೈನ್ನಲ್ಲಿ ಮಾಟ-ಮಂತ್ರದ ಬಗ್ಗೆ ವಿಡಿಯೋ ನೋಡುತ್ತಿದ್ದಳು. ಗೂಗಲ್ನಲ್ಲಿ ಅದೇ ವಿಚಾರವಾಗಿ ಓದುತ್ತಿದ್ದಳು. ಇದೆಲ್ಲ ಆದ ಬಳಿಕ ನಾವೂ ಆಕೆಯನ್ನು ಆಕೆಯಷ್ಟಕ್ಕೆ ಬಿಟ್ಟಿದ್ದೆವು. ಹೀಗಿರುವಾಗ ಏಕಾಏಕಿ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ತಿಳಿಸಿದ್ದಾರೆ.
ಅಲ್ಲದೇ ನಮ್ಮ ಮಗಳಿಗೆ ಮನೆ ತೊರೆಯುವ ನಿರ್ಧಾರ ತೆಗೆದುಕೊಳ್ಳುವಂತೆ ಯಾರೋ ಪ್ರಭಾವ ಮಾಡಿದ್ದಾರೆ. ಆಕೆ ಅಪ್ರಾಪ್ತಳಾಗಿದ್ದು, ಅವಳು ತನ್ನ ಸ್ವಂತ ನಿರ್ಣಯದ ನಿರ್ಧಾರವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲದಿರಬಹುದು. ಅವಳನ್ನು ಯಾರೋ ಪ್ರಭಾವಿಸಿದ್ದಾರೆ ಎಂದು ಬಾಲಕಿ ತಂದೆ ಅಭಿಷೇಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಂಬಂಧ ಪೊಲೀಸರು ಭಾರೀ ತಲೆಕೆಡಿಸಿಕೊಂಡಿದ್ದು, ಹಲವು ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಆಕೆಯ ಚಲನವಲನವನ್ನು ಸಿಸಿಟಿವಿ ಕ್ಯಾಮೆರಾ ಮೂಲಕ ವಿಶ್ಲೇಷಿಸಿದ್ದೇವೆ ಎಂದು ಬೆಂಗಳೂರು ಉತ್ತರದ ಉಪ ಪೊಲೀಸ್ ಆಯುಕ್ತ ವಿನಾಯಕ ಪಾಟೀಲ್ ಹೇಳಿದ್ದಾರೆ. ಸುಮಾರು ಎರಡು ತಿಂಗಳಿನಿಂದ ತಮ್ಮ ಮಗಳ ಸುಳಿವಿಗಾಗಿ ಕಾಯುತ್ತಿದ್ದ ಪೋಷಕರು ಇದೀಗ ಪೊಲೀಸರೊಂದಿಗೆ ಕೆಲಸ ಮಾಡುವುದರ ಜೊತೆಗೆ ಸಾರ್ವಜನಿಕರ ಮೊರೆ ಹೋಗಿದ್ದಾರೆ. ಅವರು ತಮ್ಮ ಮಗಳನ್ನು ಹುಡುಕಲು ಸಹಾಯ ಮಾಡುವಂತೆ ಟ್ವಿಟರ್‌ನಲ್ಲಿ ಮನವಿ ಮಾಡುವ ಮೂಲಕ ಸಾರ್ವಜನಿಕರಿಂದ ಸಹಾಯವನ್ನು ಕೋರಿದ್ದಾರೆ.
ಏನಿದು ಶಾಮಿನಿಸಂ?
ಶಾಮಿನಿಸಂ (ಆತ್ಮಗಳೊಂದಿಗೆ ಮಾತನಾಡುವುದು) ಒಂದು ಬಗೆಯ ಧಾರ್ಮಿಕ ಆಚರಣೆಯಾಗಿದ್ದು, ಅದರ ಅಭ್ಯಾಸ ಮಾಡುವವರು ಅರೆಪ್ರಜ್ಞಾವಸ್ಥ ಸ್ಥಿತಿಯಲ್ಲಿ ಆತ್ಮಗಳೊಂದಿಗೆ ಮಾತುಕತೆ ನಡೆಸುತ್ತಾರೆ ಎಂಬ ನಂಬಿ ಇದೆ. ಇದು ಪುರಾತನ ಹೀಲಿಂಗ್ ವಿಧಾನ ಎನ್ನಲಾಗಿದೆ. ಈ ವಿಧಾನದ ಮೂಲಕ ಆಧ್ಯಾತ್ಮಿಕ ಮತ್ತು ದೈಹಿಕ ಸಮಸ್ಯೆಗಳನ್ನು ಗುಣಪಡಿಸಲಾಗುತ್ತದೆ ಎಂಬ ನಂಬಿಕೆಯೂ ಇದೆ.