ಕಳೆದೊಂದು ತಿಂಗಳಿನಿಂದ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದ ರಾಜ್ಯದಲ್ಲಿ ಇದೀಗ ಸೋಂಕಿತರ ಸಾವಿನ ಪ್ರಮಾಣವೂ ಏರುತ್ತಿದೆ. ಯಾವುದೇ ಸಹ ಅಸ್ವಸ್ಥತೆ ಹೊಂದಿಲ್ಲದ 20 ವರ್ಷದ ಯುವತಿಯೊಬ್ಬಳು ಸೇರಿದಂತೆ ಬುಧವಾರ ಒಟ್ಟು ಐವರು ಸೋಂಕಿತರು ಮರಣವನ್ನಪ್ಪಿದ್ದಾರೆ. 

ಬೆಂಗಳೂರು (ಆ.11): ಕಳೆದೊಂದು ತಿಂಗಳಿನಿಂದ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ಕಂಡಿದ್ದ ರಾಜ್ಯದಲ್ಲಿ ಇದೀಗ ಸೋಂಕಿತರ ಸಾವಿನ ಪ್ರಮಾಣವೂ ಏರುತ್ತಿದೆ. ಯಾವುದೇ ಸಹ ಅಸ್ವಸ್ಥತೆ ಹೊಂದಿಲ್ಲದ 20 ವರ್ಷದ ಯುವತಿಯೊಬ್ಬಳು ಸೇರಿದಂತೆ ಬುಧವಾರ ಒಟ್ಟು ಐವರು ಸೋಂಕಿತರು ಮರಣವನ್ನಪ್ಪಿದ್ದಾರೆ. 24,504 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು 1,680 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ ಶೇ.6.80ಕ್ಕೆ ಏರಿದೆ. 10,351 ಸಕ್ರಿಯ ಪ್ರಕರಣಗಳಿವೆ.

ಮಾರ್ಚ್‌ 18 ರಂದು ಐವರು ಸೋಂಕಿತರು ಮರಣವನ್ನಪ್ಪಿದ್ದರು. ಇದಾಗಿ 145 ದಿನಗಳ ಬಳಿಕ ಮೊದಲ ಬಾರಿಗೆ ದೈನಂದಿನ ಸಾವಿನ ಪ್ರಮಾಣ 5ಕ್ಕೆ ಏರಿಕೆ ಕಂಡಿದೆ. ಸಾವಿನ ಸಂಖ್ಯೆಯ ಏರಿಕೆಯೊಂದಿಗೆ ದಕ್ಷಿಣ ಕನ್ನಡದಲ್ಲಿ 20 ವರ್ಷದ ಯುವತಿಯೊಬ್ಬಳು ಸಹ ಅಸ್ವಸ್ಥತೆ ಹೊಂದಿಲ್ಲದಿದ್ದರೂ ಮರಣವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ವಿಷಮ ಶೀತಜ್ವರದಿಂದ ಬಳಲುತ್ತಿದ್ದ ಯುವತಿ ಆ.3ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಿಸದೆ ಆ. 8 ಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಮರಣವನ್ನಪ್ಪಿದ್ದಾಳೆ. 

Corona Crisis: ಕರ್ನಾಟಕದಲ್ಲಿ ಪರೀಕ್ಷೆ ಇಳಿಕೆ: ಕೋವಿಡ್‌ ಕೇಸ್‌ ಕೂಡ ಭಾರಿ ಇಳಿಕೆ

ಉಳಿದಂತೆ ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡ ಮತ್ತು ರಾಯಚೂರು ಜಿಲ್ಲೆಯಲ್ಲಿ ಸಹ ಅಸ್ವಸ್ಥತೆ ಹೊಂದಿದ್ದ ತಲಾ ಒಬ್ಬ ಮಹಿಳೆ ಅಸುನೀಗಿದ್ದಾರೆ. ಹಾಸನ 65, ಮೈಸೂರು 54, ಬೆಳಗಾವಿ ಮತ್ತು ಮಂಡ್ಯ ತಲಾ 43, ಬಳ್ಳಾರಿ 42, ಧಾರವಾಡ 39, ಶಿವಮೊಗ್ಗ, ಕಲಬುರಗಿ ತಲಾ 33, ರಾಯಚೂರು 32 ಮತ್ತು ಬಾಗಲಕೋಟೆಯಲ್ಲಿ 30 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ 40.24 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.73 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,128 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ: ರಾಜ್ಯದಲ್ಲಿ ಬುಧವಾರ 1.21 ಲಕ್ಷ ಮಂದಿ ಕೋವಿಡ್‌ - 19ರ ವಿರುದ್ಧ ಲಸಿಕೆ ಪಡೆದಿದ್ದಾರೆ. 2,555 ಮಂದಿ ಮೊದಲ ಡೋಸ್‌, 11,323 ಮಂದಿ ಎರಡನೇ ಡೋಸ್‌ ಮತ್ತು 1.07 ಲಕ್ಷ ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ಈವರೆಗೆ 11.70 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ ಪಾಸಿಟಿವ್‌ಗಿಂತ ಗುಣಮುಖ ಸಂಖ್ಯೆ ಹೆಚ್ಚು: ನಗರದಲ್ಲಿ ಬುಧವಾರ 1,058 ಕೊರೋನಾ ಪ್ರಕರಣ ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.7.07ರಷ್ಟುದಾಖಲಾಗಿದೆ. 1342 ಮಂದಿ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೃತಪಟ್ಟ ವರದಿಯಾಗಿಲ್ಲ. ನಗರದಲ್ಲಿ ಸದ್ಯ 7049 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 56 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 19 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 5041 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 

ಕೋವಿಡ್‌ ಲಸಿಕೆ: ಫ್ರೀ 3ನೇ ಡೋಸ್‌ಗೆ ಭಾರೀ ಬೇಡಿಕೆ

129 ಮಂದಿ ಮೊದಲ ಡೋಸ್‌, 1189 ಮಂದಿ ಎರಡನೇ ಡೋಸ್‌ ಮತ್ತು 3726 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 15,076 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 11821 ಆರ್‌ಟಿಪಿಸಿಆರ್‌ ಹಾಗೂ 3,255 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ. ಬುಧವಾರ ನಗರದಲ್ಲಿ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ಪ್ರದೇಶ ಸೃಷ್ಟಿಯಾಗಿಲ್ಲ. ಪಶ್ಚಿಮ ವಲಯದಲ್ಲಿ ಎರಡು ಪ್ರದೇಶಗಳು ಕಂಟೈನ್ಮೆಂಟ್‌ನಿಂದ ಮುಕ್ತವಾಗಿವೆ. ಒಟ್ಟು 21 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.