ಮತ್ತೆ 14 ಶಿಕ್ಷಕರಿಗೆ ಕೊರೋನಾ| ಶಾಲೆ ಶುರುವಾಗಿ 2 ದಿನದಲ್ಲಿ 16 ಶಿಕ್ಷಕರಿಗೆ ಸೋಂಕು, ಆತಂಕ| 2ನೇ ದಿನ ಹಾಜರಾತಿ ಹೆಚ್ಚಳ, ನಾಳೆಯಿಂದ ಮತ್ತೂ ಹೆಚ್ಚುವ ನಿರೀಕ್ಷೆ
ಬೆಂಗಳೂರು(ಜ.03): ರಾಜ್ಯದಲ್ಲಿ ಹತ್ತು ತಿಂಗಳ ಬಳಿಕ ಶಾಲಾ-ಕಾಲೇಜು ಆರಂಭವಾದ ಬೆನ್ನಲ್ಲೇ ಶಿಕ್ಷಕರಲ್ಲಿ ಕೊರೋನಾ ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ವಿದ್ಯಾರ್ಥಿಗಳು, ಪಾಲಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಶಾಲಾ-ಕಾಲೇಜು ಆರಂಭವಾದ ಮೊದಲ ದಿನ ಇಬ್ಬರು ಶಿಕ್ಷಕರಲ್ಲಿ ಸೋಂಕು ಪತ್ತೆಯಾಗಿತ್ತು, ಇದೀಗ 2ನೇ ದಿನವಾದ ಶನಿವಾರ ಗದಗದಲ್ಲಿ 10 ಮಂದಿ ಸೇರಿ 14 ಶಿಕ್ಷಕರಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ 2 ದಿನದಲ್ಲಿ 16 ಶಿಕ್ಷಕರಿಗೆ ಸೋಂಕು ದೃಢಪಟ್ಟಂತಾಗಿದೆ.
ಶಾಲೆಗೆ ಹಾಜರಾಗುವ ಮುನ್ನ ಶಿಕ್ಷಕರು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡು ಬರಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿತ್ತು. ಅದರಂತೆ ಪರೀಕ್ಷೆ ಮಾಡಿಕೊಂಡಿದ್ದ ಶಿಕ್ಷಕರಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಬ್ಬರಿಗೆ ಶನಿವಾರ ಸೋಂಕು ದೃಢವಾಗಿತ್ತು. ಈಗ ಗದಗ ಜಿಲ್ಲೆಯ 10, ಹಾಸನ ಜಿಲ್ಲೆಯ 3 ಮತ್ತು ಹಾವೇರಿ ಜಿಲ್ಲೆಯ ಒಬ್ಬ ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ.
ಮೊನ್ನೆ ಪಾಠ ಮಾಡಿದ್ದರು?:
ಗದಗದಲ್ಲಿ ನಗರದ 4 ಶಾಲೆಯ 9 ಮತ್ತು ನರಗುಂದ ತಾಲೂಕಿನ ಜಗಾಪುರದ ಶಾಲೆಯ ಒಬ್ಬ ಶಿಕ್ಷಕರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರಾರಯರೂ ಕರ್ತವ್ಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಸದ್ಯ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಒಂದು ವಾರಗಳ ಕಾಲ ಈ ಶಿಕ್ಷಕರು ಕರ್ತವ್ಯ ನಿರ್ವಹಿಸಿದ್ದ 5 ಶಾಲೆಗಳನ್ನು ಬಂದ್ ಮಾಡುವಂತೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಇವರ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಹೋಮ್ ಕ್ವಾರಂಟೈನ್‌ಗೊಳಪಡಿಸುವಂತೆ ಸೂಚಿಸಲಾಗಿದೆ. ಶಾಲೆಯನ್ನು ಸ್ಯಾನಿಟೈಸ್ ಮಾಡಲಾಗಿದೆ.
ಇನ್ನು ಹಾಸನ ಜಿಲ್ಲೆಯಲ್ಲಿ ಸೋಂಕು ಪತ್ತೆಯಾದ ಮೂವರು ಶಿಕ್ಷಕರು ಕೋವಿಡ್ ವರದಿ ಕೈಸೇರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಅದೇ ರೀತಿ ಹಾವೇರಿಯ ಶಿಗ್ಗಾಂವಿ ತಾಲೂಕು ಅಂದಲಗಿ ಸರ್ಕಾರಿ ಶಾಲೆಯ ಶಿಕ್ಷಕ ಜ್ವರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಗೈರಾಗಿದ್ದರು ಎಂದು ತಿಳಿದು ಬಂದಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Jan 3, 2021, 7:48 AM IST